ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಏಲಕ್ಕಿ ಮಾಲೆ ವ್ಯಾಪಾರಕ್ಕೆ ಕೋವಿಡ್‌ ಬರೆ!

₹3 ಲಕ್ಷ ಮೌಲ್ಯದ ಆರ್ಡರ್‌ ರದ್ದು: ಸಂಕಷ್ಟದಲ್ಲಿ ತಯಾರಕರು ಮತ್ತು ಕಾರ್ಮಿಕರು
Last Updated 8 ಅಕ್ಟೋಬರ್ 2020, 3:42 IST
ಅಕ್ಷರ ಗಾತ್ರ

ಹಾವೇರಿ: ದೇಶ– ವಿದೇಶಗಳಲ್ಲಿ ಪ್ರಖ್ಯಾತಿ ಗಳಿಸಿರುವ ‘ಹಾವೇರಿ ಏಲಕ್ಕಿ ಮಾಲೆ’ಗಳ ವ್ಯಾಪಾರದ ಮೇಲೆ ‘ಕೋವಿಡ್‌ ಲಾಕ್‌ಡೌನ್’‌ ಕರಿನೆರಳು ಬೀರಿದೆ.

‘ಏಲಕ್ಕಿ ಕಂಪಿನ ನಗರಿ’ ಹಾವೇರಿಯ ಚಂದ್ರಪಟ್ಟಣ ರಸ್ತೆಯ ಪಟವೇಗಾರ ಸಮುದಾಯದ ಮೂರು ಕುಟುಂಬಗಳು 7 ದಶಕದಿಂದ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿದ್ದಾರೆ. ಈ ಮಾಲೆಗಳು ಬೆಂಗಳೂರಿನ ವಿಧಾನಸೌಧದಿಂದ ನವದೆಹಲಿಯ ರಾಷ್ಟ್ರಪತಿ ಭವನದವರೆಗೆ ಅನೇಕ ಗಣ್ಯರ ಕೊರಳನ್ನು ಅಲಂಕರಿಸಿವೆ.

‘ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌, ಮೇ, ಜೂನ್‌ ಈ ಮೂರು ತಿಂಗಳು ಏಲಕ್ಕಿ ಮಾಲೆಗಳ ವ್ಯಾಪಾರ ಸಂಪೂರ್ಣ ಬಂದ್‌ ಆಯಿತು.ನಿಗದಿಯಾಗಿದ್ದ ಕಾರ್ಯಕ್ರಮಗಳು ರದ್ದಾಗಿ,ಸುಮಾರು ₹3 ಲಕ್ಷ ಮೌಲ್ಯದ ಆದೇಶ ಹಿಂಪಡೆಯಲಾಯಿತು. ಈಗ ಶೇ 30ರಷ್ಟು ವ್ಯಾಪಾರ ಮಾತ್ರ ಗರಿಗೆದರಿದೆ’ ಎಂದು ತಯಾರಕ ಉಸ್ಮಾನ್‌ಸಾಹೇಬ್‌‌ ಪಟವೇಗಾರ ಬೇಸರ ವ್ಯಕ್ತಪಡಿಸಿದರು.

ಏಲಕ್ಕಿ ಕೊರತೆ: ‘ಸಕಲೇಶಪುರ, ತಮಿಳುನಾಡು, ಕೇರಳ ಮುಂತಾದ ಕಡೆಗಳಿಂದ ಹಾವೇರಿಗೆ ಏಲಕ್ಕಿ ಪೂರೈಕೆಯಾಗುತ್ತಿತ್ತು. ಆದರೆ, ಲಾಕ್‌ಡೌನ್‌ ನಿರ್ಬಂಧಗಳಿಂದ ಏಲಕ್ಕಿ ದಾಸ್ತಾನು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಆರ್ಡರ್‌ ಮಾಡಿ 10ರಿಂದ 15 ದಿನಗಳವರೆಗೆ ಗುಣಮಟ್ಟದ ಏಲಕ್ಕಿಗಾಗಿ ಕಾಯಬೇಕಾಗಿದೆ.ಏಲಕ್ಕಿ ದರ ದುಬಾರಿಯಾಗಿದ್ದರೂ, ಮಾಲೆಗಳ ದರವನ್ನು ನಾವು ಏರಿಕೆ ಮಾಡಿಲ್ಲ’ ಎಂದು ಏಲಕ್ಕಿ ಮಾಲೆ ತಯಾರಕಿ ಜೈನಬ್ಬಿ ಪಟವೇಗಾರ‌ ಹೇಳಿದರು.

ಖಾಲಿ ಕುಳಿತ ಕಾರ್ಮಿಕರು:

‘ಏಲಕ್ಕಿ, ರೇಷ್ಮೆ ಉಂಡೆ, ಮುತ್ತು, ಪ್ಲಾಸ್ಟಿಕ್‌ ಪೈಪ್‌ ಮತ್ತು ಆಲಂಕಾರಿಕ ಸಾಮಗ್ರಿಗಳಿಂದ ಸುಂದರವಾದ ಏಲಕ್ಕಿ ಮಾಲೆಗಳನ್ನು ತಯಾರಿಸಲು ನಮಗೆ ತಯಾಕರು ‘ಪೀಸ್‌ ವರ್ಕ್‌’ ಕೊಡುತ್ತಿದ್ದರು. ತಿಂಗಳಿಗೆ ₹4 –5 ಸಾವಿರ ದುಡಿಯುತ್ತಿದ್ದೆವು. ದೊಡ್ಡ ಆದೇಶಗಳಿಲ್ಲದೆ ಕೂಲಿ ಸಿಗುತ್ತಿಲ್ಲ. 7 ತಿಂಗಳಿಂದ ಖಾಲಿ ಕೈಯಲ್ಲಿ ಕುಳಿತಿದ್ದೇವೆ’ ಎಂದು ಕಾರ್ಮಿಕ ಮಹಿಳೆಯರಾದ ಹಶಮತ್‌ ಮತ್ತು ಜುಬೇದಬಿ ಸಮಸ್ಯೆ ತೋಡಿಕೊಂಡರು.

ವ್ಯಾಪಾರವಿಲ್ಲದ ಕಾರಣ 250ಕ್ಕೂ ಹೆಚ್ಚು ಏಲಕ್ಕಿ ಮಾಲೆಗಳು ದೂಳು ಹಿಡಿಯುತ್ತಿವೆ. ಏಲಕ್ಕಿ ಮಾಲೆ ತಯಾರಕರು ಮತ್ತು ಕಾರ್ಮಿಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ
-ಉಸ್ಮಾನ್‌ ಸಾಹೇಬ್‌ ಪಟವೇಗಾರ, ಏಲಕ್ಕಿ ಮಾಲೆ ತಯಾರಕ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT