ಶುಕ್ರವಾರ, ಜುಲೈ 1, 2022
25 °C
ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ವಚನಗಳ ಸಂಶೋಧನೆ ಅಗತ್ಯ: ಉಪನ್ಯಾಸಕ ಪ್ರಕಾಶ್ ಬಾರ್ಕಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಅಂಬಿಗರ ಚೌಡಯ್ಯನವರು ವಿಶ್ವಮಾನವತಾವಾದಿ ಹಾಗೂ ದಾರ್ಶನಿಕರು. ಅವರ ವಚನಗಳು ನಿಷ್ಠುರ ಹಾಗೂ ಕಠೋರವಾಗಿದ್ದವು. ಸಾಮಾಜಿಕ ವಿಡಂಬನೆ ಜೊತೆಗೆ ಸಾತ್ವಿಕ ಚಿಂತನೆಗಳನ್ನು ವ್ಯಕ್ತಮಾಡುವ ಸಂದೇಶಗಳನ್ನು ಹೊಂದಿದ್ದವು’ ಎಂದು ಉಪನ್ಯಾಸಕ ಪ್ರಕಾಶ್ ಬಾರ್ಕಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ನಡೆದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘ ಸಹಯೋಗದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಅಂಬಿಗರ ಚೌಡಯ್ಯನವರ ಬಹಳಷ್ಟು ವಚನಗಳು ಅಲಭ್ಯವಾಗಿದ್ದು ದಾಖಲೆಗೂ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಚೌಡಯ್ಯನವರ ವಚನಗಳು ಹಾಗೂ ನರಸೀಪುರದಲ್ಲಿರುವ ಐಕ್ಯಮಂಟಪದ ಕುರಿತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಇದರಿಂದಾಗಿ ಚೌಡಯ್ಯನವರ ಕುರುಹು ಹಾಗೂ ಅವರ ವಚನಗಳು, ಸಾಮಾಜಿಕ ಕೊಡುಗೆಗಳ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳು ಹೊರಹೊಮ್ಮುತ್ತವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ತಹಶೀಲ್ದಾರ್‌ ಜಿ.ಎಸ್.ಶಂಕರ್ ಮಾತನಾಡಿ, ‘ಸಮಾಜದಲ್ಲಿ ಉನ್ನತ ಹುದ್ದೆಗೆ ಸೇರಲು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳಲ್ಲಿ ಶ್ರಮ ಮತ್ತು ಪ್ರಯತ್ನವಿದ್ದರೆ ಉತ್ತಮ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಬಹುದು’ ಎಂದು ಹೇಳಿದರು.

ಅಂಬಿಗರ ಚೌಡಯ್ಯನವರ ಪೀಠದ ಪೀಠಾಧ್ಯಕ್ಷ ಶಾಂತ ಭೀಷ್ಮಚೌಡಯ್ಯ ಶ್ರೀಗಳು ಮಾತನಾಡಿ, ‘ಅಂಬಿಗರ ಚೌಡಯ್ಯ ಇದೇ ಜಿಲ್ಲೆಯಲ್ಲಿ ಜನಿಸಿದವರು ಹಾಗೂ ಇದೇ ಜಿಲ್ಲೆಯಲ್ಲಿ ಐಕ್ಯಮಂಟಪ ಹೊಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸಮಾಜದ ಪ್ರತಿಯೊಬ್ಬರೂ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಹಾಗೂ ಚೌಡಯ್ಯನವರು ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು, ಡಿವೈಎಸ್‍ಪಿ ವಿಜಯಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ನಗರಸಭೆ ಸದಸ್ಯರಾದ ಜಗದೀಶ್ ಹಾಗೂ ಗಣೇಶ, ಪುರಸಭೆ ಸದಸ್ಯರಾದ ಪರಶುರಾಮ ಸೊನ್ನದ, ರಾಮಚಂದ್ರ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ಮಂಜುನಾಥ್ ಇದ್ದರು. 

ಮೆರವಣಿಗೆಗೆ ಚಾಲನೆ:

ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಗೆ ಶಾಂತ ಭೀಷ್ಮ ಚೌಡಯ್ಯ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆಯು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡು ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುಭವನದವರೆಗೆ ಅದ್ಧೂರಿಯಾಗಿ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು