ಗುರುವಾರ , ಫೆಬ್ರವರಿ 25, 2021
20 °C
ಸಾಲದ ಹಣದಿಂದ ಆದಾಯ ದ್ವಿಗುಣಗೊಳಿಸಿ: ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟಿಂಗಳೆ ಸಲಹೆ

ಉದ್ಯಮ ಸ್ಥಾಪನೆಗೆ ನಿಗಮದಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಪುನರ್ ವಸತಿಗಾಗಿ ಮಹಿಳಾ ಅಭಿವೃದ್ಧಿ ನಿಗಮದಿಂದ ಪಡೆಯುವ ಸಾಲದ ಹಣ ಹಾಗೂ ಪ್ರೋತ್ಸಾಹಧನವನ್ನು ದುಡಿಮೆಗೆ ಹಚ್ಚಿ ಆದಾಯ ದ್ವಿಗುಣಗೊಳಿಸಿ ಈ ಹಣವನ್ನು ಮದುವೆ ಇತರ ಧಾರ್ಮಿಕ ಕಾರ್ಯಗಳಿಗೆ ಬಳಸಿ ಪೋಲು ಮಾಡಬೇಡಿ’ ಎಂದು ಮಹಿಳಾ ಫಲಾನುಭವಿಗಳಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟಿಂಗಳೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು, ಉದ್ಯೋಗಿನಿ, ಕಿರುಸಾಲ ಯೋಜನೆ, ಧನಶ್ರೀ ಯೋಜನೆ, ಚೇತನ, ಸಮೃದ್ಧಿ ಸೇರಿದಂತೆ ವಿವಿಧ ಮಹಿಳಾ ಆರ್ಥಿಕ ನೆರವಿನ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಮಾಜಿ ದೇವದಾಸಿಯರು, ದಮನಿತರು, ಮಹಿಳೆಯರು ಜೀವನಕ್ಕಾಗಿ ಬೇರೆಯವರ ಬಳಿ ಕೈಚಾಚಬಾರದು. ನೆಮ್ಮದಿ ಜೀವನಕ್ಕೆ ಸರ್ಕಾರದ ಸಾಲ ಸೌಲಭ್ಯ ನೀಡಿ ಅವರ ಆರ್ಥಿಕ ಸಬಲತೆಗೆ ಒತ್ತು ನೀಡಲಾಗಿದೆ. ಸಾಲದ ನೆರವಿನ ಅವಕಾಶ ವಂಚಿತರನ್ನು ಗುರುತಿಸಿ ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುವ ನಿಟ್ಟಿನಲ್ಲಿ ವಾಸ್ತವತೆಯನ್ನು ಅರಿಯಲು ಈ ಸಂವಾದವನ್ನು ನಡೆಸಲಾಗುತ್ತಿದೆ. ನಿಮ್ಮ ಅನಿಸಿಕೆ ಹಾಗೂ ಯೋಜನೆಗಳ ಸಫಲತೆ, ಬದಲಾವಣೆ ಕುರಿತಂತೆ ನಿಮ್ಮ ಅಭಿಪ್ರಾಯ ಸಂಗ್ರಹಿಸಿ ನೆರವು ಒದಗಿಸಲು ನಿಗಮ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ದ್ವಿಗುಣ ಸಾಲ:

ಚೈತನ್ಯ ಯೋಜನೆಯಡಿ ₹10 ಲಕ್ಷ ಬಡ್ಡಿ ರಹಿತ ಸಾಲದ ಮೊತ್ತವನ್ನು ದ್ವಿಗುಣಗೊಳಿಸಿ ₹20 ಲಕ್ಷದವರೆಗೆ ನೀಡಲು ನಿಗಮ ಮುಂದಾಗಿದೆ. ಮಹಿಳೆಯರು ಸೇರಿ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಉದ್ಯಮ ಸ್ಥಾಪಿಸಲು ಮುಂದಾದರೆ ನಿಗಮ ಹಣಕಾಸಿನ ನೆರವು ನೀಡಲಿದೆ. ಈಗಾಗಲೇ ಬಳ್ಳಾರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಹಿಳೆಯರ ಒಕ್ಕೂಟ ಶೇಂಗಾ ಚಟ್ನಿ ಉತ್ಪಾದಿಸುವ ದೊಡ್ಡ ಪ್ರಮಾಣದ ಉದ್ಯಮ ಸ್ಥಾಪಿಸಿದ್ದಾರೆ. ನಿಗಮ ಇದಕ್ಕೆ ಹೆಚ್ಚಿನ ಹಣಕಾಸಿನ ನೆರವು ನೀಡಿದೆ ಎಂದು ಹೇಳಿದರು.

ಸಂವಾದದಲ್ಲಿ ಭಾಗವಹಿಸಿದ ಮಹಿಳೆಯರು ಮಕ್ಕಳ ಶಿಕ್ಷಣ, ಮನೆ ನಿರ್ಮಾಣಕ್ಕೆ ನೆರವು, ಚೇತನ, ಉದ್ಯೋಗಿನಿ ಹಾಗೂ ಕಿರುಸಾಲ ಮೊತ್ತವನ್ನು ದ್ವಿಗುಣಗೊಳಿಸುವಂತೆ ಮನವಿ ಮಾಡಿಕೊಂಡರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಮಾತನಾಡಿದರು. ಇಲಾಖೆಯ ನಿರೂಪಣಾಧಿಕಾರಿ ಶ್ರೀನಿವಾಸ ಆಲಗತ್ತಿ, ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಮಂಜುಳಾ ಭರಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು