ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಅಂತರ್ಜಲ ಮಟ್ಟ ಕುಸಿತ: ಆತಂಕ

ಮಳೆಯ ತೀವ್ರ ಕೊರತೆ; ಬತ್ತಿದ ಕೊಳವೆಬಾವಿಗಳು – ಸಂಕಷ್ಟದಲ್ಲಿ ರೈತ ಸಮುದಾಯ
Published 12 ಡಿಸೆಂಬರ್ 2023, 5:42 IST
Last Updated 12 ಡಿಸೆಂಬರ್ 2023, 5:42 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಈ ಬಾರಿ ಮಳೆಯ ತೀವ್ರ ಅಭಾವದಿಂದ ಅಂತರ್ಜಲ ಮಟ್ಟ ಪಾತಾಳದತ್ತ ಮುಖ ಮಾಡಿದೆ. ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಕುಸಿತ ಕಂಡಿದೆ.

ಅಕ್ಟೋಬರ್‌ ಅಂತ್ಯಕ್ಕೆ 2019ರಲ್ಲಿ 6.95 ಮೀಟರ್‌ ಇದ್ದ ಅಂತರ್ಜಲ ಮಟ್ಟವು 2023ರಲ್ಲಿ ಬರೋಬ್ಬರಿ 11.05 ಮೀಟರ್‌ಗೆ ಕುಸಿದಿದೆ. ಅಂದರೆ ಬರೋಬ್ಬರಿ 4 ಮೀಟರ್‌ನಷ್ಟು ಇಳಿಕೆಯಾಗಿದೆ.

ಜಿಲ್ಲೆಯ ವಾರ್ಷಿಕ ಸರಾಸರಿ ಅಂತರ್ಜಲ ಮಟ್ಟ 2019ರಲ್ಲಿ 17.12 ಮೀ., 2020ರಲ್ಲಿ 11.47 ಮೀ., 2021ರಲ್ಲಿ 9.59 ಮೀ., 2022ರಲ್ಲಿ 7.90 ಮೀಟರ್‌ನಷ್ಟು ಇದ್ದ ಅಂತರ್ಜಲ ಮಟ್ಟ 2023ರಲ್ಲಿ 12.24ಕ್ಕೆ ಕುಸಿತ ಕಂಡಿದೆ. 

ಜಿಲ್ಲೆಯು ದಕ್ಷಿಣ ಪ್ರಸ್ಥಭೂಮಿಯಾಗಿದ್ದು, ರಾಜ್ಯದ ಮಧ್ಯಭಾಗದಲ್ಲಿದೆ. ಅರೆ ಮಲೆನಾಡು ಮತ್ತು ಅರೆ ಉಷ್ಣವಲಯ ಪ್ರದೇಶವಾಗಿದೆ. ಜಿಲ್ಲೆಯು ಮೇ ತಿಂಗಳಿಂದ ಅಕ್ಟೋಬರ್‌ ತಿಂಗಳವರೆಗೆ ನೈರುತ್ಯ ಮಾನ್ಸೂನ್‌ ಮಳೆಯನ್ನು ಪಡೆಯುತ್ತದೆ. ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮಾನ್ಸೂನ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಪಡೆಯುತ್ತದೆ.

ಅಂತರ್ಜಲ ಮೌಲೀಕರಣ 2020ರ ಪ್ರಕಾರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ, ಬ್ಯಾಡಗಿ, ಹಿರೇಕೆರೂರ ಮತ್ತು ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ಅಂತರ್ಜಲ ಅತಿ ಬಳಕೆಯಾಗುತ್ತಿದೆ. ಅಂತರ್ಜಲದ ಅತಿ ಬಳಕೆಯಿಂದ ಕೊಳವೆಬಾವಿಗಳು ಬತ್ತುತ್ತಿದ್ದು, ರೈತರು ಬೇಸಿಗೆ ಮತ್ತು ಬರಗಾಲದ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. 

ಕೈಕೊಟ್ಟ ಮಳೆ:

ಮಳೆಯ ಅಭಾವದಿಂದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಬರಗಾಲದ ಕಾರ್ಮೋಡ ಕವಿದಿದೆ. ಮಳೆಯ ಕೊರತೆಯೇ ಅಂತರ್ಜಲ ಮಟ್ಟ ವ್ಯಾಪಕವಾಗಿ ಕುಸಿಯಲು ಪ್ರಮುಖ ಕಾರಣ ಎನ್ನುತ್ತಾರೆ ಭೂವಿಜ್ಞಾನಿಗಳು.  

ಜನವರಿಯಿಂದ ಮೇ ತಿಂಗಳವರೆಗೆ 120 ಮಿ.ಮೀ. ವಾಡಿಕೆ ಮಳೆಗೆ ಈ ಬಾರಿ ಜಿಲ್ಲೆಯಲ್ಲಿ 83 ಮಿ.ಮೀ. ಮಾತ್ರ ಮಳೆಯಾಗಿತ್ತು. ಅಂದರೆ, ಶೇ 31ರಷ್ಟು ಕೊರತೆಯಾಗಿತ್ತು. ಜೂನ್ ತಿಂಗಳಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಬಿದ್ದು, ಶೇ 60ರಷ್ಟು ಮಳೆ ಕೊರತೆಯಾಯಿತು.

ಜುಲೈನಲ್ಲಿ 164 ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ 229 ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗಸ್ಟ್‌ನಲ್ಲಿ 127 ಮಿ.ಮೀ. ವಾಡಿಕೆ ಮಳೆಗೆ ಕೇವಲ 27 ಮಿ.ಮೀ. ಮಳೆಯಾದ ಕಾರಣ ಕೃಷಿ ಬೆಳೆಗಳು ಒಣಗಿದವು. ಸೆಪ್ಟೆಂಬರ್ ತಿಂಗಳಲ್ಲಿ 107 ಮಿ.ಮೀ. ವಾಡಿಕೆ ಮಳೆಗೆ ಕೇವಲ 39 ಮಿ.ಮೀ. ಮಳೆಯಾಗಿದ್ದು, ಶೇ 63ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್‌ನಲ್ಲಿ ಮುರ್ನಾಲ್ಕು ದಿನಗಳು ಮಾತ್ರ ತುಂತುರು ಮಳೆ ಬಿದ್ದಿದೆ. 

42 ಅಧ್ಯಯನ ಕೊಳವೆಬಾವಿ:

‘ಹಾವೇರಿ ತಾಲ್ಲೂಕಿನಲ್ಲಿ –7, ಬ್ಯಾಡಗಿ–4, ಹಾನಗಲ್‌–10. ಹಿರೇಕೆರೂರು–3, ರಾಣೆಬೆನ್ನೂರು–6, ರಟ್ಟೀಹಳ್ಳಿ–3, ಸವಣೂರು–4 ಮತ್ತು ಶಿಗ್ಗಾವಿಯಲ್ಲಿ 5 ಅಧ್ಯಯನ ಕೊಳವೆಬಾವಿಗಳಿವೆ. ಈ 42 ಅಧ್ಯಯನ ಕೊಳವೆಬಾವಿಗಳಲ್ಲಿ ಪ್ರತಿ ತಿಂಗಳು ಅಂತರ್ಜಲ ಮಟ್ಟಗಳನ್ನು ದಾಖಲಿಸುತ್ತೇವೆ. ಈ ವರದಿಯನ್ನು ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಪ್ರಕೃತಿ ವಿಪತ್ತು ನಿರ್ವಹಣೆ ಸಂಸ್ಥೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯಾಲಯಗಳಿಗೆ ಸಲ್ಲಿಸುತ್ತೇವೆ’ ಎಂದು ಹಾವೇರಿ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಸಂತೋಷಪ್ಯಾಟಿ ಗಾಣಿಗೇರ ತಿಳಿಸಿದರು. 

ನೀರಿನ ಅಪವ್ಯಯ ಮತ್ತು ಅಂತರ್ಜಲದ ಅತಿ ಬಳಕೆ ಇದೇ ರೀತಿ ಮುಂದುವರಿದರೆ 2080ರ ವೇಳೆಗೆ ದೇಶದಲ್ಲಿ ಸದ್ಯದ ಸ್ಥಿತಿಗಿಂತ ಅಂತರ್ಜಲ ಮಟ್ಟ ಮೂರು ಪಟ್ಟು ಕುಸಿಯಲಿದೆ. ಇದು ಆಹಾರ ಮತ್ತು ನೀರಿನ ಅಭಾವ ಸೃಷ್ಟಿಗೂ ಕಾರಣವಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದ್ದು, ಇದು ಎಚ್ಚರಿಕೆಯ ಗಂಟೆಯಾಗಿದೆ.

‘ಮಳೆ ನೀರು ಸಂಗ್ರಹ ವಿಧಾನ ಅತ್ಯಗತ್ಯ’
‘ಪ್ರತಿ ಮನೆ ಮತ್ತು ಕಚೇರಿಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಹಾಗೂ ಕೃತಕ ಅಂತರ್ಜಲ ಮರುಪೂರಣ ಕ್ರಮಗಳಿಂದ ಅಂತರ್ಜಲ ಪುನಃಶ್ಚೇತನ ಸಾಧ್ಯ’ ಎನ್ನುತ್ತಾರೆ ಹಿರಿಯ ಭೂವಿಜ್ಞಾನಿ ಹಿರಿಯ ಭೂವಿಜ್ಞಾನಿ ಸಂತೋಷಪ್ಯಾಟಿ ಗಾಣಿಗೇರ. ಜಿಲ್ಲೆಯಲ್ಲಿ ಅಂತರ್ಜಲವು ಶೇ70ರಷ್ಟು ಕೃಷಿಗೆ ಉಪಯೋಗವಾಗುತ್ತದೆ. ಉಳಿದಂತೆ ಗೃಹ ಬಳಕೆ ಕೈಗಾರಿಕೆ ಇತರೆ ಉದ್ದೇಶಗಳಿಗೆ ವಿನಿಯೋಗವಾಗುತ್ತದೆ. ಚೆಕ್‌ಡ್ಯಾಂ ಇಂಗುಗುಂಡಿ ನಾಲಾ ಬಂಡು ಕೃಷಿ ಹೊಂಡ ನಿರ್ಮಾಣಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT