ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: 12 ದಿನಕ್ಕೊಮ್ಮೆ ಕುಡಿಯುವ ನೀರು

ಸಿಬ್ಬಂದಿ ನಿರ್ಲಕ್ಷ್ಯ, ನಿತ್ಯ ಪೋಲಾಗುತ್ತಿದೆ ನೀರು: ಹೆಚ್ಚಿದ ಹಾಹಾಕಾರ
Published 2 ಏಪ್ರಿಲ್ 2024, 4:15 IST
Last Updated 2 ಏಪ್ರಿಲ್ 2024, 4:15 IST
ಅಕ್ಷರ ಗಾತ್ರ

ಶಿಗ್ಗಾವಿ: ಬೇಸಿಗೆ ತಾಪಮಾನ ಹೆಚ್ಚಾಗುತ್ತಿದ್ದಂತೆ ನೀರಿನ ಮೂಲಗಳು ಸಹ ಬರಿದಾಗುತ್ತಿವೆ. ಅದರಿಂದಾಗಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಕುಡಿಯುವ ನಳದ ನೀರನ್ನು ಹನ್ನೆರಡು ದಿನಕ್ಕೊಮ್ಮೆ ಬಿಡಲಾಗುತ್ತಿದೆ. ಅದರಿಂದ ಪಟ್ಟಣದ ಜನತೆ ಕುಡಿಯುವ ಹನಿ ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣದಲ್ಲಿ ಸುಮಾರು 35 ಸಾವಿರಕ್ಕಿಂತ ಹೆಚ್ಚಿನ ಜನ ವಾಸವಾಗಿದ್ದಾರೆ. ಮೂರು ಸಾವಿರದಷ್ಟು ಕುಡಿಯುವ ನೀರಿನ ನಳಗಳನ್ನು ಜೋಡಿಸಲಾಗಿದೆ. ಅದರಲ್ಲಿ ನೂರರಷ್ಟು ಅಕ್ರಮವಾಗಿ ನಳಗಳನ್ನು ಜೋಡಿಸಲಾಗಿದೆ. ಅಕ್ರಮ ನಳಗಳ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗುತ್ತಿದೆ. ನಳದ ಬಿಲ್ ಪಾವತಿ ಮಾಡುತ್ತಿಲ್ಲ. ಅದರಿಂದ ಪುರಸಭೆಗೆ ಯಾವುದೇ ಆದಾಯವಿಲ್ಲದಾಗಿದೆ. ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಜರುಗಿಸದೆ ಅಸಹಾಯಕರಂತೆ ನಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಪಟ್ಟಣದಲ್ಲಿ ಸುಮಾರು 44 ಮಿನಿ ಟ್ಯಾಂಕರ್‌ಗಳಿವೆ. ಅವುಗಳಿಂದ ಮನೆ ಬಳಕೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಕೊಳವೆ ಬಾವಿಗಳು ಕಾಮಗಾರಿಯಲ್ಲಿ ಮುಚ್ಚಿ ಹೋಗಿವೆ. ಕೆಲವೇ ಕೊಳವೆ ಬಾವಿ ಮಾತ್ರ ಉಳಿದಿವೆ. ಹೀಗಾಗಿ ನೀರಿನ ಬವಣೆ ಹೆಚ್ಚಾಗಲು ಕಾರಣವಾಗಿದೆ.

ಪಟ್ಟಣದ ಕೊಟ್ಟಿಗೇರಿ ಜನತೆಗೆ ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲ. ಪುರಬಸವೇಶ್ವರ ದೇವಸ್ಥಾನದ ಮುಂದಿರುವ ಸಾರ್ವಜನಿಕ ನಳವೇ ಇಲ್ಲಿನ ಜನರಿಗೆ ಆಶ್ರಯವಾಗಿದೆ. ದಿನವಿಡೀ ಕೆಲಸ ಕಾರ್ಯ ಬಿಟ್ಟು ಮಹಿಳೆಯರು, ಮಕ್ಕಳು ನೀರಿಗಾಗಿ ಕಾಯಬೇಕಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಲಿಖಿತವಾಗಿ, ಮೌಖಿಕವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರನ್ನು ಹದಿನೈದು ದಿನಗಳವರೆಗೆ ತುಂಬಿಟ್ಟುಕೊಳ್ಳುವುದು ಹೇಗೆ ಎಂದು ಇಲ್ಲಿನ ನಿವಾಸಿಗಳಾದ ಚಂದ್ರಶೇಖರ ಭಂಗಿ, ಮಹೇಶ ಕುಂದಗೋಳ, ಮಂಜುನಾಥ ಮನ್ನಂಗಿ ಅಳಲು ವ್ಯಕ್ತಪಡಿಸುತ್ತಾರೆ.

ಪಟ್ಟಣದಲ್ಲಿ ಸುಮಾರು ಆರು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ಡಾಣೆಭಾಗ ಓಣಿ ಮತ್ತು ಕೊಟ್ಟಿಗೇರಿ ಕಾಳಮ್ಮ ದೇವಸ್ಥಾನದ ಓಣಿಯಲ್ಲಿನ ಘಟಕಗಳು ಈ ವರೆಗೆ ಆರಂಭವಾಗಿಲ್ಲ. ಹೀಗಾಗಿ ನಾಲ್ಕು ಘಟಕಗಳಿಂದ ಪಟ್ಟಣದ ಜನತೆಗೆ ನೀರು ಪೂರೈಸಲು ಸಾಧ್ಯವಿಲ್ಲದಾಗಿದೆ. ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಇಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಾರೆ.

ಪಟ್ಟಣದಲ್ಲಿ ಸುಮಾರು 76 ಕೊಳವೆ ಭಾವಿಗಳಿದ್ದು, ಕೆಲವು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಇನ್ನು ಕೆಲವು ದುರಸ್ತಿಯಲ್ಲಿವೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಬೇಸಿಗೆಯಲ್ಲಿ ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ವಿತರಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ ಹೇಳಿದರು.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಗಂಜೇನವರ ವಕೀಲರ ಮನೆ ಮುಂದಿನ ನೀರಿನ ಟ್ಯಾಂಕ್‌ನಿಂದ ನೀರು ಚರಂಡಿಗೆ ಹರಿದು ಪೋಲಾಗುತ್ತಿರುವುದು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಗಂಜೇನವರ ವಕೀಲರ ಮನೆ ಮುಂದಿನ ನೀರಿನ ಟ್ಯಾಂಕ್‌ನಿಂದ ನೀರು ಚರಂಡಿಗೆ ಹರಿದು ಪೋಲಾಗುತ್ತಿರುವುದು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿಯಲ್ಲಿ ಮಹಿಳೆಯರು ವಯೋವೃದ್ಧರು ಸೈಕಲ್ ಗಾಡಿಯಿಂದ ನೀರು ತರುತ್ತಿರುವುದು.
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿಯಲ್ಲಿ ಮಹಿಳೆಯರು ವಯೋವೃದ್ಧರು ಸೈಕಲ್ ಗಾಡಿಯಿಂದ ನೀರು ತರುತ್ತಿರುವುದು.

ಪಟ್ಟಣದಲ್ಲಿನ ಕೆಲವು ಕಡೆ ನೀರು ಪೋಲಾಗುವುದನ್ನು ಗುರುತಿಸಿ ಸಿಬ್ಬಂದಿ ನೇಮಿಸುವ ಜತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ವಾರಕ್ಕೆ ಒಮ್ಮೆ ನೀರು ವಿತರಿಸುವ ಕಾರ್ಯ ಮಾಡಲಾಗುತ್ತದೆ.

–ಎ.ಶಿವಪ್ಪ ಪುರಸಭೆ ಮುಖ್ಯಾಧಿಕಾರಿ ಬಂಕಾಪುರ

ನೀರು ನಿರ್ವಹಣೆಗಾಗಿ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅವಶ್ಯ ಬಿದ್ದರೆ ಮಾತ್ರ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವದು. ಈವರೆಗೆ ಯಾವುದೇ ಸಮಸ್ಯೆಯಾಗಿಲ್ಲ

–ಮಾಲತೇಶ ಅಗಡಿ ಪುರಸಭೆ ಎಂಜಿನಿಯರ್ ಬಂಕಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT