ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ನೀಡಿದರೆ ತಾಲ್ಲೂಕಿಗೊಂದು ಬಾಲಭವನ: ಚಿಕ್ಕಮ್ಮ ಬಸವರಾಜ

ಜಿಲ್ಲಾ ಬಾಲಭವನದ ಸಮಗ್ರ ಅಭಿವೃದ್ಧಿಗೆ ₹1 ಕೋಟಿ ನೆರವು: ಚಿಕ್ಕಮ್ಮ ಬಸವರಾಜ
Last Updated 18 ಮಾರ್ಚ್ 2021, 14:31 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲಾ ಕೇಂದ್ರದ ಬಾಲಭವನದ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವ ಕಳುಹಿಸಿಕೊಟ್ಟರೆ ₹1 ಕೋಟಿವರೆಗೆ ಅನುದಾನ ಒದಗಿಸಲಾಗುವುದು’ ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ ತಿಳಿಸಿದರು.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಾನ ಅಭಿವೃದ್ಧಿ, ಆಟಿಕೆಗಳ ಅಳವಡಿಕೆ, ಶೌಚಾಲಯ, ಕಟ್ಟಡ ನವೀಕರಣ, ಪೀಠೋಪಕರಣ ಸೇರಿದಂತೆ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತಗಲುವ ವೆಚ್ಚದ ಪ್ರಸ್ತಾವವನ್ನು ಸಲ್ಲಿಸಿದರೆ, ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಿದ್ಧ ಎಂದರು ಹೇಳಿದರು.

ಜಿಲ್ಲಾಡಳಿತದಿಂದ ಜಾಗ ನೀಡಿದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ‘ಬಾಲಭವನ’ ನಿರ್ಮಾಣ ಮಾಡಿ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು. ಈಗಾಗಲೇ ಜಿಲ್ಲಾ ಕೇಂದ್ರದಲ್ಲಿರುವ ಬಾಲಭವನದಲ್ಲಿ ಮಕ್ಕಳ ಮನರಂಜನೆಗಾಗಿ ಕೇಂದ್ರ ಬಾಲಭವನದ ಅನುದಾನದಲ್ಲಿ ಪುಟಾಣಿ ರೈಲು ಮತ್ತು ಆಟಿಕೆಗಳನ್ನು ಅಳವಡಿಸಲಾಗಿದೆ. ಪ್ರತಿ ವರ್ಷ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ, ಕಲಾಶ್ರೀ ಶಿಬಿರ, ವಾರಾಂತ್ಯ ಚಟುವಟಿಕೆ, ಬಾಲಶ್ರೀ ಪ್ರಶಸ್ತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಬೇಡಿಕೆಯೇ ಬಂದಿಲ್ಲ:

ಸ್ಥಳೀಯ ಅಧಿಕಾರಿಗಳಿಂದ ಬಾಲಭವನದ ಅಭಿವೃದ್ಧಿಗೆ ಯಾವುದೇ ಬೇಡಿಕೆ ಬಂದಿರುವುದಿಲ್ಲ. ಆ ಕಾರಣಕ್ಕಾಗಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಬಾಲಭವನವನ್ನು ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. ಇಲ್ಲಿಯ ನ್ಯೂನತೆಗಳ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಿ ಬಾಲಭವನದ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಸಮಾಲೋಚಿಸಲಾಗುವುದು ಎಂದರು.

ವಾಣಿಜ್ಯ ಮಳಿಗೆ ನಿರ್ಮಿಸಿ:

ಜಿಲ್ಲಾ ಬಾಲಭವನದಲ್ಲಿ 1.25 ಎಕರೆ ಜಮೀನು ಇದೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಜಾಗದ ಮುಂಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಬಾಲಭವನ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗುವುದಿಲ್ಲ. ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಸ್ಥಳೀಯ ಶಾಸಕರು ಹಾಗೂ ಸಂಸದರ ನಿಧಿಯಲ್ಲಿ ಪಡೆಯಲು ಸಲಹೆ ನೀಡಿದ ಅವರು ಕೊರತೆ ಬಿದ್ದರೆ ಬಾಲಭವನ ಸೊಸೈಟಿ ವತಿಯಿಂದ ಅನುದಾನ ಒದಗಿಸಲಾಗುವುದು ಎಂದರು.

ಮಾಧ್ಯಮಗೋಷ್ಠಿಗೆ ಮುನ್ನ ಬಾಲಭವನ ಉದ್ಯಾನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಮಾಧ್ಯಮಗೋಷ್ಠಿಯಲ್ಲಿ ಪ್ರಭಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀನಿವಾಸ ಆಲದರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಸೋಮನಗೌಡ, ಕಚೇರಿ ನಿರೂಪಣಾಧಿಕಾರಿ ಭಾರತಿ ಇಂಗಳೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT