ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಆಸ್ಪತ್ರೆ ಮಾಡಿದ ವೈದ್ಯೆ ಸಹನಾ

Published 9 ಮಾರ್ಚ್ 2024, 4:23 IST
Last Updated 9 ಮಾರ್ಚ್ 2024, 4:23 IST
ಅಕ್ಷರ ಗಾತ್ರ

ಕುಮಾರಪಟ್ಟಣ: ಮಾಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 2 ಕಂದಾಯ ಗ್ರಾಮ ಸೇರಿದಂತೆ 12 ಹಳ್ಳಿಗಳು ಒಳಪಟ್ಟಿವೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಜಿಲ್ಲೆಯಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ.

ವೈದ್ಯಾಧಿಕಾರಿ ಡಾ.ಸಹನಾ ಎಸ್‌.ಎಚ್‌ ಅವರು ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಕೆಂಪು, ಹಳದಿ, ಬಿಳಿ, ಕಪ್ಪು ವರ್ಣದ ಕಸದ ಬುಟ್ಟಿಗಳನ್ನು ಆಸ್ಪತ್ರೆಯಲ್ಲಿ ಇರಿಸಿ ಬಳಸಲಾಗುತ್ತಿದೆ.

ಆರು ಬೆಡ್‌ನ ಸಾಮರ್ಥ್ಯವುಳ್ಳ ಕೇಂದ್ರದಲ್ಲಿ ಸುಸಜ್ಜಿತ ಪ್ರಯೋಗಾಲಯ, ಶುದ್ಧ ಕುಡಿಯುವ ನೀರು, ಕೂರುವ ಆಸನಗಳು, ರೋಗಿಗಳಿಗೆ ಹೊರಗಡೆ ಔಷಧಿ ಕೊಳ್ಳಲು ಅವಕಾಶ ನೀಡದೆ ಆರೋಗ್ಯ ಕೇಂದ್ರದಿಂದಲೇ ಔಷಧಿ ವಿತರಣೆ, ಎನ್‌ಜಿಒ ಸಹಾಯದಿಂದ ಸೌರ ವಿದ್ಯುತ್‌ ಶಕ್ತಿ ಬಳಕೆ, ಶಾಲಾ ಮಕ್ಕಳಿಗೆ ಆಶಾಕಿರಣ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಿ ದೃಷ್ಠಿದೋಷ ನಿವಾರಣೆಗೆ ಒತ್ತು ನೀಡಲಾಗಿದೆ.

ಒಂದೇ ವರ್ಷದಲ್ಲಿ 500ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರ ನೋಂದಾವಣೆ ಮಾಡಿ ಅವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಇಟ್ಟಿಗೆ ಭಟ್ಟಿ, ಗುಡಿಸಲು ವಾಸಿಗಳಿಗೆ ಸೊಳ್ಳೆ ಪರದೆ ವಿತರಿಸಿ ಅವರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಲಾಗಿದೆ. ನಿಕ್ಷಯ ಯೋಜನೆಯಡಿಯಲ್ಲಿ ಕ್ಷಯ ರೋಗಿಗಳಿಗೆ ಆಸಕ್ತ ದಾನಿಗಳಿಂದ ಹಣ್ಣು-ಹಂಪಲು, ದಿನಸಿ ವಿತರಿಸಲಾಗಿದೆ ಎಂದು ಸಹನಾ ವಿವರಿಸುತ್ತಾರೆ

ಕೇಂದ್ರದಲ್ಲಿ ಹಲವು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಚರಿಸಲಾಗುವುದು. ಆಸ್ಪತ್ರೆ ಕಟ್ಟಡದ ಹೊರಂಗಾಣದಲ್ಲಿ ಹಸಿರು ಕಂಗೊಳಿಸುವಂತೆ ಸಸಿಗಳನ್ನು ನೆಡಲಾಗಿದೆ. ಇದಲ್ಲದೆ ಅರಣ್ಯ ಇಲಾಖೆ ಸಹಕಾರದಿಂದ ಔಷಧಿ ಗುಣವುಳ್ಳ ಸಸಿಗಳನ್ನು ಪೋಷಿಸಲಾಗಿದೆ.

ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಾಮಾನ್ಯ ವಿಷಯವಾಗಿತ್ತು. ಆದರೆ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಪುರುಷ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಯಶಸ್ಸು ಕಂಡಿದ್ದಾರೆ. ಸಿಬ್ಬಂದಿ ಹಾಗೂ ರೋಗಿಗಳ ಮನಃ ಶಾಂತಿಗಾಗಿ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಬಹುಮುಖ ಪ್ರತಿಭೆ ಡಾ.ಸಹನಾ

ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಅದಮ್ಯ ಆಸಕ್ತಿ ಹೊಂದಿದ್ದ ಡಾ.ಸಹನಾ ಅವರು ಇಲಾಖೆಯಿಂದ ನಡೆಸುವ ತಾಲ್ಲೂಕು ಜಿಲ್ಲೆ ರಾಜ್ಯ ಮಟ್ಟದ ಕಬಡ್ಡಿ ಕುಸ್ತಿ ಹಾಗೂ ಈಜು ಸ್ಪರ್ಧೆಯಲ್ಲಿ ಪ್ರತಿವರ್ಷ ಭಾಗವಹಿಸುತ್ತಿದ್ದಾರೆ. ತಮ್ಮ ಸೇವಾವಧಿ ಮುಗಿದ ಬಳಿಕ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರಿಗೆ ಕಬಡ್ಡಿ ತರಬೇತಿ ನೀಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಕೀಡೆ ಮತ್ತು ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಸರ್ಕಾರ ಎಲ್ಲ ಸೌಲಭ್ಯಗಳನ್ನು ಪೂರೈಸುತ್ತಿದೆ. ಜನರು ಆರ್ಥಿಕ ಸಂಕಷ್ಠಕ್ಕೆ ಸಿಲುಕದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು.
ಡಾ. ಸಹನಾ.ಎಸ್‌.ಎಚ್‌, ವೈದ್ಯಾಧಿಕಾರಿ, ಪ್ರಾ.ರಾ.ಆರೋಗ್ಯ ಕೇಂದ್ರ ಮಾಕನೂರು
ಮಾಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಒಳನೋಟ
ಮಾಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಒಳನೋಟ
ಡಾ. ಸಹನಾ.ಎಸ್‌.ಎಚ್‌.
ಡಾ. ಸಹನಾ.ಎಸ್‌.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT