ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಇಂಧನ ಬೆಲೆ ಏರಿಕೆ: ಬಿಜೆಪಿ ಬೃಹತ್ ಪ್ರತಿಭಟನೆ

Published 18 ಜೂನ್ 2024, 15:51 IST
Last Updated 18 ಜೂನ್ 2024, 15:51 IST
ಅಕ್ಷರ ಗಾತ್ರ

ಹಾವೇರಿ: ‘ಪೆಟ್ರೋಲ್ – ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ, ಜನರನ್ನು ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಕ್ಷದ ಕಚೇರಿಯಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಚಕ್ಕಡಿ ಸಮೇತ ಪಾದಯಾತ್ರೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಭಾಗ್ಯಗಳ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ’, ‘ಭಾಗ್ಯಗಳ ಹೆಸರಿನಲ್ಲಿ ಜನರ ಸುಲಿಗೆ’, ‘ಪೆಟ್ರೋಲ್–ಡೀಸೆಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ’ ಸೇರಿದಂತೆ ಹಲವು ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಪಾದಯಾತ್ರೆ ನಂತರ ಸಿದ್ದಪ್ಪ ವೃತ್ತದಲ್ಲಿ ಸೇರಿದ್ದ ಮುಖಂಡರು ಹಾಗೂ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬಿಜೆಪಿ ಧ್ವಜಗಳನ್ನು ಕಟ್ಟಿದ್ದ ಚಕ್ಕಡಿ ಸವಾರಿ ಮಾಡಿ, ಬೆಲೆ ಏರಿಕೆ ಕ್ರಮವನ್ನು ಖಂಡಿಸಿದರು.

ಬಿಜಿಪಿ ಮುಖಂಡ ಶಿವರಾಜ ಸಜ್ಜನರ ಮಾತನಾಡಿ, ‘ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಹೊರೆ ಆಗಿದೆ. ಗ್ಯಾರಂಟಿ ನೀಡುವ ಹೆಸರಿನಲ್ಲಿ ರಾಜ್ಯ ಸರ್ಕಾರ, ಬೆಲೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡುತ್ತಿದೆ. ಸಮುದಾಯಗಳಿಗೆ ಸಲ್ಲಬೇಕಾದ ಅನುದಾನವನ್ನೂ ಕಡಿತಗೊಳಿಸಿ ಹಣ ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ತಾವು ಅಧಿಕಾರಕ್ಕೆ ಬಂದರೆ, ಪೆಟ್ರೋಲ್–ಡೀಸೆಲ್ ಹಾಗೂ ಬೀಜ, ಗೊಬ್ಬರ ಬೆಲೆಯನ್ನು ಕಡಿಮೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅವರ ಭರವಸೆ ಸುಳ್ಳು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಜನರಿಗೆ ಸುಳ್ಳು ಹೇಳಿರುವ ಸಿದ್ದರಾಮಯ್ಯ ಅವರಿಗೆ ಜನರು ಪಾಠ ಕಲಿಸುವ ದಿನಗಳು ಹತ್ತಿರದಲ್ಲಿವೆ’ ಎಂದು ಸಜ್ಜನರ ಹೇಳಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಂಜುಡೇಶ ಕಳ್ಳೇರ, ‘ಪೆಟ್ರೋಲ್–ಡಿಸೇಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕವಾದದ್ದು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ರಾಜ್ಯ ಸರ್ಕಾರ ಜನರ ಜೇಬಿಗೆ ಕೈ ಹಾಕಿದೆ. ಬೆಲೆ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದೆ. ಮಧ್ಯಮ ವರ್ಗ ಹಾಗೂ ಬಡವರ ಜೀವನ ದುಸ್ತರವಾಗಲಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ‘ಬೆಲೆ ಏರಿಕೆ ತೀರ್ಮಾನವನ್ನು ಕೈಬಿಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಎಸ್.ಟಿ ಮೋರ್ಚಾ ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ಸಿದ್ದರಾಜ ಕಲಕೋಟಿ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

‘ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ’

‘ಎಸ್.ಟಿ ಸಮುದಾಯದ ಹಣವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಇದನ್ನು ಖಂಡಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಶಿವರಾಜ ಸಜ್ಜನರ ಮಾಹಿತಿ ನೀಡಿದರು.

ನಗರದ ಸಿದ್ದಪ್ಪ ವೃತ್ತದಲ್ಲಿ ಬಿಜೆಪಿಯ ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಚಕ್ಕಡಿ ಸವಾರಿ ಮಾಡಿದ ಕಾರ್ಯಕರ್ತರು
ನಗರದ ಸಿದ್ದಪ್ಪ ವೃತ್ತದಲ್ಲಿ ಬಿಜೆಪಿಯ ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಚಕ್ಕಡಿ ಸವಾರಿ ಮಾಡಿದ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT