ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಬೆಳ್ಳುಳ್ಳಿ ವ್ಯಾಪಾರ ಬಲು ಜೋರು

ಮುಂಗಾರು ಹಂಗಾಮಿಗೆ ಬಿತ್ತನೆ: ಬೆಳ್ಳುಳ್ಳಿ ಆವಕ ವಾರದಿಂದ ವಾರಕ್ಕೆ ಏರಿಕೆ
Published 3 ಜೂನ್ 2024, 5:10 IST
Last Updated 3 ಜೂನ್ 2024, 5:10 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಎಪಿಎಂಸಿ ಉಪಪ್ರಾಂಗಣದಲ್ಲಿ ಭಾನುವಾರ ಸಂತೆ ದಿನದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ವ್ಯಾಪಾರ ಬಲು ಜೋರಾಗಿತ್ತು. ಉತ್ತರ ಕರ್ನಾಟಕದ ಸುಪ್ರಸಿದ್ದ ಬೆಳ್ಳುಳ್ಳಿ ಮಾರುಕಟ್ಟೆಗಳಲ್ಲಿ ಒಂದಾದ ಇಲ್ಲಿನ ಎಪಿಎಂಸಿ ಉಪಪ್ರಾಂಗಣದ ಬೆಳ್ಳುಳ್ಳಿ ಆವಕ ವಾರದಿಂದ ವಾರಕ್ಕೆ ಹೆಚ್ಚುತ್ತಲಿದೆ.

ಪ್ರಸಕ್ತ ಸಾಲಿಗೆ ಕೆಲ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚೆನ್ನಾಗಿದ್ದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಗುರುವಾರ ಹಲಗೇರಿ ಗ್ರಾಮದ ಎಪಿಎಂಸಿ ಮಾರುಕಟ್ಟೆಯಲ್ಲಿ 1,200 ಚೀಲ ಬೆಳ್ಳುಳ್ಳಿ ಆವಕವಾದರೆ, ನಗರದಲ್ಲಿ ಭಾನುವಾರ 2,000 ಚೀಲಗಳಿಗೂ ಹೆಚ್ಚು ಬೆಳ್ಳುಳ್ಳಿ ಆವಕವಾಗಿತ್ತು. ಇನ್ನು ಆವಕ ಹೆಚ್ಚುಆಗುವ ಸಾದ್ಯತೆ ಇತ್ತು.  ಮುಂಗಾರು ಮಳೆ ಬೀಳದ ಕಾರಣ ಮತ್ತು ಇನ್ನು ದರ ಹೆಚ್ಚಾಗಬಹುದು ಕೆಲ ರೈತರು ಬಿತ್ತನೆ ಬೀಜವನ್ನು 300ಚೀಲಕ್ಕೂ ಹೆಚ್ಚು ಬೆಳ್ಳುಳ್ಳಿಯನ್ನು ರೈತರು ವಾಪಸ್‌ ತೆಗೆದುಕೊಂಡು ಹೋಗಿದ್ದಾರೆ ಎನ್ನುತ್ತಾರೆ ವ್ಯಾಪಾರಸ್ಥ ಶಿವಪ್ಪ ಬನ್ನಿಹಟ್ಟಿ.

ಈ ಬಾರಿ ಬೆಳ್ಳುಳ್ಳಿ ವ್ಯಾಪಾರ ಚೆನ್ನಾಗಿದ್ದು, ಇಂದು ರೈತರಿಗೆ ₹16,500ವರೆಗೆ ಹೆಚ್ಚಿನ ದರ ಸಿಕ್ಕಿದೆ. ಕಳೆದ ವಾರ ಹಲಗೇರಿ ಮತ್ತು ರಾಣೆಬೆನ್ನೂರಿನ ಎಪಿಎಂಸಿ ಉಪಪ್ರಾಂಗಣದಲ್ಲಿ ಇಂದಿನ ಮಾರುಕಟ್ಟೆಯಲ್ಲಿ ಕೂಡ ದರ ಒಂದೆ ಇದೆ.

ಸಣ್ಣ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹13 ಸಾವಿರದಿಂದ ₹15 ಸಾವಿರ ಮತ್ತು ದಪ್ಪ ಬೆಳ್ಳುಳ್ಳಿ ಕ್ವಿಂಟಲ್‌ಗೆ ₹ 14 ಸಾವಿರದಿಂದ ₹ 16,500 ವರೆಗೆ ಮಾರಾಟವಾಗಿದೆ. ವಿಜಯಪುರ, ಕಾರವಾರ, ದಾವಣಗೆರೆ , ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಗದಗ, ಕುಂದಗೋಳ, ಧಾರವಾಡ- ಹುಬ್ಬಳ್ಳಿ, ಕೊಪ್ಪಳ ಜಿಲ್ಲೆಯ ರೈತರು ಮತ್ತು ವ್ಯಾಪಾರಸ್ಥರು ಇಲ್ಲಿಗೆ ಬೆಳ್ಳುಳ್ಳಿ ಖರೀದಿಸಲು ಆಗಮಿಸಿದ್ದರು ಎನ್ನುತ್ತಾರೆ ಚಂದ್ರು ಅಜ್ಜೋಡಿಮಠ ಹಾಗೂ ಮುಸ್ತಾಫ ಹಲಗೇರಿ.

ಮಾರುಕಟ್ಟೆಯಲ್ಲಿ ಎರಡು ವಾರದ ಹಿಂದೆ ಚಿಲ್ಲರೆ ಅಂಗಡಿಗಳಲ್ಲಿ ಸಾಧಾರಣ ಗುಣಮಟ್ಟದ ಬೆಳ್ಳುಳ್ಳಿ ₹200ಗೆ ಲಭಿಸುತ್ತಿದ್ದರೆ, ಪ್ರಸ್ತುತ ₹250ಕ್ಕೆ ಏರಿದೆ. ಬಳಕೆಗೆ ತಕ್ಕಂತೆ ಬೆಳ್ಳುಳ್ಳಿ ಉತ್ಪಾದನೆ ಇಲ್ಲದಿರುವುದು, ಬೆಲೆ ಏರಿಕೆ, ರಾಜ್ಯದಲ್ಲಿ ಬರಗಾಲ ಮತ್ತು ಹವಾಮಾನ ವೈಪರೀತ್ಯವೂ ಈ ಬಾರಿ ಬೆಳ್ಳುಳ್ಳಿ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಕಾರಣ ಹೇಳುತ್ತಿದ್ದಾರೆ.

ರೈತರಿಗೆ ಆರ್ಥಿಕ ನಷ್ಟ:

‘ರಾಣೆಬೆನ್ನೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಆದರೆ ಅವರು ಬೆಲೆ ಇದ್ದಾಗಲೇ ಅಂದರೆ ಎರಡು ತಿಂಗಳ ಹಿಂದೆ ಕ್ವಿಂಟಲ್‌ ₹3,000 ಮಾರಾಟ ಮಾಡಿದ್ದಾರೆ. ಆವಕ ಹೆಚ್ಚಾಗುತ್ತಿದ್ದಂತೆ ಬೆಲೆ ₹500 ಕುಸಿಯಿತು. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಯಿತು. ಅದಾದ ಮೇಲೆ ಕೆಲವು ಬೆಳೆಗಾರರು ಮಾತ್ರ ಬಿತ್ತನೆಗೆಂದು ಬೆಳ್ಳುಳ್ಳಿ ಬೆಳೆದಿದ್ದಾರೆ. ಬೆಳೆ ಬೆಳೆದರೂ, ಬೆಳೆಯದಿದ್ದರೂ ರೈತರು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಲೆ ಇದ್ದಾರೆ ಎನ್ನುತ್ತಾರೆ’ ರೈತ ಮುಖಂಡ ರವೀಂದ್ರಗೌಡ ಪಾಟೀಲ.

‘ಅತಿ ಹೆಚ್ಚು ಬಳಸುವ ತರಕಾರಿಗಳಲ್ಲಿ ಈರುಳ್ಳಿಯಷ್ಟೇ ಆದ್ಯತೆ ಬೆಳ್ಳುಳ್ಳಿಗೆ ಬೇಡಿಕೆಯಿದೆ. ಬೆಳ್ಳುಳ್ಳಿ ಮಸಾಲೆಯಾಗಿ ಮಾತ್ರವಲ್ಲದೆ ಔಷಧವಾಗಿಯೂ ಬಳಸಲಾಗುತ್ತದೆ. ಪ್ರತಿ ಗ್ರಾಮದಲ್ಲೂ ಎಗ್‌ ರೈಸ್‌, ಚಿಕನ್‌ ಸ್ಟಾಲ್‌ಗಳು ಹೆಚ್ಚಾಗಿದ್ದು ಬೆಳ್ಳುಳ್ಳಿ ಬಳಕೆ ಹೆಚ್ಚಾಗಿದೆ. ಕಡಿಮೆ ಅವಧಿ, ಕಡಿಮೆ ಹೂಡಿಕೆಯಲ್ಲಿ ನಮ್ಮ ಅನ್ನದಾತರು ಲಕ್ಷಾಧಿಪತಿಗಳಾಗಬಹುದು’ ಎನ್ನುತ್ತಾರೆ ಹಲಗೇರಿಯ ಡಾಬಾ ಮಾಲೀಕ ಬಸವರಾಜ ಕಡೂರ.

‘ಬೆಳ್ಳುಳ್ಳಿ ಕಟುವಾದ ಪರಿಮಳ ಅಡುಗೆಗೆ ಉತ್ತಮ ಘಮಲಿನ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ನೇರಳೆ ಬೆಳ್ಳುಳ್ಳಿಯನ್ನು ತಮ್ಮ ಭಕ್ಷ್ಯಗಳಲ್ಲಿ ಬಳಸಬಹುದಾದ ಸುವಾಸನೆಯ ಬೆಳ್ಳುಳ್ಳಿ ಎಂದು ಹೇಳಲಾಗುತ್ತದೆ. ಇದು ಭಕ್ಷ್ಯಕ್ಕೆ ವಿಶಿಷ್ಟವಾದ ಪರಿಮಳವನ್ನು ತರುತ್ತದೆ ಎನ್ನುತ್ತಾರೆ’ ಪುಟ್‌ಪಾತ್‌ ನಾನ್‌ವೆಜ್‌ ಪುಡ್‌ ತಯಾರಕರು.

ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆಗೆ ಬೆಳ್ಳುಳ್ಳಿ ಮಾರುಕಟ್ಟೆಗೆ ಮಾರಾಟ ಮಾಡಲು ಬಂದ ನಂದೀಹಳ್ಳಿಯ ರೈತ ಚಮನಸಾಬ ಮೆಣಸಿನಹಾಳ. 
ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆಗೆ ಬೆಳ್ಳುಳ್ಳಿ ಮಾರುಕಟ್ಟೆಗೆ ಮಾರಾಟ ಮಾಡಲು ಬಂದ ನಂದೀಹಳ್ಳಿಯ ರೈತ ಚಮನಸಾಬ ಮೆಣಸಿನಹಾಳ. 

ಬೆಳ್ಳುಳ್ಳಿ ಬೆಳೆಯುವುದರಿಂದ ಹೆಚ್ಚುವ ಭೂಮಿಯ ಫಲವತ್ತತೆ

ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಎಪಿಎಂಸಿಯಿಂದ ಪರವಾನಗಿ ಪಡೆದಿದ್ದಾರೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿ ತೂಕದಲ್ಲಿ ಮೋಸ ಇಲ್ಲ. ರೈತರು ವ್ಯಾಪಾರಸ್ಥರನ್ನು ಆಕರ್ಷಿಸುತ್ತದೆ
ಎಂ.ವಿ. ಶೈಲಜಾ, ಎಪಿಎಂಸಿ ಕಾರ್ಯದರ್ಶಿ

ಮಳೆಯಾಶ್ರಿತ ಬೆಳೆ ಬೆಳ್ಳುಳ್ಳಿ... ತಾಲ್ಲೂಕಿನ ಇಟಗಿ ಮಾಗೋಡ ಮುಷ್ಟೂರು ಮಣಕೂರ ಕುಪ್ಪೇಲೂರ ಹಿರೇಮಾಗನೂರ ಮಾಳನಾಯಕನಹಳ್ಳಿ ಹಲಗೇರಿ ಲಿಂಗದಹಳ್ಳಿ ಅಸುಂಡಿ ಯರೇಕುಪ್ಪಿ ಹೂಲಿಹಳ್ಳಿ ಜೋಯಿಸರಹರಳಹಳ್ಳಿ ಉಕ್ಕುಂದ ಸರ್ವಂದ ಭಾಗದಲ್ಲಿ ಹೆಚ್ಚಾಗಿ ಮಳೆಯಾಶ್ರಿತವಾಗಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಬೆಳ್ಳುಳ್ಳಿ ಬೆಳೆ ಶೇ 75ರಷ್ಟು ಸಂಪೂರ್ಣ ಹಾನಿಗೊಂಡಿದೆ. ಶೇ 25 ರಷ್ಟು ಮಾತ್ರ ಬೆಳೆ ಕೈಸೇರಿದೆ. ಬರಗಾಲದಿಂದ ಬೇಸಿಗೆ ಬಿತ್ತನೆಗೆ ಮಾಡಿಲ್ಲ. ಅಂತರ್ಜಲ ಕುಸಿತದಿಂದಾಗಿ ಅಲ್ಪಸ್ವಲ್ಪ ನೀರಾವರಿ ಜಮೀನು ಇದ್ದ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ ಎನ್ನುತ್ತಾರೆ ಮಾಳನಾಯಕನಹಳ್ಳಿ ಗ್ರಾಮದ ರೈತ ಉಮೇಶ ಚೌಡಪ್ಪನವರ.

ಮಣ್ಣಿನ ಫಲವತ್ತತೆ ಹೆಚ್ಚಿಸುವ ಬೆಳ್ಳುಳ್ಳಿ ಬೇಸಾಯ ತಾಲ್ಲೂಕಿನ ನಂದೀಹಳ್ಳಿ ಗ್ರಾಮದ ರೈತ ಚಮನಸಾಬ ಮೆಣಸಿನಾಳ ಅವರು 1ಎಕರೆ ಜಮೀನಿನಲ್ಲಿ 20 ಚೀಲ ಬೆಳ್ಳುಳ್ಳಿ ಬೆಳೆದಿದ್ದು ಬೇಸಿಗೆಯಲ್ಲೂ ಉತ್ತಮ ಇಳುವರಿ ಬಂದಿದೆ. ‘ಆಳು–ಕಾಳು ಗೊಬ್ಬರ ಬಿತ್ತನೆ ಖರ್ಚು ಸೇರಿ ₹ 15ಸಾವಿರ ಖರ್ಚು ಮಾಡಿದ್ದೆ. ₹ 50 ಸಾವಿರ ನಿವ್ವಳ ಆಧಾಯ ಬಂದಿದೆ. ಹೆಚ್ಚು ಹೆಚ್ಚು ಬೆಳ್ಳುಳ್ಳಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತೆ. ಎಲೆ ಕಸದಿಂದ ಹಿಂಗಾರು ಹಂಗಾಮಿಗೆ ಬಿಳಿಜೋಳ ಬೆಳೆಯಲು ಅನುಕೂಲವಾಗಿ ಇಳುವರಿ ಹೆಚ್ಚು ಬರುತ್ತದೆ. ರಸಗೊಬ್ಬರ ಹಾಕುವುದೇ ಬೇಡ’ ಎಂದು ಚಮನಸಾಬ ಮೆಣಸಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT