ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಳೆ ಅಬ್ಬರ, ನಡುಗುತಿದೆ ನದಿಪಾತ್ರ!

ಐದು ದಿನದಲ್ಲಿ 285 ಮಿ.ಮೀ ಮಳೆ
Last Updated 6 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ನೆರೆ ಇಳಿದು ಸಂತ್ರಸ್ತರು ಬದುಕು ಕಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲೇ ಜಿಲ್ಲೆಯಲ್ಲಿ ಮತ್ತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ನದಿಗಳಲ್ಲೂ ನೀರಿನ ಮಟ್ಟ ಹಂತ ಹಂತವಾಗಿ ಏರುತ್ತಿರುವುದು, ನದಿಪಾತ್ರದ ಜನ ಆತಂಕದಿಂದ ಏದುಸಿರು ಬಿಡುವಂತೆ ಮಾಡಿದೆ.

‘ಸೆ.1ರಿಂದ ಸೆ.5ರವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 285 ಮಿ.ಮೀ ಮಳೆ ಸುರಿದಿದೆ’ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತದೆ. ಹಾನಗಲ್, ಹಿರೇಕೆರೂರು, ಹಾವೇರಿ ಹಾಗೂ ಶಿಗ್ಗಾವಿ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಜಮೀನುಗಳು ಮತ್ತೆ ಜಲಾವೃತವಾಗುತ್ತಿವೆ. ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ 111 ಮಿ.ಮೀ ಮಳೆ ಸುರಿದಿದೆ.

‘ಈಗಾಗಲೇ ಗ್ರಾಮದಲ್ಲಿ 30 ಮನೆಗಳು ನೆಲಕ್ಕುರುಳಿವೆ. ಇನ್ನೂ ನೂರಕ್ಕೂ ಹೆಚ್ಚು ಮನೆಗಳು ಯಾವಾಗ ಬೀಳುತ್ತವೋ ಎನ್ನುವ ಸ್ಥಿತಿಯಲ್ಲಿವೆ. ಗ್ರಾಮಸ್ಥರೆಲ್ಲ ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟುಬಂದು, ಆ ಮನೆಗಳನ್ನು ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ. ಈಗ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ’ ಎನ್ನುತ್ತಾರೆ ಕೆಸರಳ್ಳಿಯ ವೀರೇಶ್ ಹಿರೇಮಠ.

‘ಕೆಸರಳ್ಳಿ ಗ್ರಾಮವನ್ನು ಸ್ಥಳಾಂತರಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಜಾಗದ ಕೊರತೆ ಇರುವುದಾಗಿ ಹೇಳುತ್ತಿದ್ದಾರೆ. ಇನ್ನೊಂದು ಪ್ರವಾಹವನ್ನು ಎದುರಿಸುವಷ್ಟು ಶಕ್ತಿ ನಮ್ಮಲ್ಲಿ ಉಳಿದಿಲ್ಲ. ಅಂತಹ ಅನಾಹುತ ಈಗ ಮರುಕಳಿಸಿದರೆ, ಪರಿಹಾರ ಕೇಂದ್ರಗಳಿಗೂ ಹೋಗದೆ ಮನೆಗಳಲ್ಲೇ ಉಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡುತ್ತಾರೆ ಅವರು.

ನದಿಪಾತ್ರದಲ್ಲೇ ಬದುಕು: ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಲ್ಲಿ ಜಲಾವೃತವಾಗಿದ್ದ ಗುಯಿಲಗುಂದಿ, ಮೇಲ್ಮುರಿ, ನಾಗನೂರು, ಮಂಟಗಣಿ, ಚಿಕ್ಕಮುಗದೂರು, ಕಲಕೋಟಿ, ಅರಳಿಹಳ್ಳಿ, ನದಿನೀರಲಗಿ, ಡೊಂಬರಮತ್ತೂರು, ಹಳೇ ಹಲಸೂರು, ಕುಣಿಮೆಳ್ಳಿಹಳ್ಳಿ, ಮನ್ನಂಗಿ, ಮೆಳ್ಳಾಗಟ್ಟಿ, ಲಕ್ಮಾಪುರ, ಅಲ್ಲಾಪುರ, ಶೀಗಿಹಳ್ಳಿ, ಹರವಿ, ಬಸಾಪುರ, ನಿಡಸಂಗಿ ಹಾಗೂ ಕೂಡಲ (ಒಟ್ಟು 19) ಗ್ರಾಮಗಳನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.‌

ಈ ಗ್ರಾಮಗಳ ಸಂತ್ರಸ್ತರ ಪೈಕಿ ಕೆಲವರು ಜಿಲ್ಲಾಡಳಿತ ಹಾಕಿಕೊಟ್ಟಿರುವ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದರೆ, ಬಹುತೇಕ ಮಂದಿ ಜೀವದ ಹಂಗು ತೊರೆದು ಶಿಥಿಲಗೊಂಡಿರುವ ತಮ್ಮ ಮನೆಗಳಿಗೇ ಮರಳಿದ್ದಾರೆ. ಈಗ ವರದಾ ಹಾಗೂ ತುಂಗಭದ್ರಾ ನದಿಗಳ ನೀರಿನ ಹರಿವು ಹೆಚ್ಚಾಗಿರುವುದರಿಂದ ಅವರೆಲ್ಲ ದಿಕ್ಕು ತೋಚದ ಸ್ಥಿತಿ ತಲುಪಿದ್ದಾರೆ.‌

‘ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೂಡಲ–ನಾಗನೂರ ಬಾಂದಾರ ಎರಡನೇ ಸಲ ಮುಳುಗಿದೆ. ಆದರೆ, ಪ್ರವಾಹ ಸೃಷ್ಟಿಸುವಷ್ಟು ಅಪಾಯದ ಮಟ್ಟವನ್ನು ನದಿಗಳು ತಲುಪಿಲ್ಲ. ನೀರು ನಿರ್ದಿಷ್ಟ ಮಟ್ಟವನ್ನು ಮೀರಿದ ಕೂಡಲೇ ನದಿಪಾತ್ರದ ಜನರನ್ನು ಮತ್ತೆ ಸ್ಥಳಾಂತರಿಸಲಾಗುವುದು’ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ.

19 ಕಡೆ ತಡೆಗೋಡೆ: ‘ನೀರು ನದಿಯಿಂದ ಆಚೆ ಬಾರದಂತೆ ಕರ್ಜಗಿ, ಕೆಸರಳ್ಳಿ, ಹೊಸರಿತ್ತಿ, ಹಾಲಗಿ, ಕೋಣನತಂಬಗಿ, ಟಾಟಾಮಣ್ಣೂರು, ಬೆಳವಗಿ, ಗುಯಿಲಗುಂದಿ, ಗಳಗನಾಥ, ಹಾಂವಶಿ ಸೇರಿದಂತೆ ನದಿಪಾತ್ರದ 19 ಗ್ರಾಮಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ತಡೆಗೋಡೆ ನಿರ್ಮಾಣಕ್ಕೆ ಮೌಖಿಕ ಒಪ್ಪಿಗೆ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT