ಶುಕ್ರವಾರ, ಡಿಸೆಂಬರ್ 2, 2022
20 °C
ನಗರೇಶ್ವರ ದೇವಾಲಯದ ಸೊಬಗು: ಜೈನರ ವಿದ್ಯಾಪೀಠವಾಗಿದ್ದ ಗ್ರಾಮ

ಹಾವೇರಿ: ಬಕಾಸುರನ ರಾಜಧಾನಿಯಾಗಿದ್ದ ಬಂಕಾಪುರ!

ಎಂ.ವಿ. ಗಾಡದ, ಶಿಗ್ಗಾವಿ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ದೇವಾಲಯಗಳ ತವರೂರು ಎಂದೇ ಬಣ್ಣಿಸಿರುವ ಮಹಾಭಾರತದಲ್ಲಿ ಬರುವ ಬಕಾಸುರನ ರಾಜಧಾನಿ ಏಕಚಕ್ರ ನಗರ, ಮುಂದೆ ಬಂಕೆಯನಪುರ, ಬಂಕಾಪುರವೆಂದು ನಾಮಕರಣಗೊಂಡಿದೆ ಎಂಬ ಕೆಲವು ದಾಖಲೆಗಳಿಂದ ಕಂಡು ಬಂದಿದೆ.

ರಾಷ್ಟ್ರಕೂಟರ ಸಾಮಂತರಾದ ಚಲ್ಲಕೇಶವನ ವಂಶಸ್ಥರು ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಅವರಲ್ಲಿ ಪ್ರಮುಖ ದೂರೆಯಾದ ಲೋಕಾಧಿತ್ಯ ತನ್ನ ತಂದೆ ಬಂಕೆಯ ಸ್ಮರಣೆಗಾಗಿ ಈ ಗ್ರಾಮವನ್ನು ಅಂದು ಬಂಕಾಪುರವೆಂದು ನಾಮಕರಣ ಮಾಡಿರುವುದು ಇತಿಹಾಸದಿಂದ ತಿಳಿಯಲಾಗಿದೆ.

ಖಣಜಗೇರಿ, ಶಹಬಜಾರ, ಕೊಟ್ಟಿಗೇರಿ, ಸುಂಕದಕೆರಿ, ಅಂಕದಕಣ ಸೇರಿ ಬಂಕಾಪುರ ಎಂಬ ಪಟ್ಟಣವಾಯಿತು ಎಂಬ ಪ್ರತಿಕಗಳಿವೆ. ಸನ್ 1951ರವರೆಗೆ ತಾಲ್ಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸಿದೆ. ರಾಷ್ಟ್ರಕೂಟರ ಚಕ್ರವರ್ತಿ ನೃಪತುಂಗನ ಪ್ರಮುಖ ಸೇನಾನಿ ಮಾಂಡಲಿಕನ ಬಂಕೆಯ ಅರಸನ ಹೆಸರು ಈ ಪಟ್ಟಣಕ್ಕೆ ಬಂದಿದೆ ಎಂದು ತಿಳಿಯಲಾಗಿದೆ. ಹೊಯ್ಸಳರ ವಿಷ್ಣುವರ್ಧನ ಬಂಕಾಪುರದಲ್ಲಿ ಅಸುನೀಗಿದನೆಂದು ಇತಿಹಾಸದಿಂದ ತಿಳಿದು ಬರುತ್ತಿದೆ.

ಕದಂಬರು, ಕಲ್ಯಾಣ ಚಾಲುಕ್ಯರು, ಚಾಲುಕ್ಯನ ಸಾಮಂತ ಕದಂಬ ಅರಿಕೇಸರಿಯ ಆಡಳಿತಕ್ಕೆ ಒಳಪಟ್ಟಿತ್ತು. ಅಲಿ ಆದಿಲ್ ಷಾ, ವಿಜಯಪುರದ ಸುಲ್ತಾನರು, ದಳಪತಿ ಮುಸ್ತಫಾ ಖಾನ್ ಇಲ್ಲಿ ಆಡಳಿತ ನಡೆಸಿದ್ದಾರೆ. ನಂತರ ಬ್ರಿಟಿಷರ ವಿರುದ್ಧ ಬಂಡಾಯವೆದ್ದ ನರಗುಂದ ಬಾಬಾಸಾಹೇಬರು ತಮ್ಮ ಕೊನೆಗಾಲದಲ್ಲಿ ಬಂಕಾಪುರದಲ್ಲಿ ಅಸುನೀಗಿದರು ಎಂದು ಇತಿಹಾಸ ತಜ್ಞರು ತಿಳಿಸುತ್ತಾರೆ. 

ಜೈನರ ವಿದ್ಯಾಪೀಠ

ಐತಿಹಾಸಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ, ಜೈನರ ಪ್ರಮುಖ ವಿದ್ಯಾಪೀಠವಾಗಿತು. ಆದಿಕವಿ ರನ್ನ ಅಜಿತ ಸೇನಾಚಾರ್ಯರಿಂದ ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿದು ಬಂದಿದೆ. ಪ್ರಾಚೀನ ಶಾಸನ, ದೇವಾಲಯಗಳು, ಜೈನ ಬಸದಿ, ಕೋಟೆ, ಮಠ, ಮಸೀದಿ ದರ್ಗಾಗಳನ್ನು ಹೊಂದಿರುವ ಪ್ರಮುಖ ಪಟ್ಟಣವಾಗಿದೆ.

ಪೇಟೆ ಯಲ್ಲಮ್ಮ, ಕೋಟೆ ಯಲ್ಲಮ್ಮ, ಕೆಂಡದಮಠ, ಅರಳೆಲೆಮಠ, ಮೈಲಾರಲಿಂಗೇಶ್ವರ ದೇವಸ್ಥಾನ, ಹುಚ್ಚೇಶ್ವರಮಠ, ದೇಸಾಯಿಮಠ, ದುರ್ಗಾದೇವಿ ದೇವಸ್ಥಾನಗಳು ಪ್ರಮುಖ ದೇವಾಲಯಗಳಿವೆ. ಸುಮಾರು 45 ಗ್ರಾಮಗಳ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಇಲ್ಲಿನ ವ್ಯಾಪಾರಿಗಳು ರಾಜ್ಯ, ರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಗಳನ್ನು ಹೊಂದಿದ್ದರು. 

ಪಂಚಮಲ್ಲಕಪ್ಪನ ಭಾವಿ, ಕಳ್ಳರಭಾವಿ, ಅಯ್ಯನಹೊಂಡ, ಯಲ್ಲಮ್ಮನ ಹೊಂಡ ಸೇರಿದಂತೆ ಸಾಕಷ್ಟು ಐತಿಹಾಸಿಕ ಬಾವಿಗಳನ್ನು ಕಾಣುತ್ತೇವೆ. ಹಿಂದೂ, ಮುಸ್ಲಿಂ ಸೇರಿದಂತೆ ಸರ್ವ ಜನಾಂಗದವರಿದ್ದಾರೆ. ಇಲ್ಲಿ ಅನೇಕ ಗರಡಿ ಮನೆಗಳಿದ್ದು, ಇಲ್ಲಿನ ರಾಜ್ಯ, ರಾಷ್ಟ್ರೀಯ ಮಟ್ಟದ ಕುಸ್ತಿ ಆಟದಲ್ಲಿ ಖ್ಯಾತಿ ಪಡೆದಿದೆ. ಐತಿಹಾಸಿಕವಾಗಿ ವಿದ್ಯಾ ಕೇಂದ್ರ ಎನ್ನಿಸಿಕೊಂಡಿದೆ ನಿವೃತ್ತ ಇತಿಹಾಸ ಶಿಕ್ಷಕ ಎ.ಕೆ.ಆದವಾನಿಮಠ ವ್ಯಕ್ತಪಡಿಸುತ್ತಾರೆ.

66 ಕಂಬಗಳ ದೇವಾಲಯ

ಇಲ್ಲಿನ ಕೋಟೆ ಆವರಣದಲ್ಲಿರುವ 66 ಕಂಬಗಳ ನಗರೇಶ್ವರ ದೇವಾಲಯ ಕ್ರಿ.ಶ. 1090ರಲ್ಲಿ ಕಲ್ಯಾಣ ಚಾಲುಕ್ಯರ 6ನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣವಾಗಿದ್ದು ಜಕಣಾಚಾರ್ಯರು ಅದನ್ನು ಕಟ್ಟಿದ್ದಾರೆ. ಈ ನಗರೇಶ್ವರ ದೇವಸ್ಥಾನವನ್ನು ಬಾಡ ಗ್ರಾಮಕ್ಕೆ ದತ್ತು ನೀಡಲಾಗಿತ್ತು. ಇಲ್ಲಿನ ಅನೇಕ ಸಂತರು, ಸ್ವಾಮೀಜಿಗಳು ಇಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು ಎಂಬ ಇತಿಹಾಸದಿಂದ ಕಾಣುತ್ತೇವೆ. ಆದರೆ ಇಂದು ಮೂರ್ತಿಗಳಿಲ್ಲ. ಇಲ್ಲಿನ ಭಕ್ತರ ಅಭಿಲಾಷೆಯಂತೆ ಸರ್ಕಾರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು