ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ: ಜಿಲ್ಲಾಧಿಕಾರಿ

ವಿದೇಶದಲ್ಲಿರುವವರ ಮಾಹಿತಿ ನೀಡಲು ಮನವಿ 
Last Updated 18 ಮಾರ್ಚ್ 2020, 12:47 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ನಿವಾಸಿಗಳ ಪೈಕಿ ಯಾರಾದರೂ ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದರೆ ಅಂಥವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಬುಧವಾರ ನಡೆಸಿದ ಅವರು ಮೂಲತಃ ಹಾವೇರಿಯವರಾಗಿದ್ದು, ಹೊರದೇಶದಲ್ಲಿ ನೆಲೆಸಿದ್ದರೆ ಸದ್ಯದಲ್ಲೇ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅವರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ತಿಳಿಸಿದ್ದಾರೆ.

ವಿದೇಶದಲ್ಲಿ ನೆಲೆಸಿದ ಕುಟುಂಬದ ಸದಸ್ಯರ ಮಾಹಿತಿಯನ್ನು ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತದ ಸಹಾಯವಾಣಿ 08375-249102ಗೆ ಕರೆ ಮಾಡಿ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕರೋನಾ ಭಯವಿಲ್ಲ. ಮೊದಲ ಹಂತದ ಒಂದು ಮತ್ತು ಎರಡರ ಸೋಂಕು ಮಾತ್ರ ಜಿಲ್ಲೆಯಲ್ಲಿದೆ. ವಿದೇಶಿಗರ ಮೇಲೆ ಹಾಗೂ ಪ್ರವಾಸಿಗರ ಮೇಲೆ, ಹೊರ ಜಿಲ್ಲೆ, ಹೊರ ರಾಜ್ಯದ ರೈಲ್ವೆ, ಬಸ್ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ತಪಾಸಣೆ ನಡೆಸಲಾಗುತ್ತಿದೆ. ಬಸ್ ರೈಲ್ವೆ ಪ್ರಯಾಣಿಕರ ಹೊರತುಪಡಿಸಿ ಕಾರು ಇತರೆ ಸೌಕರ್ಯ ಬಳಸಿ ಪ್ರಯಾಣ ಬೆಳೆಸುವವರ ಮೇಲೂ ನಿಗಾವಹಿಸಲಾಗುವುದು ಎಂದು ವಿವರಿಸಿದರು.

ಸ್ಕ್ರೀನಿಂಗ್‌ ಮಾಡಲು ಸೂಚನೆ

ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. ಪ್ರತಿ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲು ಹಾಗೂ ಐಸೋಲೇಷನ್ ವಾರ್ಡ್‍ಗಳನ್ನು ರಚಿಸಲಾಗಿದೆ. ಮಾಸ್ಕ್ ಸೇರಿದಂತೆ ಕರೋನಾ ತಡೆಯ ಹೆಚ್ಚುವರಿ ವೈದ್ಯಕೀಯ ಉಪಕರಣಗಳಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಠಿಣ ಕ್ರಮ

ಮಾಸ್ಕ್ ಹಾಗೂ ಸಾನಿಟೈಸರ್ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಎಲ್ಲ ಅಂಗಡಿ ಮಾಲೀಕರಿಗೆ, ಮಾಲ್‍ಗಳಿಗೆ , ಮೆಡಿಕಲ್ ಶಾಪ್‍ಗಳಿಗೆ ಸೂಚನೆ ನೀಡಲಾಗಿದೆ. ಮಾಸ್ಕ್ ಮತ್ತು ಸಾನಿಟೈಸರ್ ಕೊರತೆ ಕುರಿತಂತೆ ಪರಿಶೀಲನೆ ನಡೆಸಿ ಹೊರ ಜಿಲ್ಲೆಯಿಂದ ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು.

ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಒಳಗೊಂಡಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಕೌಂಟರ್‌ಗಳನ್ನು ತೆರೆದು ತಪಾಸಣೆ ಮಾಡಿಸಲಾಗುವುದು. ಸಂತೆಗಳ ರದ್ದು ಕುರಿತಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಾಂಸ ಮಾರಾಟವನ್ನು ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಿಷೇಧಿಸಲಾಗಿಲ್ಲ. ಬೆಳವಣಿಗೆ ನೋಡಿಕೊಂಡು ನಿಷೇಧ ಕುರಿತು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT