ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಕ್ಷೇತ್ರದಲ್ಲಿ ಮತ್ತೊಂದು ಶೂಟೌಟ್: ಅಪಾಯದಿಂದ ಪಾರಾದ ಮುಸ್ಲಿಂ ಮಹಿಳೆ

ಗುಂಡು ಹಾರಿಸಿದ ದುಷ್ಕರ್ಮಿಗಳು
Last Updated 26 ಮೇ 2022, 7:21 IST
ಅಕ್ಷರ ಗಾತ್ರ

ಹಾವೇರಿ: ‘ಸಿಎಂ ತವರು ಕ್ಷೇತ್ರ’ ಶಿಗ್ಗಾವಿ ತಾಲ್ಲೂಕಿನ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್-2 ಸಿನಿಮಾ ನೋಡುವ ಸಂದರ್ಭ ನಡೆದ ಶೂಟೌಟ್ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ, ಒಂದು ತಿಂಗಳ ಅಂತರದಲ್ಲಿ ಮತ್ತೆ ತಾಲ್ಲೂಕಿನ ಹುಲಗೂರಿನಲ್ಲಿ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.

ಹುಲಗೂರು ಗ್ರಾಮದ ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಸಲ್ಮಾಬಾನು ಕೋಂ ಅಬ್ದುಲ್ ಖಾದರ್ ಮುಲ್ಲಾನವರ (31) ಇವರನ್ನು ಗುರಿಯಾಗಿಸಿಕೊಂಡು ಮೋಟರ್ ಸೈಕಲ್ ಮೇಲೆ ಬಂದ ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಸಲ್ಮಾಬಾನು‌ ಪಾರಾಗಿದ್ದಾರೆ.

ಬುಧವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಲ್ಮಾ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ. ಸಲ್ಮಾ ಕಟ್ಟೆಯ ಮೇಲೆಉರುಳಿಬಿದ್ದಿದ್ದರಿಂದ, ಗುಂಡುಗಳು ಮನೆಯ ತಗಡನ್ನು ಸೀಳಿ, ಗೋಡೆ ಮೇಲೆ ಸಿಡಿದಿವೆ.

ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಬೈಕ್ ಹಿಂದೆ ಕುಳಿತವ ಗುಂಡು ಹಾರಿಸಿದ. ಆರೋಪಿಗಳ ವಯಸ್ಸು 30 ರಿಂದ 35 ಇರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ನಡೆದ ಸಂದರ್ಭ ಮನೆಯಲ್ಲಿ‌13 ಮಂದಿ ಇದ್ದರು.

ಸಲ್ಮಾ ಅವರನ್ನು ಹುಬ್ಬಳ್ಳಿ ತಾಲ್ಲೂಕಿನ ಅರಳೀಕಟ್ಟೆ ಗ್ರಾಮದ ಅಬ್ದುಲ್ ಖಾದರ್ ಮುಲ್ಲಾನವರ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ ಅಬ್ದುಲ್ ಮತ್ತು ಸಲ್ಮಾ ನಡುವೆ ಜಗಳವಿದ್ದ ಕಾರಣ ಹಾಗೂ ಗಂಡ ಕಿರುಕುಳ ನೀಡುತ್ತಿದ್ದ ಎಂದು ಸಲ್ಮಾ 2 ವರ್ಷಗಳಿಂದ ತಂದೆಯ ಮನೆಯಲ್ಲೇ ವಾಸವಾಗಿದ್ದರು.

ಘಟನೆಯಲ್ಲಿ ಸಲ್ಮಾ ಅವರ ಪತಿ ಅಬ್ದುಲ್ ಮೇಲೆ ಬಲವಾದ ಸಂಶಯವಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಪಿ ವಿಜಯಕುಮಾರ ಸಂತೋಷ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಪಿಸ್ತೂಲ್, ಬಂದೂಕು ಎಲ್ಲಿ ಸಿಗುತ್ತಿವೆ?
ರಾಜಶ್ರೀ ಚಿತ್ರಮಂದಿರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲೂ ಆರೋಪಿ ಪರವಾನಗಿ ಇಲ್ಲದ ಕಂಟ್ರಿಮೇಡ್ ಪಿಸ್ತೂಲ್ ಬಳಸಿದ್ದ. ಈಗ ಹುಲಗೂರು ಘಟನೆಯಲ್ಲಿ ಬಂದೂಕು ಬಳಸಲಾಗಿದೆ. ಪರವಾನಗಿ ಇಲ್ಲದ ಪಿಸ್ತೂಲ್, ಬಂದೂಕು ಇಷ್ಟು ಸುಲಭವಾಗಿ ಜನರಿಗೆ ಹೇಗೆ ಸಿಗುತ್ತಿವೆ? ಅಕ್ರಮ ಶಸ್ತ್ರಾಸ್ತ್ರ ಮಾರಾಟದ ಜಾಲ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆಯಾ? ಎಂಬ ಅನುಮಾನ ಮತ್ತು ಆತಂಕ ಜನರನ್ನು ಕಾಡುತ್ತಿದೆ.

ಪೊಲೀಸರು ತನಿಖೆ ನಡೆಸಿ, ಅಕ್ರಮ ಶಸ್ತ್ರಾಸ್ತ್ರ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು‌. ಘಟನೆಗೆ ಸಂಬಂಧಪಟ್ಟ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಮಾಜಿ ಶಾಸಕ ಸೈಯದ್ ಅಜೀಂಪೀರ್ ಖಾದ್ರಿ ಹುಲಗೂರ ಗ್ರಾಮದ ಸಲ್ಮಾ ಅವರ ಮನೆಗೆ ಭೇಟಿ ನೀಡಿ, ಮನೆಯವರಿಗೆ ಧೈರ್ಯ ಹೇಳಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT