ಶನಿವಾರ, ಮಾರ್ಚ್ 28, 2020
19 °C
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿಕೆ

ಹಾಲು ಒಕ್ಕೂಟ ಸ್ಥಾಪನೆಗೆ ಮುಖ್ಯಮಂತ್ರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ ಅರ್ಧದಷ್ಟು ಹಾಲು ಧಾರವಾಡ ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತಿದ್ದು, ಹಾವೇರಿಯಲ್ಲಿಯೂ ಒಂದು ಹಾಲು ಒಕ್ಕೂಟ ಆರಂಭಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಸಲ್ಲಿಸಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 460 ಹಾಲು ಉತ್ಪಾದಕರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಪ್ರತಿದಿನ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚು ಲೀಟರ್‌ ಹಾಲನ್ನು 20 ಸಾವಿರ ಹಾಲು ಉತ್ಪಾದಕರ ಕುಟುಂಬದಿಂದ ಧಾರವಾಡದಲ್ಲಿರುವ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ಈ ಬಜೆಟ್‌ನಲ್ಲಿ ಸರ್ಕಾರ ಹಾಲು ಒಕ್ಕೂಟ ಸ್ಥಾಪನೆಗೆ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಧಾರವಾಡ ಹಾಲು ಒಕ್ಕೂಟವು ನಾಲ್ಕು ಜಿಲ್ಲೆಗಳ ಭೌಗೋಳಿಕ ವಿಸ್ತಾರವನ್ನು ಹೊಂದಿದೆ. ಇದರಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಧಾರವಾಡದ ಹಾಲು ಸಂಸ್ಕರಣಾ ಘಟಕಕ್ಕೆ ಸಾಗಾಣಿಕೆ ಮಾಡುವ ವೆಚ್ಚ ಅಧಿಕವಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ದರ ನೀಡುವಲ್ಲಿ ಹೊರೆಯಾಗುತ್ತಿದೆ. ಹಾವೇರಿಯಲ್ಲಿ ಹಾಲು ಒಕ್ಕೂಟ ಆರಂಭಿಸಿದರೆ ಉದ್ಯೋಗ ಸೃಷ್ಟಿಯ ಜತೆಗೆ ರೈತರಿಗೂ ಲಾಭ ದೊರಕಿದಂತಾಗುತ್ತದೆ ಎಂದರು.

ಜಿಲ್ಲೆಯಲ್ಲಿ 22 ಬಲ್ಕ್‌ಮಿಲ್ಕ್‌ ಕೂಲರ್‌ಗಳನ್ನು ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ನಿರ್ಮಿಸಲಾಗಿದ್ದು, ಇನ್ನೂ 20 ಬಲ್ಕ್‌ಮಿಲ್ಕ್‌ ಕೂಲರ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಎರಡು ಹಾಲು ಶೀತಲೀಕರಣ ಘಟಕಗಳಿದ್ದು, ಅವುಗಳನ್ನು ಉನ್ನತ ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅತಿ ಹೆಚ್ಚು ಹಾಲು ಉತ್ಪಾದನೆಗೆ ಬೇಕಾದ ಸಮತೋಲನ ಪಶು ಆಹಾರ, ಖನಿಜ ಮಿಶ್ರಣ, ಜಂತು ನಿವಾರಣಾ ಔಷಧ ಬಳಕೆ ಕುರಿತು ಉತ್ಪಾದಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡುವಂತೆ ಎಲ್ಲ ಶಾಸಕರ ಶಿಫಾರಸು ಪತ್ರ, ಸುಮಾರು 20 ಸಾವಿರ ರೈತರ ಸಹಿ ಹಾಗೂ ಮನವಿ ಪತ್ರವನ್ನು ವಿಸ್ತೃತ ಯೋಜನಾ ವರದಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುದಾನವನ್ನು ಮೀಸಲಿಡಲು ಶಿಫಾರಸು ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಎಮ್ಮೆಗಳು, ಎರಡು ಲಕ್ಷಕ್ಕಿಂತ ಹೆಚ್ಚು ಮಿಶ್ರ ತಳಿಯ ಹಸುಗಳು ಇವೆ. ಪ್ರತಿ ವರ್ಷ ಹಾಲು ಉತ್ಪಾದನೆಯಲ್ಲಿ ಶೇ 20 ಏರಿಕೆಯಾಗುತ್ತಿದೆ. ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 494 ಗ್ರಾಮಗಳನ್ನು ಸಂಪೂರ್ಣ ಹೈನುಗಾರಿಕೆ ಗ್ರಾಮವಾಗಿ ಮಾಡಬೇಕು ಎಂಬ ಯೋಜನೆ ಇದೆ ಎಂದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು