ಶನಿವಾರ, ಅಕ್ಟೋಬರ್ 8, 2022
21 °C
ಹಳ್ಳಿಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಸ್ವಚ್ಛತಾ ಕಾರ್ಯ: ಉದ್ಘಾಟನೆಗೆ ಕಾದಿರುವ ಘನತ್ಯಾಜ್ಯ ಘಟಕಗಳು

ಹಾವೇರಿ | ಕಸ ವಿಲೇವಾರಿ; ತಪ್ಪದ ಕಿರಿಕಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆ ಬದಿ ಕಸದ ರಾಶಿ ಮತ್ತು ತಿಪ್ಪೆಗುಂಡಿಗಳಿದ್ದು ಅನೈರ್ಮಲ್ಯ ವಾತಾವರಣ ಸೃಷ್ಟಿಸಿವೆ. ಮನೆ–ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. 

ಕಸ ವಿಲೇವಾರಿ ವಾಹನಗಳಿಗೆ ಚಾಲಕರ ಕೊರತೆ ಕಾಡುತ್ತಿದೆ. ಮನೆ–ಮನೆಗಳಿಗೆ ಕಸದ ಡಬ್ಬಿಗಳನ್ನೂ ಬಹುತೇಕ ಕಡೆ ವಿತರಿಸಿಲ್ಲ. ಕೆಲವು ಕಡೆ ಘನತ್ಯಾಜ್ಯ ಘಟಕ ನಿರ್ಮಿಸಿದ್ದರೂ ಉದ್ಘಾಟನೆಗೊಂಡಿಲ್ಲ. ಇನ್ನೂ ಕೆಲವು ಕಡೆ ಕಾಮಗಾರಿ ಅಪೂರ್ಣವಾಗಿದೆ. ಘನತ್ಯಾಜ್ಯ ಘಟಕಗಳಿಲ್ಲದ ಕಾರಣ ಮನೆ–ಮನೆಗಳಿಂದ ಸಂಗ್ರಹಿಸಿದ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬುದು ಮಹಿಳಾ ಒಕ್ಕೂಟದ ಸದಸ್ಯರಿಗೆ ದೊಡ್ಡ ತಲೆನೋವಾಗಿದೆ. 

‘ಹಾವೇರಿ ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಿಗೆ ತಲಾ ₹ 5.5 ಲಕ್ಷ ವೆಚ್ಚದ ‘ಸ್ವಚ್ಛ ವಾಹಿನಿ’ ಕಸ ವಿಲೇವಾರಿ ವಾಹನಗಳು ಬಂದಿವೆ. ಈಗಾಗಲೇ 62 ಮಹಿಳಾ ಚಾಲಕರಿಗೆ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಿಡಿಒಗಳಿಗೂ ತರಬೇತಿ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 105 ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದ ಕಡೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ’ ಎಂದು ಸ್ವಚ್ಛ ಭಾರತ ಮಿಷನ್‌ನ ಜಿಲ್ಲಾ ನೋಡಲ್‌ ಅಧಿಕಾರಿ ಎಸ್‌.ಬಿ.ಮುಳ್ಳಳ್ಳಿ ತಿಳಿಸಿದರು.

‘ಘನತ್ಯಾಜ್ಯ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳಾ ಒಕ್ಕೂಟದ ಸದಸ್ಯರಿಗೆ ನೀಡಲಾಗಿದೆ. ಕೆಲವು ಕಡೆ ಗ್ರಾಮ ಪಂಚಾಯಿತಿಯವರೇ ನಿರ್ವಹಿಸುತ್ತಾರೆ. ಕಸದಿಂದ ಉತ್ಪಾದನೆಯಾದ ಎರೆಹುಳು ಗೊಬ್ಬರವನ್ನು ಮಾರಾಟ ಮಾಡಿ, ಬಂದ ಆದಾಯವನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗೇ ನೀಡಲಾಗುತ್ತದೆ’ ಎಂದು ಮುಳ್ಳಳ್ಳಿ ಮಾಹಿತಿ ನೀಡಿದರು. 

ಕೆಟ್ಟು ನಿಂತ ಕಸದ ವಾಹನ
ಗುತ್ತಲ:
ಹಾವನೂರ ಗ್ರಾಮ ಪಂಚಾಯಿತಿಯಲ್ಲಿ 2 ವರ್ಷಗಳ ಹಿಂದೆ ಪ್ರತಿ ಮನೆಗೆ ಬಕೆಟುಗಳನ್ನು ವಿತರಣೆ ಮಾಡಲಾಗಿದೆ. ಹಳೆಕಟ್ಟಡದಲ್ಲಿ ಘನತ್ಯಾಜ್ಯ ವಿಲೇವಾರಿ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಗ್ರಾಮದಲ್ಲಿ ಯಾವ ಕಸವನ್ನು ಸಂಗ್ರಹಿಸಿಲ್ಲ. ಕಸ ವಿಲೇವಾರಿ ಮಾಡಿಲ್ಲ. ಹೊಸ ವಾಹನ ನಿಂತ ಸ್ಥಳದಲ್ಲಿ ಕೆಟ್ಟು ಸುಟ್ಟು ನಿಂತಿದೆ ಗ್ರಾಮಸ್ಥರು ದೂರಿದರು. 

ಕುಂಟುತ್ತಾ ಸಾಗಿರುವ ಕಸ ಸಂಗ್ರಹಣೆ
ಶಿಗ್ಗಾವಿ: 
ಗ್ರಾಮೀಣ ಭಾಗದಲ್ಲಿ ಓಣಿ, ಓಣಿಗಳಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಮನೆ–ಮನೆಯಿಂದ ಕಸ ಸಂಗ್ರಹಣಾ ಕಾರ್ಯ ಕುಂಟುತ್ತಾ ಸಾಗಿದೆ. 

‘ಚರಂಡಿ ಸ್ವಚ್ಛ ಮಾಡಿ ರಸ್ತೆ ಬದಿ ಕಸ ಬಿಡಲಾಗುತ್ತಿದೆ. ಅದನ್ನು ಸುಮಾರು ದಿನಗಳವರೆಗೆ ಅಲ್ಲೇ ಬಿಡುವುದರಿಂದ ಅದೇ ಕಸ ಮತ್ತೆ ಚರಂಡಿಗೆ ಬೀಳುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಚನ್ನಪ್ಪ ಹಳವಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.

ತುಂಬಿ ತುಳುಕುತ್ತಿರುವ ಚರಂಡಿಗಳು
ಸವಣೂರು:
ತಾಲ್ಲೂಕಿನ ಹತ್ತಿಮತ್ತೂರು, ತೆಗ್ಗಿಹಳ್ಳಿ ಸೇರಿದಂತೆ ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲೇ ಕಸ ಸುರಿಯಲಾಗುತ್ತಿದೆ. ಹೂಳು ತೆಗಿಸಿ, ಸ್ವಚ್ಛ ಮಾಡದ ಕಾರಣ ಚರಂಡಿಗಳೆಲ್ಲ ತುಂಬಿ ದುರ್ವಾಸನೆ ಬಿರುತ್ತಿವೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಜನರು ಸಾಂಕ್ರಾಮಿಕ ರೋಗದ ಭೀತಿಯನ್ನು ಅನುಭವಿಸುತ್ತಿದ್ದಾರೆ.

‘ಸವಣೂರು ತಾಲ್ಲೂಕಿನ 21 ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 8 ರಿಂದ 10 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಇನ್ನುಳಿದ ಪಂಚಾಯ್ತಿಗಳಲ್ಲಿ ಘಟಕಗಳು ನಿರ್ಮಾಣ ಹಂತದಲ್ಲಿದ್ದು ಬೇಗನೆ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸವಣೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನಪ್ರಸಾದ ಕಟ್ಟಿಮನಿ ತಿಳಿಸಿದರು.

ಘನತ್ಯಾಜ್ಯ ಘಟಕಗಳ ಕೊರತೆ
ರಟ್ಟೀಹಳ್ಳಿ:
ಗ್ರಾಮೀಣ ಭಾಗದಲ್ಲಿ ನಿತ್ಯ ಸಂಗ್ರಹವಾಗುವ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ತಾಲ್ಲೂಕಿನ ಕೆಲವೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕಸ ವಿಲೇವಾರಿ ವಾಹನಗಳು ಇದ್ದರೂ ಚಾಲಕರು ಮತ್ತು ಸಿಬ್ಬಂದಿ ಕೊರತೆ ಕಾಡುತ್ತಿದೆ.

ತಾಲ್ಲೂಕಿನ ಕುಡಪಲಿ, ಕಡೂರ, ಮಾಸೂರುಗಳಲ್ಲಿ ವಾಹನಗಳ ಮೂಲಕ ಕಸ ಸಂಗ್ರಹಿಸಲಾಗುತ್ತದೆ. ಇನ್ನೂ ಕೆಲವೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿದರೂ ಅಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಇಲ್ಲದೆ ಗ್ರಾಮದ ಹೊರಗೆ ಗುಂಡಿಗಳಲ್ಲಿ ಹಾಕಲಾಗುತ್ತಿದೆ. ತಾಲ್ಲೂಕಿನ ಕುಡಪಲಿ ಗ್ರಾಮ ಪಂಚಾಯ್ತಿಯಲ್ಲಿ ಒಂದು ಕಸ ಸಂಗ್ರಹಣಾ ವಾಹನವಿದೆ. ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ.

ರಸ್ತೆ ಬದಿಗಳಲ್ಲೇ ತಿಪ್ಪೆಯ ರಾಶಿ
ಬ್ಯಾಡಗಿ:
ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿಲ್ಲ. ರಸ್ತೆಯ ಪಕ್ಕದ ಚರಂಡಿಗಳಲ್ಲಿಯೇ ಕಸವನ್ನು ಹಾಕಲಾಗುತ್ತದೆ. ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ತಿಪ್ಪೆಯ ರಾಶಿಗಳಿವೆ. ಮೋಟೆಬೆನ್ನೂರು ಗ್ರಾಮದ ಮಹದೇವ ಮೈಲಾರ ನಗರದ ರಸ್ತೆ ಬದಿ ಕಸದ ರಾಶಿ ಬಿದ್ದಿದೆ. 

‘ತಾಲ್ಲೂಕಿನ ಕೆಲ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಮೋಟೆಬೆನ್ನೂರು ಗ್ರಾಮದಲ್ಲಿ ಕಸದ ವಾಹನವನ್ನು ಮಹಿಳೆಯೊಬ್ಬರು ನಡೆಸುತ್ತಾರೆ. ದೊಡ್ಡ ಗ್ರಾಮವಾಗಿರುವುದರಿಂದ ಕಸ ವಿಲೇವಾರಿ ವಿಳಂಬವಾಗುತ್ತಿದೆ. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವಾಹನಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಇಒ ಕೆ.ಎಂ. ಮಲ್ಲಿಕಾರ್ಜುನ ಭರವಸೆ ನೀಡಿದರು.

ಆರಂಭಗೊಳ್ಳದ ಘನತ್ಯಾಜ್ಯ ಘಟಕ
ಹಿರೇಕೆರೂರು:
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯ್ತಿಗಳಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ, ವಿಲೇವಾರಿ ಮಾಡುವ ಸಲುವಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೇ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಹಿರೇಕೆರೂರು ತಾಲ್ಲೂಕಿನ ತಾವರಗಿ ಗ್ರಾಮದ ಗೂಗಿ ಮಲ್ಡಿಯಲ್ಲಿ ಘಟಕಕ್ಕೆ ಪೇಂಟಿಂಗ್ ಹಾಗೂ ಕಸದ ವಾಹನ ಒಳಗೆ ಹೋಗಲು ಸಿ.ಡಿ. ನಿರ್ಮಾಣ ಮಾಡಿಲ್ಲದಿರುವುದರಿಂದ ಉದ್ಘಾಟನೆಗೊಳ್ಳದೆ ಅನಾಥವಾಗಿ ನಿಂತಿದೆ.

ಶ್ರೀಆಶ್ರಯ ಆದಿಶಕ್ತಿ ಸ್ವ ಸಹಾಯ ಸಂಘದ ಸದಸ್ಯೆ ನಿರ್ಮಲಾ (ವಾಹನ ಚಾಲಕಿ) ಮಾತಾನಾಡಿ, ‘ಕಸದ ಗಾಡಿ ಬಂದು ಒಂದು ವರ್ಷ ಆಗಿದೆ. ಎರಡು ತಿಂಗಳ ಹಿಂದೆ ಕಸದ ಗಾಡಿಯನ್ನು ನಮಗೆ ಕೊಟ್ಟಿದ್ದಾರೆ. ಕಸದ ಬಕೆಟ್‌ಗಳನ್ನು ಗ್ರಾಮಸ್ಥರಿಗೆ ಇನ್ನೂ ನೀಡಿಲ್ಲ. ಕಸದ ಘಟಕವನ್ನು ಸ್ವಚ್ಛ ಮಾಡಿಸಿಲ್ಲ. ಕಸವನ್ನು ಸಂಗ್ರಹಿಸಲು ಹೇಳಿದ್ದಾರೆ. ಸಂಗ್ರಹಿಸಿದ ಕಸವನ್ನು ಎಲ್ಲಿ ಹಾಕುವುದು ಎಂಬುದೇ ತಿಳಿಯುತ್ತಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು. 

ಕಸದ ವಾಹನಗಳಿಗೆ ಚಾಲಕರ ಕೊರತೆ
ರಾಣೆಬೆನ್ನೂರು:
ತಾಲ್ಲೂಕಿನ ಮಾಕನೂರು, ತುಮ್ಮಿನಕಟ್ಟಿ ಹಾಗೂ ಕೊಡಿಯಾಲ ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಮಾದರಿ ಘಟಕಗಳಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಡಿಮೆ ವೆಚ್ಚದಲ್ಲಿ ಚರಂಡಿ, ಇಂಗುಗುಂಡಿ, ಕಾಂಪೋಸ್ಟ್‌ ತಯಾರಿಕೆ ಘಟಕ, ವರ್ಮಿ ಕಾಂಪೋಸ್ಟ್‌ ಬಯೋಗ್ಯಾಸ್‌ ಸ್ಥಾವರಗಳ ನಿರ್ಮಾಣಕ್ಕೆ ಅವಕಾಶವಿದೆ. ಕೆಲವು ಕಡೆಗಳಲ್ಲಿ ಜಾಗದ ಕೊರತೆ ಕಂಡು ಬಂದಿದೆ. ಕನಿಷ್ಠ ಜಾಗದಲ್ಲಿ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ’ ಎಂದು ಇಒ ಟಿ.ಆರ್.‌ ಮಲ್ಲಾಡದ ತಿಳಿಸಿದರು.

‘ತಾಲ್ಲೂಕಿನ ಹೊನ್ನತ್ತಿ ಗ್ರಾಮ ಪಂಚಾಯಿತಿ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಿಗೆ ಕಸದ ಗಾಡಿ ಬಂದು ಮೂರು ತಿಂಗಳು ಗತಿಸಿವೆ. ವಾಹನ ಚಾಲನೆಗೆ ಮಹಿಳಾ ಚಾಲಕರು ಮುಂದೆ ಬರುತ್ತಿಲ್ಲ. ಹೀಗಾಗಿ ಕಸದ ವಾಹನಗಳು ಬಳಕೆಯಾಗದೇ ನಿಂತಲ್ಲೇ ಹಾಳುಬಿದ್ದಿವೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರು. 

 **

ಜಿಲ್ಲೆಯಾದ್ಯಂತ 105 ಘನತ್ಯಾಜ್ಯ ಘಟಕಗಳನ್ನು ನಿರ್ಮಿಸಲಾಗಿದೆ. ಬಾಕಿ ಗ್ರಾ. ಪಂ.ಗಳಲ್ಲಿ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿವೆ.
- ಎಸ್‌.ಬಿ.ಮುಳ್ಳಳ್ಳಿ, ಜಿಲ್ಲಾ ನೋಡಲ್‌ ಅಧಿಕಾರಿ, ಸ್ವಚ್ಛ ಭಾರತ ಮಿಷನ್‌

**

ಮುದೇನೂರು ಗ್ರಾ ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ನಮ್ಮೂರಿಗೆ ಒಂದು ದಿನವೂ ಕಸದ ಗಾಡಿ ಬಂದಿಲ್ಲ.
- ಶಾಂತಮ್ಮ ಹಿರೇಮಠ, ಮುಷ್ಟೂರು ನಿವಾಸಿ

**

ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಉದ್ಘಾಟನೆಗೊಂಡಿಲ್ಲ. ಕಾರಣ ಗ್ರಾಮದ ಕಸವನ್ನು ವಿಲೇವಾರಿ ಮಾಡಲಾಗಿಲ್ಲ.
- ಸತೀಶ್ ಕುಮಾರ್, ಪಿಡಿಒ, ತಾವರಗಿ ಗ್ರಾ.ಪಂ. 

**

40 ಗ್ರಾ.ಪಂ.ಗಳ ಪೈಕಿ 16 ಕಡೆ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಉಳಿದ ಕಡೆಯೂ ಶೀಘ್ರ ಪ್ರಾರಂಭಿಸುತ್ತೇವೆ.
ಟಿ.ಆರ್.‌ ಮಲ್ಲಾಡದ, ಇಒ, ರಾಣೆಬೆನ್ನೂರು ತಾ.ಪಂ. 

**

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ. ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ, ದುರುಗಪ್ಪ ಕೆಂಗನಿಂಗಪ್ಪನವರ, ಶಂಕರಪ್ಪ ಕೊಪ್ಪದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು