ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು

ರೈತರಿಗೆ ನೀರು– ನೆರಳಿನ ವ್ಯವಸ್ಥೆ ಕಲ್ಪಿಸಿಲ್ಲ: ಆರೋಪ
Published 22 ಮೇ 2024, 0:27 IST
Last Updated 22 ಮೇ 2024, 0:27 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಬೀಜ, ಗೊಬ್ಬರ ಪಡೆಯಲು ನಾವು ಬಿಸಿಲಲ್ಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಇಲ್ಲಿ ನೆರಳಿನ ವ್ಯವಸ್ಥೆ ಮಾಡಿಲ್ಲ. ನೀರಿನ ಸೌಲಭ್ಯ ಕಲ್ಪಿಸಿಲ್ಲ’ ಎಂದು ರೈತರು ಮಂಗಳವಾರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಸಂಕಷ್ಟ ಹೇಳಿಕೊಂಡರು.

‘ಜೋರು ಬಿಸಿಲಿದೆ. ನೀರಿನ ಸಮಸ್ಯೆಯೂ ಇದೆ. ಬರ ಆವರಿಸಿದೆ. ಎಲ್ಲವನ್ನೂ ಎದುರಿಸಿಕೊಂಡೇ ಇಲ್ಲಿ ಬೀಜ, ಗೊಬ್ಬರ ತೆಗೆದುಕೊಳ್ಳಲು ಬಂದಿದ್ದೇವೆ. ಅಧಿಕಾರಿಗಳು ನಮ್ಮ ಪರಿಸ್ಥಿತಿ ಅರಿತು, ಕನಿಷ್ಠ ಮೂಲಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕಿತ್ತು. ರೈತರ ಬಗ್ಗೆ ಹೀಗೆ ನಿರ್ಲಕ್ಷ್ಯ ವಹಿಸಿದರೆ ಹೇಗೆ’ ಎಂದು ರೈತರಾದ ಮಂಜುನಾಥ ಸವೂರ ಮತ್ತು ಹನುಮೇಶ ಹಳವಳ್ಳಿ ಬೇಸರ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳ ಮುಂಭಾಗ ರೈತರು ಸಾಲುಗಟ್ಟಿ ನಿಂತಿದ್ದರು. ಕೆಲಹೊತ್ತಿನ ನಂತರ ಬಿತ್ತನೆ ಬೀಜ ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂದಿತು.  

ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಡಿಸಿ

‘ಹಾವೇರಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಳಿಗೆಯಲ್ಲಿ ದರಪಟ್ಟಿ ರೈತರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರುವುದು, ಬಿಲ್ ನೀಡದಿರುವುದು, ಅವಧಿ ಮೀರಿದ ಕೃಷಿ ಪರಿಕರಗಳನ್ನು ವಿತರಿಸುವುದು ಅಥವಾ ರಸಗೊಬ್ಬರ ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾರಾಟಗಾರರ ಪರವಾನಗಿ ರದ್ದು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಚ್ಚರಿಕೆ ನೀಡಿದ್ದಾರೆ. 

ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದ ಮುಂಭಾಗ ಬಿತ್ತನೆ ಬೀಜ ಪಡೆಯಲು ಬಿಸಿಲಿನಲ್ಲೇ ಸಾಲುಗಟ್ಟಿ ರೈತರು ನಿಂತಿದ್ದರು  – ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದ ಮುಂಭಾಗ ಬಿತ್ತನೆ ಬೀಜ ಪಡೆಯಲು ಬಿಸಿಲಿನಲ್ಲೇ ಸಾಲುಗಟ್ಟಿ ರೈತರು ನಿಂತಿದ್ದರು  – ಪ್ರಜಾವಾಣಿ ಚಿತ್ರ 

‘ಬಿಸಿಲಿದ್ದರೆ ಶಾಮಿಯಾನ’ ‘ಬಂಕಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ಸರತಿಯಲ್ಲಿ ನಿಂತ ರೈತರಿಗೆ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ನಾಳೆ ಇದೇ ರೀತಿ ಬಿಸಿಲು ಇದ್ದರೆ ಶಾಮಿಯಾನ ಹಾಕಲಾಗುವುದು. ರೈತರಿಗೆ  ತೊಂದರೆ ಆಗದಂತೆ ಬೀಜ ವಿತರಿಸುತ್ತೇವೆ’ ಎಂದು ಬಂಕಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ ದಾಸರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT