ಹಾನಗಲ್: ಅಣ್ಣನ ಹೆಂಡತಿ ಮತ್ತು ಆತನ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುರುವಾರ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕುಮಾರ ಮರಿಗೌಡರ ಬಂಧಿತ ಆರೋಪಿ. ಈತನ ಬಂಧನಕ್ಕೆ ಹಾನಗಲ್ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಹುಬ್ಬಳ್ಳಿ ತಾಲ್ಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಆರೋಪಿ ಇರುವ ಮಾಹಿತಿ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಘಟನೆ ನಡೆದ ಯಳ್ಳೂರ ಗ್ರಾಮಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ, ಪಂಚನಾಮೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸಿದ್ದಾರೆ.
ಹಾನಗಲ್ ಸಿಪಿಐ ಶ್ರೀಧರ ಎಸ್.ಆರ್., ಪಿಎಸ್ಐ ಯಲ್ಲಪ್ಪ ಹಿರಗಣ್ಣನವರ, ಆಡೂರ ಪಿಎಸ್ಐ ಸಂಪತ್‌ಕುಮಾರ ಆನಿಕಿವಿ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಯಳ್ಳೂರ ಗ್ರಾಮದಲ್ಲಿ ನ.4ರಂದು ಬೆಳಗಿನ ಜಾವ ಒಂದೇ ಮನೆಯಲ್ಲಿ ಮೂರು ಜನರ ಕೊಲೆ ನಡೆದಿತ್ತು. ಗೀತಾ ಹೊನ್ನಗೌಡ ಮರಿಗೌಡರ, ಅವರ ಮಕ್ಕಳಾದ ಅಕುಲ್‌ಗೌಡ ಹೊನ್ನಗೌಡ ಮರಿಗೌಡರ ಮತ್ತು ಅಂಕಿತಾ ಹೊನ್ನಗೌಡ ಮರಿಗೌಡರ ಕೊಲೆಯಾಗಿದ್ದರು.