ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ ಖರೀದಿ: ರೈತರಿಗೆ ಸಂತಸ

Last Updated 1 ಮೇ 2020, 13:55 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಪ್ರಧಾನ ಬೆಳೆಗಳಲ್ಲಿ ಒಂದಾದ ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ ₹1760ರ ದರದಲ್ಲಿ ಖರೀದಿಸಲು ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಜಿಲ್ಲೆಯ ರೈತ ಮುಖಂಡರು ಸ್ವಾಗತಿಸಿದ್ದಾರೆ.

ಮಕ್ಕೆಜೋಳ ಬೆಳೆದು ಸಂಕಷ್ಟಕ್ಕೀಡಾದ ರೈತರ ಕುರಿತು ಏಪ್ರಿಲ್‌ 11ರಂದು ‘ಪ್ರಜಾವಾಣಿ’ಯಲ್ಲಿ ‘ಆಗ ನೆರೆ: ರೈತರಿಗೆ ಈಗ ಲಾಕ್‌ಡೌನ್‌ ಬರೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.

ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್‌ಗೂ ಅಧಿಕ ಭೂ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆ. ಆದರೆ, ತೀವ್ರ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಸರ್ಕಾರದ ಈ ನಿರ್ಧಾರ ಸಂತಸ ನೀಡಿದೆ. ಕೆಎಂಎಫ್‌ ಪಶು ಆಹಾರ ತಯಾರಿಕೆಗಾಗಿ ಒಂದು ವರ್ಷ ಅವಧಿಗೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಎಂಬುದನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಶುಕ್ರವಾರ ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಖರೀದಿಸಲಿ

‘ರೈತರ ನೆರವಿಗೆ ಬಂದ ಸರ್ಕಾರದ ನಡೆ ಶ್ಲಾಘನೀಯ. ಆದರೆ, ಕೆಎಂಎಫ್‌ ಜಿಲ್ಲಾ ಮಟ್ಟದಲ್ಲಿ ಮಾತ್ರ ಮೆಕ್ಕೆಜೋಳ ಖರೀದಿಸಿದರೆ ತಾಲ್ಲೂಕುಗಳಿಂದ ರೈತರು ಮೆಕ್ಕೆಜೋಳ ಸಾಗಣೆಗೆ ದುಬಾರಿ ಹಣ ಭರಿಸಬೇಕಾಗುತ್ತದೆ. ಹಾಗಾಗಿ ತಾಲ್ಲೂಕು ಮಟ್ಟದ ಎಪಿಎಂಸಿಗಳ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಕಳಪೆ ಬಿತ್ತನೆ ಬೀಜದ ವಿರುದ್ಧ ದಿಟ್ಟ ಕ್ರಮ ಕೈಗೊಂಡು, ರೈತ ಕುಟುಂಬಗಳು ಬೀದಿ ಪಾಲಾಗುವುದನ್ನು ತಪ್ಪಿಸಿದ ಕೃಷಿ ಸಚಿವರಿಗೆ ರೈತಸಂಘ ಚಿರಋಣಿಯಾಗಿರುತ್ತದೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ತಿಳಿಸಿದರು.

ಖರೀದಿಗೆ ಮಿತಿ ಹೇರಬೇಡಿ

‘ಕೇಂದ್ರ ಸರ್ಕಾರ ಮೆಕ್ಕೆಜೋಳ ಕ್ವಿಂಟಲ್‌ಗೆ ₹1760 ದರವನ್ನು ನಿಗದಿ ಮಾಡಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಪ್ರೋತ್ಸಾಹಧನ ನೀಡಿಲ್ಲ. ಕನಿಷ್ಠ ₹2200 ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಂತಿಷ್ಟೇ ಖರೀದಿ ಎಂದು ಮಿತಿ ಹೇರದೆ, ರೈತ ಬೆಳೆದ ಅಷ್ಟೂ ಫಸಲನ್ನು ಖರೀದಿಸಬೇಕು’ ಎಂದುರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮನವಿ ಮಾಡಿದ್ದಾರೆ.

‘ಕಳಪೆ ಬಿತ್ತನೆ ಬೀಜದ ವಿರುದ್ಧ ಸಮರ ಸಾರಿದ ಕೃಷಿ ಸಚಿವರ ನಡೆ ಅನುಕರಣೀಯ. ಆದರೆ, ಪ್ರಕರಣ ದಾಖಲಿಸಿದರೆ ಸಾಲದು, ಸಿಐಡಿ ತನಿಖೆಯಾಗಬೇಕು. ಆರೋಪಿಗಳನ್ನು ಜೈಲಿಗಟ್ಟಬೇಕು. ಈ ಅವ್ಯವಹಾರ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT