ಭಾನುವಾರ, ಫೆಬ್ರವರಿ 28, 2021
24 °C
ಒಂದೂವರೆ ತಿಂಗಳಿಂದ ಸ್ಥಗಿತಗೊಂಡ ವ್ಯಾಪಾರ: ಸಂಕಷ್ಟಕ್ಕೆ ಸಿಲುಕಿದ ಮುದ್ರಣಕಾರರು, ಡಿಟಿಪಿ ಆಪರೇಟರ್‌ಗಳು

ಹಾವೇರಿ: ಬಣ್ಣ ಕಾಣದ ಮುದ್ರಣ ಯಂತ್ರಗಳು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಆಫ್‌ಸೆಟ್‌, ಡಿಜಿಟಲ್‌, ಸ್ಕ್ರೀನ್‌ ಪ್ರಿಂಟಿಂಗ್ ಹಾಗೂ ಫ್ಲೆಕ್ಸ್‌ ಮುದ್ರಣ ಯಂತ್ರಗಳು ಬಣ್ಣ ಕಾಣದೆ ಒಂದೂವರೆ ತಿಂಗಳಾಯಿತು. ಉತ್ತಮ ಸೀಸನ್‌ ಆದ‌ ಮಾರ್ಚ್‌ನಿಂದ ಮೇ ತಿಂಗಳವರೆಗೆ ಹಗಲು–ರಾತ್ರಿ ಬಿಡುವಿಲ್ಲದೆ ದುಡಿಯುತ್ತಿದ್ದ ಮುದ್ರಣ ಕೆಲಸಗಾರರು ಈಗ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಮುದ್ರಣ ಯಂತ್ರಗಳ ಸಪ್ಪಳವೂ ಮಾಯವಾಗಿದೆ. 

ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿತು. ಇದರಿಂದ ಮುದ್ರಣ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಮದುವೆ, ನಾಮಕರಣ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳಿಗೆ ತೆಗೆದುಕೊಂಡಿದ್ದ ಆರ್ಡರ್‌ಗಳು ಕೂಡ ರದ್ದಾಗಿವೆ. 

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮುದ್ರಣ ಘಟಕಗಳಿದ್ದು, ಮುದ್ರಣ ವೃತ್ತಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುದ್ರಣ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಬೇರೆ ವೃತ್ತಿ ಮಾಡಲು ಬಾರದ ಕಾರಣ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. 

ನುಚ್ಚು ನೂರಾದ ಕನಸು

‘ಮದುವೆ ಸೀಸನ್‌’ನಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ ಎಂದು ನಿರೀಕ್ಷಿಸಿದ್ದ ಮುದ್ರಣಕಾರರು ಕಾಗದ, ತರಹೇವಾರಿ ವಿನ್ಯಾಸದ ಮದುವೆ ಕಾರ್ಡ್‌, ವಿವಿಧ ವರ್ಣಗಳ ಡಬ್ಬ, ಹೆಚ್ಚುವರಿ ಯಂತ್ರ, ಕಟಿಂಗ್‌ ಮಷಿನ್‌ ಸೇರಿದಂತೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಇನ್ನೂ ಕೆಲವರು ಸಾಲ ಮಾಡಿ ಮುದ್ರಣ ಯಂತ್ರಗಳನ್ನು ಖರೀದಿಸಿ, ಈ ಸೀಸನ್‌ನಲ್ಲಿ ಉತ್ತಮ ಆದಾಯ ಬರುತ್ತದೆ, ಸಾಲ ತೀರಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಕೊರೊನಾ ದಾಳಿ ಮುದ್ರಣಕಾರರ ಕನಸನ್ನು ನುಚ್ಚು ನೂರಾಗಿಸಿದೆ. 

ಅನೇಕ ಮುದ್ರಣಕಾರರು ರಾಷ್ಟ್ರೀಕೃತ ಬ್ಯಾಂಕ್‌, ಸೌಹಾರ್ದ ಸಹಕಾರಿ ಬ್ಯಾಂಕ್‌ ಹಾಗೂ ಫೈನಾನ್ಸ್‌ಗಳಿಂದ ಸಾಲ ಪಡೆದಿದ್ದು, ಈಗ ಕಂತು ಕಟ್ಟಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಮಳಿಗೆಗಳ ಬಾಡಿಗೆ, ಮನೆ ಬಾಡಿಗೆ, ಕಾರ್ಮಿಕರ ವೇತನ, ಸಾಲ ಮರುಪಾವತಿ ಮಾಡುವುದು ಮುದ್ರಣಕಾರರರಿಗೆ ದೊಡ್ಡ ಸವಾಲಾಗಿದೆ. 

ಸರ್ಕಾರ ನೆರವು ನೀಡಲಿ

‘ಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳವರೆಗೆ ಮದುವೆ, ಶುಭ ಸಮಾರಂಭ, ಸರ್ಕಾರಿ ಮುದ್ರಣಗಳು ಹೆಚ್ಚಾಗಿ ಬರುತ್ತಿದ್ದವು. ಇದೇ ಸಮಯದಲ್ಲೇ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವ್ಯಾಪಾರ–ವಹಿವಾಟು ಸಂಪೂರ್ಣ ಸ್ಥಗಿತಗೊಂಡು ವರ್ಷದ ಆದಾಯಕ್ಕೆ ಕುತ್ತು ಬಂದಿದೆ. ಕಷ್ಟಕರ ದಿನಗಳನ್ನು ಎದುರಿಸುತ್ತಿರುವ ಮುದ್ರಣ ಕ್ಷೇತ್ರದವರ ಕಡೆ ರಾಜ್ಯ ಸರ್ಕಾರ ಗಮನಹರಿಸಿ ಆರ್ಥಿಕ ನೆರವು ನೀಡಬೇಕು’ ಎಂದು ಹಾವೇರಿ ತಾಲ್ಲೂಕು ಮುದ್ರಣಕಾರರ ಸಂಘದ ಖಜಾಂಚಿ ವಸಂತ ಆರ್‌.ಹಾವನೂರ ಮನವಿ ಮಾಡಿದರು. 

ಗ್ರಾಹಕರ ಕೊರತೆ

ವಿಸಿಟಿಂಗ್‌ ಕಾರ್ಡ್‌, ಲಗ್ನ ಪತ್ರಿಕೆ, ಹ್ಯಾಂಡ್‌ಬಿಲ್‌, ಪೋಸ್ಟರ್‌, ಬಿಲ್‌ ಬುಕ್‌, ಲಗ್ನಪತ್ರಿಕೆ, ತಿಥಿ ಕಾರ್ಡ್‌ ಸೇರಿದಂತೆ ಡಿಟಿಪಿ ಕೆಲಸ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಹಳ್ಳಿಯಿಂದ ಮುದ್ರಣ ಕೆಲಸಗಳಿಗೆ ಬರುತ್ತಿದ್ದ ಜನರು ನಗರಗಳತ್ತ ತಲೆ ಹಾಕುತ್ತಿಲ್ಲ. ಎರಡು ಮೂರು ದಿನಗಳಿಂದ ಬೆಳಿಗ್ಗೆ 10ರಿಂದ ಸಂಜೆ 7ರವೆಗೆ ಮುದ್ರಣ ಕೆಲಸಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದರೂ, ಗ್ರಾಹಕರ ಕೊರತೆಯಿಂದ ಕೆಲಸ ನಡೆಯುತ್ತಿಲ್ಲ. ಲಾಕ್‌ಡೌನ್‌ ಮುಗಿದ ಮೇಲೆ ಕೆಲವು ಯಂತ್ರಗಳು ಚಾಲನೆಗೊಳ್ಳುವುದೇ ಅನುಮಾನವಿದೆ’ ಎಂದು ಹಾವನೂರ ಬೇಸರ ವ್ಯಕ್ತಪಡಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು