ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕಾಕರಣ: ಶೇ 63 ಪ್ರಗತಿ

ಸವಣೂರು ತಾಲ್ಲೂಕು ಮುಂಚೂಣಿ: ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ಮಂದಿಗೆ ಲಸಿಕೆ
Last Updated 1 ಮೇ 2021, 7:58 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ 2.23 ಲಕ್ಷ ಮಂದಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1.40 ಲಕ್ಷ ಮಂದಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿದ್ದು, ಶೇ 63ರಷ್ಟು ಪ್ರಗತಿ ಸಾಧಿಸಲಾಗಿದೆ.

ಸವಣೂರು ತಾಲ್ಲೂಕು ಲಸಿಕಾಕರಣದಲ್ಲಿ ಶೇ 78ರಷ್ಟು ಪ್ರಗತಿ ಸಾಧಿಸಿದ್ದು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗಿಂತ ಮುಂಚೂಣಿಯಲ್ಲಿದೆ. ರಾಣೆಬೆನ್ನೂರು ತಾಲ್ಲೂಕು ಶೇ 47ರಷ್ಟು ಪ್ರಗತಿ ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಮೊದಲ ಡೋಸ್‌ ಅನ್ನು 1,22,514 ಮಂದಿ ಮತ್ತು ಎರಡನೇ ಡೋಸ್‌ ಅನ್ನು 17,495 ಮಂದಿ ಇದುವರೆಗೂ ಪಡೆದಿದ್ದಾರೆ.

ಮೊದಲ ಡೋಸ್‌ ಅನ್ನು 7,542 ಆರೋಗ್ಯ ಕಾರ್ಯಕರ್ತರು, 4,824 ಫ್ರಂಟ್‌ ಲೈನ್‌ ವರ್ಕರ್ಸ್‌ (ಕಂದಾಯ, ಪೊಲೀಸ್‌, ಪಂಚಾಯತ್‌ರಾಜ್‌, ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿ) ಪಡೆದಿದ್ದಾರೆ. 45ರಿಂದ 59 ವರ್ಷ ಮೇಲ್ಪಟ್ಟ 48,951 ಮಂದಿ ಹಾಗೂ 60 ವರ್ಷ ಮೇಲ್ಪಟ್ಟ 59,662 ಮಂದಿ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಶೇ 98ರಷ್ಟು ಲಸಿಕೆ ಬಳಕೆ:

ಬೆಳಗಾವಿ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಜಿಲ್ಲೆಯ ಲಸಿಕಾ ಕೇಂದ್ರಕ್ಕೆ ಇದುವರೆಗೆ 1,42,680 ಡೋಸ್‌ಗಳು ಪೂರೈಕೆಯಾಗಿದ್ದು, ಅವುಗಳಲ್ಲಿ ಶೇ 98ರಷ್ಟನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಲಸಿಕಾ ಕೇಂದ್ರದ ಬಳಿ 4,440 ಡೋಸ್‌ಗಳು ಬಾಕಿ ಉಳಿದಿವೆ. ಜಿಲ್ಲೆಗೆ ಅಗತ್ಯವಿರುವ ಲಸಿಕೆಯನ್ನು ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಲಸಿಕೆಯ ಲಭ್ಯತೆಯ ಮೇಲೆ ವಿತರಣೆ ಮಾಡಲಾಗುತ್ತಿದೆ.

122 ಲಸಿಕಾ ಕೇಂದ್ರಗಳು:

ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ–1, ತಾಲ್ಲೂಕು ಆಸ್ಪತ್ರೆಗಳು–6, ಸಮುದಾಯ ಆರೋಗ್ಯ ಕೇಂದ್ರಗಳು–5, ಪ್ರಾದೇಶಿಕ ಆರೋಗ್ಯ ಕೇಂದ್ರ–64, ನಗರ ಆರೋಗ್ಯ ಕೇಂದ್ರಗಳು–1, ಆರೋಗ್ಯ ಉಪಕೇಂದ್ರಗಳು–45 ಸೇರಿದಂತೆ ಒಟ್ಟು 122 ಲಸಿಕಾ ಕೇಂದ್ರಗಳನ್ನು ಗುರುತಿಸಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಹಾಕಲಾಗುತ್ತಿದೆ. ಸರ್ಕಾರದ ನಿರ್ದೇಶನ ಬಂದ ತಕ್ಷಣ ನೋಂದಣಿ ಮಾಡಿಕೊಂಡ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಹಾಕುತ್ತೇವೆ. ಇದಕ್ಕೆ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಲಸಿಕೆ ಅಭಾವ:

ನಿತ್ಯ ಬೆಳಗಾವಿಯಿಂದ ಹಾವೇರಿಗೆ ಲಸಿಕೆ ತರಲು ಲಸಿಕಾ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ.ಹಾವೇರಿ ಜಿಲ್ಲೆಗೆ ಕೋವಿಡ್‌ ಹೊಸ ಮಾರ್ಗಸೂಚಿ ಪ್ರಕಾರ ನಿತ್ಯ 12,250 ಲಸಿಕೆ ಹಾಕುವ ಗುರಿಯನ್ನು ನೀಡಲಾಗಿದೆ. ಆದರೆ, ಲಸಿಕೆಯ ಅಭಾವದಿಂದ ನಿತ್ಯ 4ರಿಂದ 5 ಸಾವಿರ ಲಸಿಕೆಗಳನ್ನು ಮಾತ್ರ ಹಾಕಲಾಗುತ್ತಿದೆ. ಲಸಿಕೆ ಸಿಗುತ್ತದೆ ಎಂದು ದೂರದ ಹಳ್ಳಿಗಳಿಂದ ಲಸಿಕಾ ಕೇಂದ್ರಗಳಿಗೆ ಬಂದವರು, ಲಸಿಕೆಯ ಕೊರತೆಯಿಂದ ಬರಿಗೈಲಿ ವಾಪಸ್‌ ಹೋಗುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

8 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ

ಜಿಲ್ಲೆಯಲ್ಲಿ 18ರಿಂದ 44 ವರ್ಷದೊಳಗಿನ ಸುಮಾರು 8 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಕಿಕೊಂಡಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.

ಕೇಂದ್ರ ಸರ್ಕಾರದ www.cowin.gov.in ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದರೆ ಓಟಿಪಿ ಬರುತ್ತದೆ. ನಂತರ ಆಧಾರ್‌ ಸಂಖ್ಯೆ, ಹೆಸರು, ಲಿಂಗ, ಜನ್ಮ ದಿನಾಂಕ ವಿವರಗಳನ್ನು ನೀಡಬೇಕು. ಮೇ 1ರಿಂದ ಆರಂಭವಾಗಬೇಕಿದ್ದ ಲಸಿಕಾಕರಣವನ್ನು ಕಾರಣಾಂತರದಿಂದ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ದಿನಾಂಕ ಪ್ರಕಟಿಸಲಿದೆ ಎನ್ನುತ್ತಾರೆ ವೈದ್ಯಕೀಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT