ತಡಸ (ಹೊಸೂರ): 2023– 24ನೇ ಸಾಲಿನ ಹೊಸೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳೆವಿಮೆ ಪಾವತಿ ಆಗದಿರುವುದನ್ನು ಖಂಡಿಸಿ ರೈತರು ತಡಸ ಹಾನಗಲ್ ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ರಿಲಯನ್ಸ್ ಕಂಪನಿಯು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು, ಯತ್ತಿನಹಳ್ಳಿ, ಅಮ ಮಸಲಿಕೊಪ್ಪ, ಅಮ ಹಿರೇಕೊಪ್ಪ, ಅರಟಾಳ, ಬಸವನಕೊಪ್ಪ, ಜೊಂಡಲಕಟ್ಟಿ ಮತ್ತು ಮಾಕಾಪೂರ ಗ್ರಾಮದ ಯಾವೊಬ್ಬ ರೈತರಿಗೂ ಬೆಳೆ ವಿಮೆ ಪಾವತಿ ಮಾಡಿಲ್ಲ. ಗೋವಿನ ಜೋಳ ಹಾಗೂ ಬತ್ತದ ಬೆಳೆ ವಿಮೆಯಾಗಿದ್ದು ಸಾವಿರಾರು ರೈತರ ಬೆಳೆವಿನ ಕಟ್ಟಿದ್ದರೂ ಅವರ ಖಾತೆಗೆ ಬೆಳೆಯುವ ಜಾಗ ಇಲ್ಲ ಎಂದು ಹಾಗೂ ಕಳೆದ ವರ್ಷ ಬಿತ್ತಿದ ಬೀಜ ಹಾಕಿದ ಗೊಬ್ಬರ ಎಲ್ಲವೂ ಹಾಳಾಗಿದ್ದು ಅತಿ ಹೆಚ್ಚು ಹಾನಿಯನ್ನು ಅನುಭವಿಸಿದ್ದಾರೆ. ಕೂಡಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಶಿವಾನಂದ ಮ್ಯಾಗೇರಿ ಮಾತನಾಡಿ, ಕಳೆದ ವರ್ಷ ಮಳೆಬಾರದೇ ಬೆಳೆ ಹಾಳಾಯಿತು. ಈ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಸರ್ಕಾರ ರೈತರ ಪರ ನಿಲುವುಗಳನ್ನು ತಾಳಬೇಕಾಗಿದೆ. ಸಮಗ್ರ ಅಧ್ಯಯನ ಮಾಡಿ ಹೊಸೂರ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೂ ರೈತರ ಬೆಳೆ ವಿಮೆಯನ್ನು ಪಾವತಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೈತ ತಿಪ್ಪಣ್ಣ ಸಾತಣ್ಣವರ ಮಾತನಾಡಿ, ಸರ್ಕಾರವು ಕಂಪನಿಯ ಜೊತೆಗೆ ರೈತರಿಗೆ ಮೋಸ ಆಗದಂತೆ ನಿಯಮಗಳನ್ನು ಜಾರಿ ಮಾಡಬೇಕು. ರೈತರು ಮಾಡಿಸಿದ ಬೆಳವಿಮೆಯನ್ನು ಸಮರ್ಪಕ ಸಮಯದಲ್ಲಿ ಅವರ ಖಾತೆಗೆ ಜಮಾ ಮಾಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂತೋಷ ಹಿರೇಮಠ ಅವರು, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬೆಳೆ ವಿಮೆ ಪಾವತಿ ಆಗದಿರುವ ಕುರಿತು ಈಗಾಗಲೇ ಕಂಪನಿ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಇನ್ನೂ 15 ದಿನಗಳಲ್ಲಿ ಬೆಳೆ ವಿಮೆ ಜಮೆ ಮಾಡುವಂತೆ ಕಂಪನಿ ಜೊತೆ ಮಾತನಾಡುತ್ತೇವೆ ಎಂದು ಭರವಸೆ ನೀಡಿದರು.
ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಲೆ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಈರಣ್ಣ ಸಮಗೊಂಡ, ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ಈರಪ್ಪ ಸುಣಗಾರ, ವೀರೇಶ ಪಾಟೀಲ್, ಕೆಸಿಸಿ ಬ್ಯಾಂಕ್ ಸಂಗಮೇಶ ಕಂಬಾಳಿಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಲಮಾಣಿ, ಜಿವಾಜಿ ಕುಲ್ಕರ್ಣಿ, ಮಹಾವೀರ ಧಾರವಾಡ, ಹರ್ಜಪ್ಪ ಲಮಾಣಿ, ನಾಗರಾಜ ಸೋರಗೊಂಡ, ಗದೆಗೆಪ್ಪ ಹೊನ್ನಿಹಳ್ಳಿ, ಬಾಹುಬಲಿ ಸೋಗಲಿ, ಈರಪ್ಪ ಡವಗಿ, ಹಾದಪ್ಪ ಛಬ್ಬಿ, ಶೇಕಪ್ಪ ಸೋರಾಗೊಂಡ ಹಲವಾರು ರೈತರು ಸಂಘಟನೆಯ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.