ಭಾನುವಾರ, ಜುಲೈ 25, 2021
25 °C
ಅಂಗವಿಕಲ ಯುವತಿಯ ಮಾದರಿ ನಡೆ

ಬ್ಯಾಡಗಿ | ಕಾರ್ಮಿಕರ ಮಕ್ಕಳಿಗೆ ಅಕ್ಷರ ದಾಸೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ಒಂದೆಡೆ ಸುಡುಬಿಸಿಲಲ್ಲಿ ಕೆರೆನಿರ್ಮಾಣದಲ್ಲಿ ಹಿರಿಯರು ನಿರತರಾಗಿದ್ದರೆ, ಇನ್ನೊಂದೆಡೆ ಒಂದಷ್ಟು ಮಕ್ಕಳು ಜೋರು ಧ್ವನಿಯಲ್ಲಿ ಮಗ್ಗಿ ಹೇಳುತ್ತಾರೆ. ಕ, ಕಾ ಬಳ್ಳಿ ಹೇಳುತ್ತಾರೆ. ಹೀಗೊಂದು ಪುಟ್ಟ ಶಾಲೆ ಕೆರೆಯಂಗಳದಲ್ಲಿ ಆರಂಭವಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಹೆಡಿಗ್ಗೊಂಡದಲ್ಲಿ ಪ್ರತಿದಿನವೂ ಕಾಣಿಸುವ ದೃಶ್ಯ ಇದು. ಮಕ್ಕಳು ಶಿಸ್ತಾಗಿ ಕುಳಿತುಕೊಂಡು ಪಾಠ ಕೇಳುತ್ತಾರೆ. ಆಟ ಆಡುತ್ತಾರೆ. ಕೂಲಿ ಕಾರ್ಮಿಕರ ಮಕ್ಕಳಿಗೆ, ತಿಮಕಾಪುರದ ಅಂಗವಿಕಲ ಯುವತಿ ಮತ್ತವ್ವ ದೇಸೂರ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ.

ಕೊರೊನಾ ಭೀತಿಯಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ, ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಡಲಾಗದೆ, ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಸ್ಥಳದಲ್ಲಿ ಸುಮ್ಮನೆ ಕಾಲ ಕಳೆಯುವ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಓದಿರುವ ಮತ್ತವ್ವ ಅವರು, ಆಟದ ಜತೆಗೆ ಪಾಠವನ್ನು ಹೇಳಿ ಕೊಡುತ್ತಿದ್ದಾರೆ.

‘ನರೇಗಾ ಕಾಮಗಾರಿಯಲ್ಲಿ ಇಬ್ಬರು ಅಂಗವಿಕಲರಿಗೆ ಕೂಲಿ ನೀಡಬೇಕೆಂಬ ನಿಯಮವಿದೆ. ಅದರಂತೆ, ಓದು–ಬರಹ ಬಲ್ಲ ಮತ್ತವ್ವನಿಗೆ ಕಾಮಗಾರಿ ಸ್ಥಳದಲ್ಲಿರುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಕೆಲಸ ವಹಿಸಲಾಗಿದೆ’ ಎಂದು ಪಿಡಿಒ ರಮೇಶ ಹುಲಸೋಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ 250ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಅವಧಿಯಲ್ಲಿ ಕೆಲವರು ಚಿಕ್ಕ ಮಕ್ಕಳನ್ನು ಜೊತೆಗೆ ಕರೆ ತರುತ್ತಾರೆ. ಅಂತಹ ಮಕ್ಕಳಿಗೆ, ಮತ್ತವ್ವ ಸ್ಥಳದಲ್ಲೇ ಆಟದೊಂದಿಗೆ ಪಾಠವನ್ನು ಹೇಳಿ ಕೊಡುತ್ತಾರೆ. ಅವರಿಗೆ ನರೇಗಾ ಯೋಜನೆಯಡಿ ಕೂಲಿ ಕೂಡ ಪಾವತಿಸಲಾಗುತ್ತದೆ’ ಎಂದರು.

*
ಹದಿನೈದು ದಿನದಿಂದ ನರೇಗಾ ಕಾರ್ಮಿಕರ 16 ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದೇನೆ. ಅವರೂ ಖುಷಿಯಿಂದ ಕಲಿಯುತ್ತಿದ್ದಾರೆ
– ಮುತ್ತವ್ವ ದೇಸೂರ, ತಿಮಕಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು