ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ | ಮಳೆಯ ಕೊರತೆ: ಸಂಕಷ್ಟದಲ್ಲಿ ರೈತರು

ಬ್ಯಾಡಗಿ ತಾಲ್ಲೂಕಿನಲ್ಲಿ ಶೇ 98ರಷ್ಟು ಬಿತ್ತನೆ; ಇಳುವರಿ ಕುಂಠಿತ ಸಾಧ್ಯತೆ
Published 1 ಸೆಪ್ಟೆಂಬರ್ 2023, 3:05 IST
Last Updated 1 ಸೆಪ್ಟೆಂಬರ್ 2023, 3:05 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಗಾರು ಮಳೆ ತಡವಾಗಿ ಆರಂಭವಾಗಿತ್ತು. ಎರಡು ಬಾರಿ ಬಿತ್ತನೆ ಮಾಡಿದ್ದ ರೈತರು, ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿಯೂ ಇದ್ದರು. ಆದರೆ, ಇದೀಗ ಮತ್ತೆ ಮಳೆ ಕೊರತೆಯಿಂದಾಗಿ ಬೆಳೆನಷ್ಟವಾಗುವ ಭೀತಿಗೆ ರೈತರು ಒಳಗಾಗಿದ್ಧಾರೆ.

ಎರಡು ಬಾರಿ ಬಿತ್ತನೆ, ಗೊಬ್ಬರ, ಕಳೆ ನಾಶಕ ಸಿಂಪಡಣೆಗೆ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದ ರೈತರು, ಮತ್ತೆ ಕೊಳೆ ಕೊರತೆಯಿಂದಾಗಿ ಬೆಳೆಗಾಗಿ ಖರ್ಚು ಮಾಡಿದ ಹಣವೂ ವಾಪಾಸು ಬರುತ್ತದೆಯೋ ಇಲ್ಲವೊ ಎಂಬ ಆತಂಕಕ್ಕೆ ಒಳಗಾಗಿದ್ಧಾರೆ.

ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿದ್ದರೆ, ಪ್ರಸಕ್ತ ಸಾಲಿನಲ್ಲಿ ಸಕಾಲಕ್ಕೆ ಮಳೆ ಬೀಳದೆ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ದ್ವಿಮುಖ ನೀತಿಯಿಂದ ಹಗಲು ವಿದ್ಯುತ್‌ ಪೂರೈಕೆಯಾಗದೆ, ರಾತ್ರಿ ಲೋಡ್‌ ಶೆಡ್ಡಿಂಗ್‌ ವ್ಯವಸ್ಥೆಯಿಂದ ಬೆಳೆಗೆ ಸಕಾಲಕ್ಕೆ ನೀರುಣಿಸಲು ರೈತರಿಗೆ ಆಗುತ್ತಿಲ್ಲ.

‘ಚಿಕ್ಕಣಜಿ, ಹಿರೇಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಬ್ಬು ಬೆಳೆದು ಕೊಳವೆ ಬಾವಿಯಲ್ಲಿ ನೀರಿಲ್ಲದೆ ‌ಲಕ್ಷಾಂತರ ಮೌಲ್ಯದ ಬೆಳೆಯನ್ನು ನಾಶಪಡಿಸಬೇಕಾಯಿತು’ ಎಂದು ರೈತ ಮುಖಂಡ ಮಲ್ಲೇಶಪ್ಪ ಡಂಬಳ  ಹೇಳಿದರು.

‘ಹಗಲು ವೇಳೆ ವಿದ್ಯುತ್‌ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.  ರೈತರ ಪರಿವಾಗಿದ್ದೇವೆ ಎಂದು ಹೇಳುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದೊಡನೆ ರೈತರನ್ನು ಕಡೆಗಣಿಸುತ್ತಿವೆ’ ಎಂದು ತಡಸ ಗ್ರಾಮದ ರೈತ ಹನುಮಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮೇವು ಸಮಸ್ಯೆ:  ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಬಾಡುತ್ತಿವೆ. ಮಧ್ಯದಲ್ಲಿ ಹಸಿರಾಗಿದ್ದು, ಅಗತ್ಯಕ್ಕೆ ತಕ್ಕಂತೆ ನೀರು ಸಿಗದೆ ಹೋದಲ್ಲಿ ಜಾನುವಾರುಗಳಿಗೆ ಮೇವು ಸಹ ಸಿಗುವುದು ದುಸ್ತರವಾಗಲಿದೆ. ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕೆರೆಗೆ ನೀರು ಬಂದಿದ್ದರೆ ಅದರಿಂದಾದರೂ ಬೆಳೆಯನ್ನು ಉಳಿಸಿ ಕೊಳ್ಳಬಹುದಾಗಿತ್ತು ಎಂದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ತಡಸ, ಶಿಡೇನೂರ, ಕೆರವಡಿ, ಆಣೂರು, ಬಿಸಲಹಳ್ಳಿ, ಕದರಮಂಡಲಗಿ, ಮಾಸಣಗಿ, ಕಲ್ಲೆದೇವರು, ಅರಬಗೊಂಡ ಮುಂತಾದ ಮಸಾರೆ ಭೂಮಿಯಲ್ಲಿ ಬಿತ್ತನೆ ಮಾಡಿದ ಬೆಳೆಗೆ ಈಗ ನೀರು ಅಗತ್ಯವಾಗಿದೆ. ಶಿಡೇನೂರಿನಲ್ಲಿ ಮಳೆ ವಿಳಂಬದಿಂದಾಗಿ ಇಳುವರಿ ಬಾರದ ಗೋವಿನ ಜೋಳವನ್ನು ಟ್ರ್ಯಾಕ್ಟರ್‌ನಿಂದ ನಾಶಪಡಿಸಲಾಗಿದೆ ಎಂದು ಹೇಳಿದರು.

ಶೇ 98ರಷ್ಟು ಬಿತ್ತನೆ: ತಾಲ್ಲೂಕಿನಲ್ಲಿ ಶೇ 98 ರಷ್ಟು ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ 26,329 ಹೆಕ್ಟೇರ್‌ನಲ್ಲಿ ಗೋವಿನ ಜೋಳ, 635 ಹೆಕ್ಟೇರ್‌ನಲ್ಲಿ ಶೇಂಗಾ, 480 ಹೆಕ್ಟೇರ್‌ನಲ್ಲಿ ಸೋಯಾಬೀನ್, 1,710 ಹೆಕ್ಟೇರ್‌ನಲ್ಲಿ ಕಬ್ಬು ಇನ್ನುಳಿದಂತೆ 35 ಹೆಕ್ಟೇರ್‌ನಲ್ಲಿ ಭತ್ತದೆ ಬಿತ್ತನೆ ನಡೆದಿದೆ.

ಕಡಿಮೆ ಮಳೆ: ‘ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ವಾಡಿಕೆಯಂತೆ ಆಗಸ್ಟ್‌ನಲ್ಲಿ 100 ಮಿ.ಮೀ ಮಳೆಯಾಗಬೇಕು. ಆದರೆ ಕನಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ. ಬ್ಯಾಡಗಿ ಮಳೆ ಮಾಪನ ಕೇಂದ್ರದಲ್ಲಿ 27ಮಿ.ಮೀ ಮಳೆ ದಾಖಲಾಗಿದ್ದರೆ, ಅರೆ ಮಲೆನಾಡು ಭಾಗವಾದ ಕಾಗಿನೆಲೆ ಮತ್ತು ಹಡಿಗ್ಗೊಂಡ ಮಳೆ ಮಾಪನ ಕೇಂದ್ರದಲ್ಲಿ ಕ್ರಮವಾಗಿ 3ಮಿ.ಮೀ ಮತ್ತು 5.4 ಮಿ.ಮೀ ಮಳೆ ಬಿದ್ದಿರುವುದು ದಾಖಲಾಗಿದೆ. ಇವಾಗ ಮಳೆಯಾಗದಿದ್ದರೆ ಇಳುವರಿ ಕ್ಷೀಣಿಸುವ ಸಾಧ್ಯತೆ ಇದೆ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ ಮಾಹಿತಿ ನೀಡಿದರು.

ಒಟ್ಟಾರೆ ತಾಲ್ಲೂಕಿನಲ್ಲಿ ಮಳೆಯಾಗದೆ ಹೋದಲ್ಲಿ ತುಂವಾ ಕಷ್ಟವಾಗಲಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

–ಪ್ರಮೀಳಾ ಹುನಗುಂದ??????????

‘ಬಾಂದಾರ ನಿರ್ಮಾಣ ಅವಶ್ಯ‘

₹ 212 ಕೋಟಿ ವೆಚ್ಚದ ಆಣೂರು ಕೆರೆ ತುಂಬಿಸುವ ಯೋಜನೆ ಸಾಕಾರವಾಗಬೇಕಾದರೆ ಹೊಳೆ ಆನ್ವೇರಿ ಬಳಿ ತುಂಗಾ ನದಿಗೆ ಬಾಂದಾರ ನಿರ್ಮಿಸಿ ನೀರು ತಡೆಯವುದು ಅಗತ್ಯವಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಕೆರೆಗಳಿಗೆ ಹರಿಯಲಿದ್ದು ಬೇಸಿಗೆಯಲ್ಲಿ ನೀರು ಸಿಗದೆ ಯೋಜನೆಯ ಸೌಲಭ್ಯ ರೈತರಿಗೆ ಸಿಗಲ್ಲ.??????

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT