ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | 2.68 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

Published 8 ನವೆಂಬರ್ 2023, 3:29 IST
Last Updated 8 ನವೆಂಬರ್ 2023, 3:29 IST
ಅಕ್ಷರ ಗಾತ್ರ

ಹಾವೇರಿ: ಮಳೆ ಕೈಕೊಟ್ಟ ಕಾರಣ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಇಳುವರಿ ಸಂಪೂರ್ಣ ಕಡಿಮೆಯಾಗಿದೆ. ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆ ಸೇರಿ ಒಟ್ಟು 2,68,939 ಹೆಕ್ಟೇರ್‌ ಬೆಳೆ ಹಾನಿ ಅಂದಾಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್‌.ಡಿ.ಆರ್‌.ಎಫ್‌) ಜಿಲ್ಲೆಗೆ ₹253.62 ಕೋಟಿ ಪರಿಹಾರ ನಿರೀಕ್ಷಿಸಲಾಗಿದೆ. 

ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿಗೆ ಈ ಬಾರಿ 3.27 ಲಕ್ಷ ಹೆಕ್ಟೇರ್ (ಶೇ 99.02) ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋದ ಪರಿಣಾಮ ರೈತರು ಟ್ರ್ಯಾಕ್ಟರ್‌ಗಳಲ್ಲಿ ಬೆಳೆಗಳನ್ನು ಹರಗಿ, ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರು. ಆದರೂ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಸೊರಗಿ ಹೋಗಿವೆ. 

2019ರಿಂದ ಮೂರ್ನಾಲ್ಕು ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಾಲದು ಸುಳಿಗೆ ಸಿಲುಕಿದ್ದ ರೈತರು, ಈ ಬಾರಿ ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೀಜಗಳು ಸರಿಯಾಗಿ ಮೊಳಕೆಯೊಡೆಯದೆ ಕೈ ಸುಟ್ಟುಕೊಂಡರು. ಚಿಗುರಿದ ಬೆಳೆಗಳು ಕೂಡ ಸರಿಯಾಗಿ ಇಳುವರಿ ಬಾರದ ಕಾರಣ ರೈತರು ಸಾಲದ ಸುಳಿಗೆ ಸಿಲುಕಿ, ಸಂಕಷ್ಟ ಎದುರಿಸುತ್ತಿದ್ದಾರೆ. 

ಮಳೆಯ ಅಭಾವ: ಜನವರಿಯಿಂದ ಮೇ ತಿಂಗಳವರೆಗೆ 120 ಮಿ.ಮೀ. ವಾಡಿಕೆ ಮಳೆಗೆ 83 ಮಿ.ಮೀ. ಮಳೆಯಾಗಿತ್ತು. ಶೇ 31ರಷ್ಟು ಕೊರತೆಯಾಗಿತ್ತು. ಜೂನ್ ತಿಂಗಳಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಬಿದ್ದು, ಶೇ 60ರಷ್ಟು ಮಳೆ ಕೊರತೆಯಾಯಿತು. ಇದರಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದವು.

ಜುಲೈನಲ್ಲಿ 164 ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ 229 ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಬೀಜಗಳು ಚಿಗುರಿ, ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಮಳೆ ಕೈಕೊಟ್ಟಿತು. ಆಗಸ್ಟ್‌ನಲ್ಲಿ 127 ಮಿ.ಮೀ. ವಾಡಿಕೆ ಮಳೆಗೆ ಕೇವಲ 27 ಮಿ.ಮೀ. ಮಳೆಯಾದ ಕಾರಣ ಬೆಳೆಗಳು ಒಣಗಿದವು. 

ಸೆಪ್ಟೆಂಬರ್ ತಿಂಗಳಲ್ಲಿ 107 ಮಿ.ಮೀ. ವಾಡಿಕೆ ಮಳೆಗೆ ಕೇವಲ 39 ಮಿ.ಮೀ. ಮಳೆಯಾಗಿದ್ದು, ಶೇ 63ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ನಲ್ಲಿ ಎರಡು ದಿನ ಮಾತ್ರ ತುಂತುರು ಮಳೆ ಬಿದ್ದಿದೆ. 

8 ತಾಲ್ಲೂಕುಗಳು ಬರಪೀಡಿತ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಬೆಳೆಗಳು ನೆಲಕಚ್ಚಿದ್ದರಿಂದ ರೈತರು ಆತಂಕಗೊಂಡಿದ್ದರು. ಸರ್ಕಾರ ಮೊದಲ ಹಂತದಲ್ಲಿ ಜಿಲ್ಲೆಯ ಹಾವೇರಿ, ಸವಣೂರು, ರಾಣೆಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಎರಡನೇ ಹಂತದಲ್ಲಿ ಹಾನಗಲ್‌, ಶಿಗ್ಗಾವಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಮೂಲಕ ಜಿಲ್ಲೆಯ 8 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ.

ಎನ್‌ಡಿಆರ್‌ಎಫ್‌ ಪರಿಹಾರ ಹೆಚ್ಚಳ: ಕೇಂದ್ರದ ಎನ್‌.ಡಿ.ಆರ್‌.ಎಫ್‌ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್‌ಗೆ ₹6800ರಿಂದ ₹8,500ಕ್ಕೆ ಪರಿಹಾರವನ್ನು ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ಒಟ್ಟು ₹13,600 ಪರಿಹಾರವನ್ನು ರೈತರಿಗೆ ನೀಡಲಾಗಿತ್ತು. ನೀರಾವರಿ ಆಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ಹಾಗೂ ದೀರ್ಘಾವಧಿ ಬೆಳೆಗಳಿಗೆ ₹28 ಸಾವಿರ ಪರಿಹಾರ ಕೊಡಲಾಗಿತ್ತು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. 

‘ರೈತರಿಗೆ ಹೆಚ್ಚಿನ ನೆರವು ನೀಡಿ’

‘ಬೀಜ ಗೊಬ್ಬರದ ದರಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ದೇಶದಲ್ಲಿ ಶೇ 72ರಷ್ಟಿದ್ದ ಒಕ್ಕಲುತನ ಶೇ 42ಕ್ಕೆ ಇಳಿದಿದೆ. ಯುವಕರು ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ರೈತ ವಿರೋಧಿ ಧೋರಣೆ ಅನುಸರಿಸುತ್ತವೆ. ಎನ್‍.ಡಿ.ಆರ್‌.ಎಫ್‌ ನಿಯಮಗಳನ್ನು ಸಡಿಲಿಸಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದ್ದಾರೆ.

ಜಿಲ್ಲೆಗೆ ₹126 ಕೋಟಿ ಬೆಳೆವಿಮೆ ಮಧ್ಯಂತರ ಪರಿಹಾರ ಬಿಡುಗಡೆಯಾಗಿದ್ದು ಈಗಾಗಲೇ ರೈತರ ಖಾತೆಗೆ ₹40 ಕೋಟಿ ಜಮೆಯಾಗಿದೆ. ಬರ ಪರಿಹಾರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ ಹಾವೇರಿ
Quote - ಎಸ್‌.ಡಿ.ಆರ್‌ಎಫ್‌. ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್‌ಗೆ ಎಷ್ಟು ಬರ ಪರಿಹಾರ ನೀಡುತ್ತಾರೆ ಎಂಬುದನ್ನು ರಾಜ್ಯ ಸರ್ಕಾರ ಇದುವರೆಗೂ ಘೋಷಿಸಿಲ್ಲ. ದೀಪಾವಳಿಯೊಳಗೆ ಘೋಷಿಸದಿದ್ದರೆ ಹೋರಾಟ ಹಮ್ಮಿಕೊಳ್ಳುತ್ತೇವೆ.
ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT