ಭಾನುವಾರ, ಅಕ್ಟೋಬರ್ 17, 2021
21 °C
ಚಕ್ರವ್ಯೂಹದಲ್ಲಿ ಸಿಲುಕಿದ ಸಿಎಂ ಬೊಮ್ಮಾಯಿ

ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ: ಸಲೀಂ ಅಹಮದ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಹಾವೇರಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧವಳಗಿರಿ, ಕೇಶವಕೃಪ ಹಾಗೂ ಹೈಕಮಾಂಡ್‌ ಎಂಬ ಚಕ್ರವ್ಯೂಹದಲ್ಲಿ ಸಿಲುಕಿದ್ದು, ಯಾವುದೇ ಸ್ವಂತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ವಾಗ್ದಾಳಿ ನಡೆಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಮುಂತಾದವರನ್ನು ಕೇಂದ್ರದ ನಾಯಕರು ಹೇಗೆ ಕಡೆಗಣಿಸಿದರು ಎಂಬುದು ಜಗಜ್ಜಾಹೀರಾಗಿದೆ. ಪಕ್ಷಕ್ಕೆ ದುಡಿದ ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ ಎಂದು ಟೀಕಿಸಿದರು. 

ಕೇಂದ್ರ ಸರ್ಕಾರ ತೊಂದರೆ ಕೊಟ್ಟಿತು ಎಂದು ಕಣ್ಣೀರು ಹಾಕಿ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಲು ನಿಜವಾದ ಕಾರಣ ಏನು ಎಂಬುದನ್ನು ಕೇಂದ್ರದ ನಾಯಕರು ಜನರಿಗೆ ತಿಳಿಸಲೇ ಇಲ್ಲ. ಯಡಿಯೂರಪ್ಪನವರ ಕಣ್ಣೀರಿನ ಕತೆ ರಾಜ್ಯದ ಜನರಿಗೆ ಗೊತ್ತಾಗಬೇಕಿದೆ ಎಂದರು.

ರಾವಣ ರಾಜ್ಯ ಸೃಷ್ಟಿಸಿದ ಬಿಜೆಪಿ: ರಾಮರಾಜ್ಯ ಸೃಷ್ಟಿಸುತ್ತೇವೆ ಎಂದು ಹೇಳಿದ ಬಿಜೆಪಿ ಉತ್ತರ ಪ್ರದೇಶವನ್ನು ‘ರಾವಣ ರಾಜ್ಯ’ವನ್ನಾಗಿ ಮಾಡಿದೆ. ಲಖಿಂಪುರ–ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ರಾಜೀನಾಮೆ ನೀಡಬೇಕು. ಬಿಜೆಪಿ ಯಾವ ಪುರುಷಾರ್ಥಕ್ಕೆ ‘ಜನಾಶೀರ್ವಾದ ಯಾತ್ರೆ’ ಮಾಡಿತು ಎಂಬುದು ತಿಳಿಯಲಿಲ್ಲ. ಕೇಂದ್ರ ಮತ್ತು ರಾಜ್ಯದ ಸಚಿವರು ಜನರ ಕ್ಷಮೆ ಕೇಳದಿದ್ದರೆ ಜನರು ‘ಆಕ್ರೋಶ ಯಾತ್ರೆ’ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. 

ಜೆಡಿಎಸ್‌ನಿಂದ ಅವಕಾಶವಾದಿ ರಾಜಕಾರಣ: ಹಾನಗಲ್‌ ಉಪಚುನಾವಣೆಗೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು (ನಿಯಾಜ್‌ ಶೇಖ್‌) ಘೋಷಣೆ ಮಾಡಿದ ಬಗ್ಗೆ ಪುನರ್‌ ಪರಿಶೀಲನೆ ಮಾಡಿ, ಜಾತ್ಯತೀತ ಮತಗಳನ್ನು ಒಡೆಯಬೇಡಿ ಎಂದು ಎಚ್‌.ಡಿ.ದೇವೇಗೌಡ ಅವರಿಗೆ ಮನವಿ ಮಾಡಿದ್ದೆ. ಆದರೆ, ಜೆಡಿಎಸ್‌ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂಬುದು ಅಲ್ಪಸಂಖ್ಯಾತ ಮತದಾರರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು