ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಕಿ’ ಖದರ್‌ನಿಂದ ‘ಖಾದಿ’ ಪವರ್‌ನತ್ತ!

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಸಿ.ಪಾಟೀಲ
Last Updated 7 ಫೆಬ್ರುವರಿ 2020, 9:53 IST
ಅಕ್ಷರ ಗಾತ್ರ

ಹಾವೇರಿ: ಸಬ್‌ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಆಗಿ ‘ಖಾಕಿ’ ಖದರ್‌ ತೋರಿಸಿದ್ದ ಬಿ.ಸಿ.ಪಾಟೀಲ ಅವರು, ಈಗ ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ‘ಮಂತ್ರಿಗಿರಿ’ ಪವರ್‌ ತೋರಿಸಲು ಅಣಿಯಾಗಿದ್ದಾರೆ.

ಪೊಲೀಸ್‌, ಚಿತ್ರನಟ, ರಾಜಕಾರಣಿಯಾಗಿ ಗುರುತಿಸಿಕೊಂಡ ಬಿ.ಸಿ.ಪಾಟೀಲ ಅವರದ್ದು ವರ್ಣರಂಜಿತ ಬದುಕು ಮತ್ತು ಬಹುಮುಖ ವ್ಯಕ್ತಿತ್ವ. ಅಭಿಮಾನಿಗಳು ಪ್ರೀತಿಯಿಂದ ಇವರನ್ನು ‘ಕೌರವ’ ಎಂದು ಕರೆಯುತ್ತಾರೆ. ‘ಕೌರವನ ಛಲವಿದ್ದರೆ, ಯಶಸ್ಸು ಕಟ್ಟಿಟ್ಟಬುತ್ತಿ’ ಎಂಬುದು ಬಿ.ಸಿ.ಪಾಟೀಲರ ಅಚಲ ನಂಬಿಕೆ.

ಇವರುಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ 1956ರಲ್ಲಿ ಕೃಷಿಕ ಕುಟುಂಬದಲ್ಲಿ ಚನ್ನಬಸವಗೌಡ ಪಾಟೀಲ ಮತ್ತು ಶಿವಮ್ಮ ದಂಪತಿಯ ಪುತ್ರನಾಗಿ ಜನಿಸಿದರು.ಯಲಿವಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ,ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ನಂತರ ಬಿಎ ಪದವಿ ಪಡೆದರು.

ತನ್ನ ಕನಸಿನ ವೃತ್ತಿಯಾಗಿದ್ದ ಪೊಲೀಸ್‌ ಇಲಾಖೆಗೆ1979ರಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಆಗಿ ಆಯ್ಕೆಯಾಗುತ್ತಾರೆ. ಆನಂತರ1994ರಲ್ಲಿ ಬೆಂಗಳೂರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಬಡ್ತಿ ಹೊಂದುತ್ತಾರೆ.

2003ರಲ್ಲಿ ಪೊಲೀಸ್‌ ಇಲಾಖೆಗೆ ವಿದಾಯ ಹೇಳಿ, ರೈತಪರ ಹೋರಾಟಕ್ಕೆ ಧುಮುಕುತ್ತಾರೆ. ಹೋರಾಟದ ಸಂದರ್ಭ 9 ದಿನ ಜೈಲುವಾಸವನ್ನೂ ಅನುಭವಿಸುತ್ತಾರೆ. ಆನಂತರ,ಸಂಯುಕ್ತ ಜನತಾದಳದ ಮೂಲಕ ರಾಜಕೀಯ ರಂಗ ಪ್ರವೇಶಿಸುತ್ತಾರೆ.2004ರಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗುತ್ತಾರೆ.

2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತಾರೆ.2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲಿನ ರುಚಿ ಕಾಣುತ್ತಾರೆ. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ‘ಹ್ಯಾಟ್ರಿಕ್‌ ಗೆಲುವು’ ಪಡೆಯುತ್ತಾರೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿಸಚಿವ ಸ್ಥಾನ ಸಿಗದೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ‘ಅನರ್ಹ ಶಾಸಕ’ರಾಗಿ ಕೆಲ ತಿಂಗಳು ಅಜ್ಞಾತವಾಸವನ್ನೂ ಅನುಭವಿಸುತ್ತಾರೆ. ನಂತರ 2019ರಲ್ಲಿ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸುತ್ತಾರೆ. ಇವರ ಗೆಲುವಿನಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರ ಪಾತ್ರ ಅಪಾರ.

ಪತ್ನಿ ವನಜಾ ಮತ್ತು ಪುತ್ರಿಯರಾದ ಸೌಮ್ಯ, ಸೃಷ್ಟಿ ಅವರೊಂದಿಗೆ ಹಿರೇಕೆರೂರು ಪಟ್ಟಣದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. 15 ವರ್ಷಗಳ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪಾಟೀಲರು, ‘ಸಚಿವನಾಗಬೇಕು’ ಎಂಬ ಅವರ ಬಹುದಿನದ ಕನಸು ಈಗ ನನಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT