ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಭೂತಗಳಲ್ಲಿ ಲೀನರಾದ ಉದಾಸಿ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ವಿವಿಧ ಗಣ್ಯರಿಂದ ಪುಷ್ಪನಮನ
Last Updated 9 ಜೂನ್ 2021, 15:11 IST
ಅಕ್ಷರ ಗಾತ್ರ

ಹಾನಗಲ್‌ (ಹಾವೇರಿ): ಮಾಜಿ ಸಚಿವ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಂ. ಉದಾಸಿ ಅವರ ಅಂತ್ಯಕ್ರಿಯೆಯು ಧಾರ್ಮಿಕ ವಿಧಿ ವಿಧಾನ ಮತ್ತು ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ಹಾನಗಲ್ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.

ಪಟ್ಟಣದ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪೊಲೀಸರು ರಾಷ್ಟ್ರಧ್ವಜ ಹೊದಿಸಿದರು. ಮೂರು ಸುತ್ತು ಆಕಾಶದಲ್ಲಿ ಕುಶಾಲು ತೋಪು ಸಿಡಿಸಿ, ಗೌರವ ವಂದನೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಾಜಕೀಯ ನಾಯಕರು, ಗಣ್ಯರು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ನಮನ ಸಲ್ಲಿಸಿದರು. ನಂತರ ಪಾರ್ಥಿವ ಶರೀರಕ್ಕೆ ಹೊದಿಸಿದ ರಾಷ್ಟ್ರಧ್ವಜವನ್ನು ಸಿ.ಎಂ.ಉದಾಸಿ ಅವರ ಮಗ ಸಂಸದ ಶಿವಕುಮಾರ ಉದಾಸಿ ಅವರಿಗೆ ಸಚಿವ ಬೊಮ್ಮಾಯಿ ಹಸ್ತಾಂತರಿಸಿದರು.

ವಾಹನದಲ್ಲಿ ಮೆರವಣಿಗೆ:

ಅನಾರೋಗ್ಯದ ಕಾರಣ ಬೆಂಗಳೂರು ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದ ಸಿ.ಎಂ. ಉದಾಸಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಚಿರಶಾಂತಿ ವಾಹನದಲ್ಲಿ ಹಾನಗಲ್‍ಗೆ ತರಲಾಯಿತು.

ಜಿಲ್ಲೆಯ ಕುಮಾರಪಟ್ಟಣ, ರಾಣೇಬೆನ್ನೂರು, ಮೊಟೇಬೆನ್ನೂರು, ಹಾವೇರಿನಗರ, ಆಲದಕಟ್ಟಿ, ಸಂಗೂರು, ಆಡೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಭಿಮಾನಿಗಳು ದರ್ಶನ ಪಡೆದು ಪುಷ್ಪ ಸಮರ್ಪಿಸಿ ಕಂಬನಿ ಮಿಡಿದರು.

ದರ್ಶನಕ್ಕೆ ಅವಕಾಶ:

ಹಾನಗಲ್ ಪಟ್ಟಣದಲ್ಲಿರುವ ಸಿ.ಎಂ.ಉದಾಸಿ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರ ಇರಿಸಿ ಕುಟುಂಬದವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಸಾರ್ವಜನಿಕರ ದರ್ಶನಕ್ಕಾಗಿ ಕುಮಾರೇಶ್ವರ ವಿರಕ್ತ ಮಠದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬ್ಯಾರಿಕೇಡ್ ನಿರ್ಮಿಸಿ, ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಸಾಗಿ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಮೈದಾನದ ಪ್ರವೇಶ ದ್ವಾರದಲ್ಲಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರನ್ನು ನಿಯೋಜಿಸಿ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್‌ ಧರಿಸಿದವರನ್ನು ಪೊಲೀಸರು ತಪಾಸಣೆ ನಂತರ ಒಳಗೆ ಬಿಡುತ್ತಿದ್ದರು.ನೂರಾರು ಅಭಿಮಾನಿಗಳು ಕೋವಿಡ್ ಮಾರ್ಗಸೂಚಿ ಅನುಸಾರ ಅಂತರ ಕಾಪಾಡಿಕೊಂಡು ಸಿ.ಎಂ. ಉದಾಸಿ ಅವರ ಅಂತಿಮ ದರ್ಶನ ಪಡೆದುಕೊಂಡರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದ್ದರು.

ಸಚಿವರಾದ ಬಿ.ಸಿ ಪಾಟೀಲ, ಸಚಿವರಾದ ಕೆ. ಈಶ್ವರಪ್ಪ, ಆರ್.ಶಂಕರ, ಸಂಸದರಾದ ಜಿ.ಎಂ.ಸಿದ್ದೇಶ್ವರ, ರಾಘವೇಂದ್ರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಎಚ್.ಕೆ.ಪಾಟೀಲ, ಕಳಕಪ್ಪ ಬಂಡಿ, ಡಿ.ಆರ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಸಲೀಂ ಅಹಮ್ಮದ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಹುಬ್ಬಳ್ಳಿ ಮೂರುಸಾವಿರ ಮಠದ ರಾಜಯೋಗೀಂದ್ರ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು, ಕೆ.ಎಂ.ಎಫ್. ಅಧ್ಯಕ್ಷ ಬಸವರಾಜ ಅರಬಗೊಂಡ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT