ಹಂಸಬಾವಿ: ‘ಭಗವಂತನ ಅನುಗ್ರಹವಿದ್ದರೆ ಬೆಟ್ಟದಷ್ಟು ಭಾರದ ಕಷ್ಟವಿದ್ದರೂ ಹೂವಿನಂತೆ ಹಗುರವಾಗುತ್ತದೆ. ಸುಖಮಯ ಜೀವನಕ್ಕೆ ಶರಣರ ಬದುಕನ್ನು ಅನುಸರಿಸಿ’ ಎಂದು ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಇಲ್ಲಿನ ಶಿವಯೋಗೀಶ್ವರ ಆಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶನಿವಾರ ಆರಂಭವಾದ ಸಜ್ಜಲಗುಡ್ಡದ ಶಿವಶರಣೆಯ ಪುರಾಣ ಪ್ರವಚನ ಪ್ರಾರಂಭೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಜೀವನದ ಸಾರ್ಥಕತೆಗೆ ಕೀರ್ತನೆ ಕೇಳಬೇಕು. ಸತ್ಸಂಗವಾಗಬೇಕು. ಶಿವಜ್ಞಾನವಿಲ್ಲದವರಿಗೆ ಶಿವನ ಕೃಪೆ ಲಭಿಸದು. ಸಂಸ್ಕಾರಯುತ ಜೀವನ ನಡೆಸಿದರೆ ಮೋಕ್ಷ ಸಾಧ್ಯ ಎಂದರು.
ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ದೀಪ ತಾನುರಿದು ಜಗಕೆ ಬೆಳಕು ನೀಡುವಂತೆ ಲೋಕಕಲ್ಯಾಣಕ್ಕಾಗಿ ಶರಣರು ಜೀವನ ಸವೆಸಿದರು. ಇಂಥವರ ಸಾಲಿನಲ್ಲಿ ಸಜ್ಜಗುಡ್ಡದ ಶರಣೆಯು ಮುಂಚೂಣಿಯಲ್ಲಿದ್ದಾಳೆ ಎಂದರು.
ಬಳಿಕ ಹಂಸಬಾವಿಯ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ಆರಂಭಿಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ವೇಳೆ ಅಗಡಿಯ ಕಲ್ಮಠದ ಗುರುಸಿದ್ದ ಸ್ವಾಮೀಜಿ, ತಾ.ಶ.ಸಾ.ಪರಿಷತ್ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ, ಷಣ್ಮುಖಯ್ಯ ಮಳೀಮಠ, ಮಲ್ಲೇಶಪ್ಪ ಅಸುಂಡಿ, ಎ.ಎನ್.ಹೆಡಿಯಾಲ, ಧಾನೇಶ್ವರಿ ಭಜನಾ ಸಂಘದವರು ಹಾಗೂ ಗ್ರಾಮಸ್ಥರು ಇದ್ದರು.