ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‍ನ ಸಾಮೂಹಿಕ ಅತ್ಯಾಚಾರ: ಎಸ್ಐಟಿ ತನಿಖೆಗೆ ಆಗ್ರಹ

ಆರ್.ಅಶೋಕ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ಮುತ್ತಿಗೆ: 80ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ
Published 20 ಜನವರಿ 2024, 20:45 IST
Last Updated 20 ಜನವರಿ 2024, 20:45 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್‍ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ ಸೇರಿ 80ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದರು. 

ಇಲ್ಲಿನ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಬಿಜೆಪಿ ಮುಖಂಡರು, ಕಾರ್ಯಕರ್ತರು ಎಸ್‌ಪಿ ಕಚೇರಿ ಮುಂಭಾಗ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು.

‘ರಾಜ್ಯದಲ್ಲಿ ಜೂಜು, ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ಮುಂತಾದ ದುಷ್ಕೃತ್ಯಗಳು ನಿತ್ಯ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೆಲ್ಲವನ್ನು ನೋಡಿದರೆ, ರಾಜ್ಯ ಸರ್ಕಾರ ಬದುಕಿದೆಯಾ ಎಂಬ ಅನುಮಾನ ಬರುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಛೇಡಿಸಿದರು. 

ಪಿಎಫ್‌ಐ ನಂಟು:

‘ಹಾನಗಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಪಿಎಫ್‌ಐ ಮತ್ತು ಇತರ ಭಯೋತ್ಪಾದನಾ ಸಂಘಟನೆಗಳ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಇದು ಬಹಿರಂಗವಾದರೆ, ಸರ್ಕಾರದ ಬಣ್ಣ ಬಯಲಾಗುತ್ತದೆ. ಗೋವಾದಿಂದ ಕರೆ ಮಾಡಿ, ಪೊಲೀಸರ ಮೇಲೆ ಒತ್ತಡ ಹಾಕಿದವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು. ಬೆಳಗಾವಿ ಬೆತ್ತಲೆ ಪ್ರಕರಣ ಮತ್ತು ಹಾನಗಲ್‌ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ’ ಎಂದು ಅವರು ಆರೋಪಿಸಿದರು.

ಸಿಸ್ಟರ್‌ಗೆ ಅನ್ಯಾಯ– ಡಿಕೆಶಿ ಮಾತನಾಡಲಿ:

‘ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾದಾಗ ಆರೋಪಿಗಳನ್ನು ‘ಬ್ರದರ್ಸ್‌’ ಎಂದು ಡಿ.ಕೆ.ಶಿವಕುಮಾರ್‌ ಕರೆದರು. ಈಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ‘ಸಿಸ್ಟರ್‌’ ಮೇಲೆ ಅತ್ಯಾಚಾರ ನಡೆದರೂ ಯಾಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು. 

ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ್‌, ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಭೋಜರಾಜ ಕರೂದಿ, ಶೋಭಾ ನಿಸ್ಸೀಮಗೌಡ್ರ, ಗವಿಸಿದ್ದಪ್ಪ ದ್ಯಾಮಣ್ಣನವರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT