ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ BJP ತಾಲ್ಲೂಕು ಘಟಕದ ಅಧ್ಯಕ್ಷ ಗಾದಿ: 44 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಬಿಜೆಪಿಯ ಹಾನಗಲ್ ತಾಲ್ಲೂಕು ಘಟಕದ ಅಧ್ಯಕ್ಷ ಗಾದಿಗೆ ತುರುಸಿನ ಪೈಪೋಟಿ
Published 8 ಫೆಬ್ರುವರಿ 2024, 5:20 IST
Last Updated 8 ಫೆಬ್ರುವರಿ 2024, 5:20 IST
ಅಕ್ಷರ ಗಾತ್ರ

ಹಾನಗಲ್: ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಾದಿಗೆ ತುರುಸಿನ ಪೈಪೋಟಿ ಏರ್ಪಟ್ಟಿದೆ. 44 ಆಕಾಂಕ್ಷಿತರು ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಘಟಕಕ್ಕೆ ಅರ್ಜಿ ಸಲ್ಲಿಸಿದ್ದು, ಹಾನಗಲ್ ತಾಲ್ಲೂಕಿನ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವವರು ಯಾರು ಎಂಬ ಕುತೂಹಲ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.  

ಫೆ. 2ರಂದು ಹಾನಗಲ್‌ನಲ್ಲಿ ದಿ.ಸಿ.ಎಂ.ಉದಾಸಿ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಆಚರಿಸಿದರು. ಅದೇ ದಿನ ಕ್ಷೇತ್ರದ ಬಿಜೆಪಿ ಮುಖಂಡರು ಸೇರಿಕೊಂಡು ತಾಲ್ಲೂಕು ಘಟಕದ ಮರು ರಚನೆಯ ಚರ್ಚೆ ನಡೆಸಿದ್ದರು.

ಮಾಜಿ ಶಾಸಕ ಶಿವರಾಜ ಸಜ್ಜನರ ನೇತೃತ್ವದಲ್ಲಿ ಫೆ. 4ರಂದು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮತ್ತೆ ಸಭೆ ಸೇರಿ ಈ ಬಗ್ಗೆ ಚರ್ಚೆಗಳು ನಡೆದವು. ಸದ್ಯ ಅಧ್ಯಕ್ಷ ಸ್ಥಾನದಲ್ಲಿರುವ ನಿಂಗಪ್ಪ ಗೊಬ್ಬೇರ, ‘ತಾವು ಮೂರು ಅವಧಿಗೆ ಅಧ್ಯಕ್ಷರಾಗಿ ಪಕ್ಷದ ಸೇವೆ ಸಲ್ಲಿಸಿದ್ದು, ಹೊಸಬರಿಗೆ ಅವಕಾಶ ನೀಡುತ್ತೇನೆ’ ಎಂದು ಘೋಷಿಸಿದರು.

‘ಅದೇ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರಾಗಿ 44 ಜನ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಕಳಿಸಲಾಗಿದೆ. ಇನ್ನೇನು ನಾಲ್ಕೈದು ದಿನಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಅಂತಿಮಗೊಳ್ಳಲಿದೆ’ ಎಂದು ನಿಂಗಪ್ಪ ಗೊಬ್ಬೇರ ತಿಳಿಸಿದ್ದಾರೆ.

ಮಾಲತೇಶ ಸೊಪ್ಪಿನ, ರಾಜು ಗೌಳಿ, ಸೋಮಶೇಖರ ಕೊತಂಬರಿ, ಶಿವಲಿಂಗಪ್ಪ ತಲ್ಲೂರ, ಮಲ್ಲಿಕಾರ್ಜುನ ಅಗಡಿ, ಗಣೇಶ ಮೂಡ್ಲಿಯವರ, ಮಹೇಶ ಕಮಡೊಳ್ಳಿ, ರವಿಕಿರಣ ಪಾಟೀಲ, ಡಾ.ಸುನಿಲ ಹಿರೇಮಠ, ರವಿಚಂದ್ರ ಪುರೋಹಿತ, ನಿಜಲಿಂಗಪ್ಪ ಮುದಿಯಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು.

ಗೊಂದಲಮಯ:

ಈ ಹಿಂದೆ ಬಿಜೆಪಿ ತಾಲ್ಲೂಕು ಘಟಕದ ರಚನೆಯಾಗುವ ಸಮಯದಲ್ಲಿ ಇಷ್ಟು ಸಂಖ್ಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರು ಇರಲಿಲ್ಲ. ಆಗೆಲ್ಲ ಸಿ.ಎಂ.ಉದಾಸಿ ಅವರ ಆಣತಿ ಮೇರೆಗೆ ಅಧ್ಯಕ್ಷ ಸ್ಥಾನ ಅಂತಿಮಗೊಳ್ಳುತ್ತಿತ್ತು. ಪಕ್ಷದ ತಾಲ್ಲೂಕು ಘಟಕದ ಪುನರ್‌ರಚನೆಯೂ ಕ್ಷಣಮಾತ್ರದಲ್ಲಿ ಸಿದ್ಧಗೊಳ್ಳುತ್ತಿತ್ತು.

ಸಿ.ಎಂ.ಉದಾಸಿ ಗತಿಸಿದ ಬಳಿಕ ಸುಮಾರು ಎರಡು ವರ್ಷದಿಂದ ಕ್ಷೇತ್ರದಲ್ಲಿ ನಾಯಕತ್ವದ ಹಿಡಿತ ಸಡಿಲಗೊಳ್ಳುತ್ತಿದೆ. 2021ರಲ್ಲಿ ನಡೆದ ವಿಧಾನಸಭೆಯ ಉಪ ಚುನಾವಣೆಯಲ್ಲಿ ಉದಾಸಿ ಕುಟುಂಬವನ್ನು ಪಕ್ಷ ಗಣನೆಗೆ ತೆಗೆದುಕೊಳ್ಳದ ಕಾರಣಕ್ಕಾಗಿ ಸಂಸದ ಶಿವಕುಮಾರ ಉದಾಸಿ ಕೂಡ ರಾಜಕೀಯ ನಿವೃತ್ತಿಯ ಹಾದಿ ಹಿಡಿದಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಕ್ಷೇತ್ರದಲ್ಲಿ ಗೊಂದಲಮಯ ವಾತಾವರಣ ಆವರಿಸಿದೆ.

ಕ್ಷೇತ್ರದಲ್ಲಿ ಆವರಿಸಿರುವ ನಾಯಕತ್ವದ ನಿರ್ವಾತದ ಬಗ್ಗೆ ಫೆ.2ರಂದು ನಡೆದಿದ್ದ ದಿ.ಸಿ.ಎಂ.ಉದಾಸಿ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚ್ಯವಾಗಿ ಮಾತನಾಡಿದ್ದರು.

ಶಿವರಾಜ ಸಜ್ಜನರ
ಶಿವರಾಜ ಸಜ್ಜನರ
ಸಲ್ಲಿಕೆ ಆದ ಎಲ್ಲ ಅರ್ಜಿಗಳನ್ನು ರಾಜ್ಯ ಸಮಿತಿಗೆ ಕಳಿಸಿ ಅಲ್ಲಿಂದ ಆಯ್ಕೆ ಅಂತಿಮಗೊಳ್ಳಲಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ
– ಅರುಣಕುಮಾರ ಪೂಜಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
‘ಸಂಘಟನಾ ಚತುರನಿಗೆ ಮಣೆ’
‘ಬಿಜೆಪಿ ತಾಲ್ಲೂಕು ಘಟಕದ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿವೆ. ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತಗೊಂಡಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನಕ್ಕೆ 19 ಆಕಾಂಕ್ಷಿತರು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಅದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ’ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು.  ಒಟ್ಟಿನಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟಿತವಾಗಬೇಕು. ಎರಡು ಬಾರಿ ಎದುರಾದ ವಿಧಾನಸಭೆ ಚುನಾವಣೆ ಸೋಲನ್ನು ಈ ಸಲ ಲೋಕಸಭೆ ಚುನಾವಣೆ ಮೂಲಕ ಮರೆಯುವಂತಾಗಬೇಕು. ಹಿರಿಯರು ಸೇರಿಕೊಂಡು ಚರ್ಚಿಸಿ ಸಂಘಟನಾ ಚತುರ ಯೋಗ್ಯರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT