ಶುಕ್ರವಾರ, ಅಕ್ಟೋಬರ್ 30, 2020
27 °C

ರೈತ ವಿರೋಧಿ ಮಸೂದೆಗಳ ಜಾರಿಗೆ ವಿರೋಧ: ‘ಹಾವೇರಿ ಬಂದ್‌’ಗೆ ರೈತಸಂಘ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಯತ್ನಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಸೆ.28ರಂದು ‘ಹಾವೇರಿ ಬಂದ್‌’ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಮಾಲತೇಶ ಪೂಜಾರ ಹೇಳಿದರು.

ನಗರದ ಮುರುಘಾ ಮಠದಿಂದ ತಮಟೆ ಬಾರಿಸುವ ಮೂಲಕ ಪ್ರತಿಭಟನಾ ಜಾಥಾಕ್ಕೆ ಚಾಲನೆ ನೀಡಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಮತ್ತು ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು. 

ರೈತರ ಹಿತಕ್ಕೆ ಧಕ್ಕೆ: ‘ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ವಿದ್ಯುತ್‌ ಖಾಸಗೀಕರಣ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ರೈತರ ಹಿತವನ್ನು ಬಲಿ ಕೊಡುತ್ತಿದೆ. ಬಂಡವಾಳ ಶಾಹಿ ಮತ್ತು ಕಾರ್ಪೊರೇಟ್‌ ವಲಯಕ್ಕೆ ಮಣೆ ಹಾಕುತ್ತಿದೆ. ಅಧಿವೇಶನದ ಆರಂಭದ ದಿನದಿಂದ ರೈತಸಂಘ ಮತ್ತು ಇತರ ಸಂಘಟನೆಗಳು ಮುಷ್ಕರ ನಡೆಸಿದರೂ, ಇದನ್ನು ನಿರ್ಲಕ್ಷಿಸಿ ಸರ್ಕಾರ ಮಸೂದೆಗಳನ್ನು ಮಂಡನೆ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದೇಶದ್ರೋಹದ ಪಟ್ಟ: ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಕ್ಷತಾ ಕೆ.ಸಿ. ಮಾತನಾಡಿ, ‘ರೈತಸಂಘ ಮತ್ತು ಸಂಬಂಧಪಟ್ಟವರ ಜತೆ ಕೂಲಂಕಷವಾಗಿ ಚರ್ಚೆಯನ್ನೇ ನಡೆಸದೆ ತರಾತುರಿಯಲ್ಲಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ. ಸರ್ಕಾರದ ಎಡವಟ್ಟು ನೀತಿಗಳ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ದೇಶದ್ರೋಹಿ ಪಟ್ಟ ಕಟ್ಟುವ ಹುನ್ನಾರ ನಡೆಯುತ್ತಿದೆ. ಬಿಹಾರದಲ್ಲಿ ಎಪಿಎಂಸಿಗಳು ಬಂದ್‌ ಆಗಿ, ರೈತರು ಬೀದಿಪಾಲಾಗುತ್ತಿದ್ದಾರೆ’ ಎಂದು ದೂರಿದರು. 

‘ರೈತರ ಆತ್ಮಹತ್ಯೆ ತಡೆಯುತ್ತೇನೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರ ಆತ್ಮಹತ್ಯೆ ಹೆಚ್ಚಳಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಆಸೀಪ್‌ ಜಗಳೂರ, ಎಂ.ಎನ್‌.ನಾಯಕ, ಚನ್ನಪ್ಪ ಮರಡೂರ, ಮುತ್ತು ಗುಡಗೇರಿ, ಗೋಣೆಪ್ಪ ಕರಿಗಾರ, ರಾಜು ತರ್ಲಘಟ್ಟ, ಹಾಲೇಶ್‌ ಕೆರೋಡಿ, ನೂರ್‌ ಅಹಮದ್ ಮುಲ್ಲಾ, ಬಸವರಾಜ ತಳವಾರ, ಜಯ ಕರ್ನಾಟಕ ಸಂಘಟನೆಯ ಸುಭಾಸ ಬೆಂಗಳೂರು, ರಮೇಶ ಆನವಟ್ಟಿ ಹಾಗೂ ಮಹದೇವಪ್ಪ ಮಾಳಪ್ಪನವರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು