ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಮುಗಿದು ಏರು, ಇದು ಕನ್ನಡದ ತೇರು!

ರಾಜ್ಯೋತ್ಸವಕ್ಕೆ ಅಲಂಕೃತಗೊಂಡ ಸಾರಿಗೆ ಬಸ್‌: ಕನ್ನಡಮ್ಮನ ಮೂರ್ತಿ ಪ್ರತಿಷ್ಠಾಪನೆ
Last Updated 1 ನವೆಂಬರ್ 2022, 8:34 IST
ಅಕ್ಷರ ಗಾತ್ರ

ಹಾವೇರಿ:‘ಕೈ ಮುಗಿದು ಏರು ಇದು ಕನ್ನಡದ ತೇರು’ ಎಂದು ಬಸ್‌ ಪ್ರಯಾಣಿಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ ‘ಕನ್ನಡ ರಥ’ವಾಗಿ ಪರಿವರ್ತನೆಗೊಂಡಿರುವ ಸಾರಿಗೆ ಬಸ್‌.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಬಸ್‌ ಮಧುವಣಗಿತ್ತಿಯಂತೆ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶಿಷ್ಟವಾಗಿ ಅಲಂಕೃತಗೊಂಡಿದೆ. ಪ್ರಯಾಣಿಕರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ.

ಬಸ್‌ ಮುಂಭಾಗದಲ್ಲಿ ಕನ್ನಡಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ‘ಕರುನಾಡ ಕನ್ನಡಿಗ’ ಎಂಬ ನಾಮಫಲಕ ಹಾಗೂ ಭುವನೇಶ್ವರಿ, ಶಿವಾಜಿ ಮತ್ತು ಭಗತ್‌ಸಿಂಗ್‌ರ ಭಾವಚಿತ್ರಗಳು ರಾರಾಜಿಸುತ್ತಿವೆ. ಬಲಬದಿಯಲ್ಲಿ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ಮತ್ತೊಂದು ಬದಿಯಲ್ಲಿ ‘ಸರ್ವಜ್ಞನ ನಾಡು ಹಿರೇಕೆರೂರಿನಿಂದ ಚನ್ನಮ್ಮನ ನಾಡು ಬೆಳಗಾವಿ...’ ಎಂಬ ಅಕ್ಷರಗಳು ಗಮನಸೆಳೆಯುತ್ತವೆ.

ರಥದ ವಿಶೇಷತೆಗಳು:

ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು, ಪ್ರಮುಖ ನದಿಗಳು, ದೊರೆಯುವ ಖನಿಜಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡ ನುಡಿಮುತ್ತುಗಳು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಂತರು, ದಾರ್ಶನಿಕರ‌ ಭಾವಚಿತ್ರಗಳು ಹಾಗೂಕನ್ನಡ ಸಾಹಿತ್ಯ ಸಮ್ಮೇಳನಗಳ ವಿವರಗಳನ್ನು ಬಸ್‌ ಹೊರಗಡೆ ಮತ್ತು ಒಳಗಡೆ ಅಂಟಿಸಲಾಗಿದೆ. ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜಕುಮಾರ ಭಾವಚಿತ್ರ ಕಂಗೊಳಿಸುತ್ತಿದೆ.

ಪ್ರಯಾಣಿಕರ ಸೀಟುಗಳ ತುದಿಗೆ ಕೆಂಪು ಮತ್ತು ಹಳದಿ ಬಣ್ಣದ ಹೊದಿಕೆಗಳನ್ನು ತೊಡಿಸಲಾಗಿದೆ. ಪ್ರಯಾಣ ಮಾಡುವ ವೇಳೆ ಜನರಿಗೆ ಓದಲು ಅನುಕೂಲವಾಗಲಿ ಎಂದು ಸೀಟಿಗೊಂದು ಕನ್ನಡ ಪುಸ್ತಕ ಮತ್ತು ಕನ್ನಡ ದಿನಪತ್ರಿಕೆಯನ್ನು ಇಡಲಾಗಿದೆ. ಜಿಲ್ಲೆಯ ನಕ್ಷೆ ಮತ್ತು ಪ್ರಮುಖ ಮಾಹಿತಿಯನ್ನು ಡ್ರಾಯಿಂಗ್‌ ಶೀಟಿನಲ್ಲಿ ಬರೆದು ತೂಗು ಹಾಕಲಾಗಿದೆ.

ಕನ್ನಡ ಉಳಿಸಿ–ಬೆಳೆಸಿ:

‘ನವೆಂಬರ್‌ ತಿಂಗಳಲ್ಲಿ ಈ ಕನ್ನಡ ರಥವು ಬೆಂಗಳೂರು, ಮೈಸೂರು, ವಿಜಯಪುರ, ಭಟ್ಕಳ, ಬೆಳಗಾವಿ, ಶಿರಸಿ ಮುಂತಾದ ಮಾರ್ಗಗಳಲ್ಲಿ ಸಂಚರಿಸಲಿದೆ. ಕನ್ನಡದ ಹಾಡುಗಳನ್ನು ಕೇಳಲಿ ಎಂದು ಸ್ಪೀಕರ್‌ಗಳನ್ನು ಅಳವಡಿಸಿದ್ದೇನೆ. 500 ಪ್ರಯಾಣಿಕರಿಗೆ ಸಿಹಿ ವಿತರಿಸುತ್ತೇನೆ. ಮಾತೃಭಾಷೆ ಕನ್ನಡವನ್ನು ಉಳಿಸಿ–ಬೆಳೆಸುವ ದೃಢ ನಿರ್ಧಾರವನ್ನು ಪ್ರತಿಯೊಬ್ಬ ಕನ್ನಡಿಗನೂ ಕೈಗೊಳ್ಳಬೇಕು’ ಎನ್ನುತ್ತಾರೆ ನಿರ್ವಾಹಕ ಶಶಿಕುಮಾರ್‌ ಬೋಸ್ಲೆ ಮತ್ತು ಚಾಲಕ ಹರೀಶ್‌.

₹35 ಸಾವಿರ ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್‌ ಅನ್ನು ‘ಕನ್ನಡ ರಥ’ವಾಗಿ ಮಾರ್ಪಡಿಸಿದ್ದೇನೆ. 3 ವರ್ಷಗಳಿಂದ ಈ ರೀತಿ ಕನ್ನಡದ ಸೇವೆ ಮಾಡುತ್ತಿದ್ದೇನೆ.
– ಶಶಿಕುಮಾರ್‌ ಬೋಸ್ಲೆ, ನಿರ್ವಾಹಕ, ಹಿರೇಕೆರೂರು ಘಟಕ

ಕನ್ನಡ ಕ್ರಿಯಾ ಸಮಿತಿಯಿಂದ ‘ಕರ್ನಾಟಕ ರತ್ನ ಪುರಸ್ಕೃತರ’ ಭಾವಚಿತ್ರ ಮತ್ತು ಸ್ತಬ್ಧಚಿತ್ರಗಳನ್ನೊಳಗೊಂಡ ಬಸ್‌ ಅನ್ನು ಈ ಬಾರಿ ಸಿದ್ಧಪಡಿಸಿದ್ದೇವೆ.
– ಮಲ್ಲಿಕಾರ್ಜುನ ಹಿಂಚಿಗೇರಿ, ಅಧ್ಯಕ್ಷ, ಕನ್ನಡ ಕ್ರಿಯಾ ಸಮಿತಿ, ವಾ.ಕ.ರ.ಸಾ ಸಂಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT