ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್: ಅಡಿಕೆಗೆ ಕೆಂಪು, ಹಳದಿ ನುಸಿ ಬಾಧೆ

Published 14 ಮೇ 2024, 15:46 IST
Last Updated 14 ಮೇ 2024, 15:46 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಕೆಂಪು ನುಸಿ ಮತ್ತು ಹಳದಿ ನುಸಿ ರೋಗ ಬಾಧೆ ಉಲ್ಬಣಸಿದ್ದು, ಹತೋಟಿಗೆ ತೋಟಗಾರಿಕೆ ಇಲಾಖೆ ಕ್ರಮಗಳನ್ನು ತಿಳಿಸಿದೆ.

‘ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಡಿಕೆ ಗಿಡಕ್ಕೆ ಬಾಧಿಸುವ ಕೀಟಗಳು ಈ ವರ್ಷದ ಅತಿಯಾದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯಿಂದ ತೋಟಗಳಿಗೆ ಮಾರಕವಾಗಿ ವ್ಯಾಪಿಸುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.

ಲಕ್ಷಣಗಳು: ಹುಳುಗಳು ಎಲೆಯ ಹಿಂಭಾಗದಿಂದ ರಸ ಹೀರುವುದರಿಂದ ಮೊದಲಿಗೆ ಎಲೆಗಳು ಹಳದಿಯಾಗಿ ಕಾಣಿಸುತ್ತವೆ. ನಂತರ ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಕೆಳಗಿನ ಎಲೆಗಳಲ್ಲಿ ಕಾಣುವ ಕೀಟಗಳು ಕ್ರಮೇಣ ಹೊಸ ಎಲೆಗಳು ಮತ್ತು ಸುಳಿಗೂ ಬಾಧಿಸುತ್ತವೆ. ಬಳಿಕ ಗಿಡವು ಒಣಗಿ ಸತ್ತು ಹೋಗುತ್ತದೆ.

‘ಮುಂಜಾಗ್ರತಾ ಕ್ರಮವಾಗಿ ತೋಟದಲ್ಲಿ ತೇವಾಂಶ ವಾತಾವರಣ ಸೃಷ್ಟಿಸಲು ತುಂತುರು ಅಥವಾ ಹನಿ ನೀರಾವರಿ ವ್ಯವಸ್ಥೆ ಹೆಚ್ಚಿಸಬೇಕು. ತೋಟದಲ್ಲಿ ಸರಿಯಾಗಿ ಬಸಿಗಾಲುವೆ ನಿರ್ಮಾಣ, ಈಗಾಗಲೇ ಕೀಟ ಬಾಧೆಗೆ ಒಳಪಟ್ಟ ಗಿಡಗಳಿಗೆ ರಾಸಾಯನಿಕ ಸಿಂಪಡಣೆಯಿಂದ ಹತೋಟಿಗೆ ತರಬಹುದು’ ಎಂದು ಬಣಕಾರ ತಿಳಿಸಿದ್ದಾರೆ.

ಹತೋಟಿ ಕ್ರಮಗಳು: 1 ಲೀಟರ್ ನೀರಿಗೆ 1.5 ಮಿ.ಲೀ. ಪ್ರೊಪಾಗೈಂಟ್ ಬೆರೆಸಿ ಸಿಂಪಡಣೆ ಮಾಡಬೇಕು ಅಥವಾ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಸ್ಪೈರಾಮೆಸಿಪಿಯನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ 1.2 ಮಿ.ಲೀ. ಹೆಗ್ಸಿಜೆಯಾಟಾಕ್ಸ್ ಬೆರೆಸಿ ಸಿಂಪಡಣೆ ಮಾಡಲೂಬಹುದು.

‘ಮೇಲಿನ ರಾಸಾಯನಿಕಗಳನ್ನು ಸೂಕ್ಷ್ಮ ಪೋಷಕಾಂಶದ (ಪ್ರತಿ ಕ್ಯಾನ್‌ಗೆ 25–50 ಗ್ರಾಂ) ಜೊತೆಗೆ ಬೆರೆಸಿ ಒಂದು ಎಕರೆಗೆ 10–15 ಕ್ಯಾನ್‌ಗಳನ್ನು ಎಲೆಯ ಹಿಂಬದಿಗೆ ಸಿಂಪಡಿಸುವುದರಿಂದ ನುಸಿ ಬಾಧೆಯನ್ನು ಹತೋಟಿಗೆ ತರಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆ ಕಚೇರಿ ಸಂಪರ್ಕಿಸಬಹುದು’ ಎಂದು ಬಣಕಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT