ಮಂಗಳವಾರ, ಮೇ 26, 2020
27 °C
ಜಿಲ್ಲೆಯಲ್ಲಿ 125 ಮಂದಿ ನೋಂದಣಿ: ವೈರಾಣು ಸೋಂಕು ತಡೆಗಟ್ಟಲು ಪಣ

ಹಾವೇರಿ: ವದಂತಿ ತಡೆಗೆ ‘ಕೊರೊನಾ ಸೈನಿಕರು’ ಸಜ್ಜು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ವೈರಸ್‌ ಬಗ್ಗೆ ಹರಡುವ ವದಂತಿ ಹಾಗೂ ಅಪಪ್ರಚಾರಗಳನ್ನು ತಡೆದು, ಜನರಿಗೆ ನೈಜ ಮಾಹಿತಿ ಒದಗಿಸಲು ಜಿಲ್ಲೆಯಲ್ಲಿ 125 ಮಂದಿ ‘ಕೊರೊನಾ ಸೈನಿಕರು’ ಸಜ್ಜಾಗಿದ್ದಾರೆ. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ಆರಂಭಿಸಿರುವ ಜನಹಿತ ಸೇವೆಗೆ ‘ಕೊರೊನಾ ಸೈನಿಕರು’ ಕಾರ್ಯ ನಿರ್ವಹಿಸಲಿದ್ದಾರೆ. ಸ್ಥಳೀಯವಾಗಿ ಕೊರೊನಾ ಸಂಬಂಧಿತ ವಿದ್ಯಮಾನಗಳನ್ನು ತಂಡದ ಗಮನಕ್ಕೆ ತರಲು ಶ್ರಮಿಸಲಿದ್ದಾರೆ. 

ಕೊರೊನಾ ವಿರುದ್ಧ ಹೋರಾಡಲು ಸ್ವಯಂ ಸೇವಕರಾಗಿ ಕೈ ಜೋಡಿಸಿ ಎಂದು ಸರ್ಕಾರ ನೀಡಿದ ಕರೆಗೆ, https://covid19. karnataka.gov.in/ coronawarrior.html ನಲ್ಲಿ ಈಗಾಗಲೇ ರಾಜ್ಯದಾದ್ಯಂತ 23 ಸಾವಿರ ಮಂದಿ ‘ಕೊರೊನಾ ಸೈನಿಕ’ರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 125 ಮಂದಿಯನ್ನು ಮೊದಲ ಹಂತದಲ್ಲಿ ಅಂತಿಮಗೊಳಿಸಿದ್ದು, ಅವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. 

ಆಹಾರ, ತಿಂಡಿ ಸಾಗಣಿಕೆ, ಟೆಲಿವೈದ್ಯ ಸಮಾಲೋಚನೆ, ಮಾನಸಿಕ ತಜ್ಞರ ಸಲಹೆ, ವೈದ್ಯಕೀಯ ವ್ಯವಸ್ಥೆ, ಮಾಧ್ಯಮ ವ್ಯವಸ್ಥೆ, ಪೊಲೀಸರೊಂದಿಗೆ ಕ್ಷೇತ್ರದ ಕೆಲಸ, ಐಟಿ ಬೆಂಬಲ, ವೆಬ್‌ಸೈಟ್‌ ವಿನ್ಯಾಸ ಮತ್ತು ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ಸಂಪರ್ಕ... ಹೀಗೆ ಯಾವ ವರ್ಗದಲ್ಲಿ ಸ್ವಯಂ ಸೇವಕರಾಗಲು ಇಚ್ಛಿಸುತ್ತೀರಾ ಎಂಬುದನ್ನು ಮತ್ತು ನೋಂದಣಿ ಮಾಡಿಕೊಳ್ಳುವವರ ಪೂರ್ಣ ವಿವರವನ್ನು ಪಡೆದು ಅವರ ಆಸಕ್ತಿ, ಬದ್ಧತೆಗನುಗುಣವಾಗಿ ‘ಕೊರೊನಾ ಸೈನಿಕ’ರಾಗಿ ಕೆಲಸ ಮಾಡಲು ಇಲಾಖೆ ಅವಕಾಶ ಕಲ್ಪಿಸಿದೆ.

ಕಣ್ಣಿಗೆ ಕಾಣುವ ಶತ್ರುವನ್ನು ಸೋಲಿಸುವುದು ಸುಲಭ. ಆದರೆ, ಕಣ್ಣಿಗೆ ಕಾಣದ ಕೊರೊನಾ ಎಂಬ ಶತ್ರವನ್ನು ಮಣಿಸಲು ನಾವು ಸಿದ್ಧರಾಗಿದ್ದೇವೆ. ದೇಶದ ಗಡಿ ರಕ್ಷಣೆಗೆ ನಿಂತ ಯೋಧರಂತೆ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಸೇವೆ ಮಾಡಬೇಕಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಬಡವರಿಗೆ, ಅಸಹಾಯಕರಿಗೆ ಇಲಾಖೆಯ ಸೌಲಭ್ಯ ತಲುಪಿಸುವುದು, ಆಹಾರ ಮತ್ತು ಔಷಧಗಳನ್ನು ಮನೆ–ಮನೆಗೆ ತಲುಪಿಸುವ ಕೆಲಸವನ್ನು ಮಾಡಲಿದ್ದೇವೆ’ ಎನ್ನುತ್ತಾರೆ ‘ಕೊರೊನಾ ಸೈನಿಕ’ರಾಗಿ ಆಯ್ಕೆಯಾಗಿರುವ ಮಾಜಿ ಸೈನಿಕ ಚಿತ್ರಶೇಖರ ಕೆಳಗಡೆ. 

‘ವೈರಾಣು ಹರಡುವಿಕೆ ಕುರಿತು ವಿವಿಧ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ ‘ಕೊರೊನಾ ಸೈನಿಕರು’ ಪರಾಮರ್ಶಿಸಿ, ನೈಜ ಮಾಹಿತಿ ಕೊಡಲಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ವಿದ್ಯಮಾನ ಗಮನಕ್ಕೆ ಬಂದಲ್ಲಿ ಸ್ಥಳಕ್ಕೆ ಹೋಗಿ ಸತ್ಯಾಸತ್ಯತೆಯನ್ನು ತಿಳಿಸಲಿದ್ದಾರೆ. ಜನರಲ್ಲಿ ಅನಗತ್ಯ ಆತಂಕ ಮೂಡುವುದನ್ನು ತಪ್ಪಿಸುವ ಕೆಲಸವನ್ನು ಮಾಡಲಿದ್ದಾರೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಾವೇರಿ ಜಿಲ್ಲೆಯ ಸಹಾಯಕ ನಿರ್ದೇಶಕ ಡಾ.ಬಿ.ಆರ್‌.ರಂಗನಾಥ್‌ ತಿಳಿಸಿದ್ದಾರೆ.

‘ಕೊರೊನಾ ಸೈನಿಕರು ಮಾಹಿತಿ ನೀಡಲು ಜಿಲ್ಲಾವಾರು ಟೆಲಿಗ್ರಾಂ ಗ್ರೂಪ್‌ ರಚನೆ ಮಾಡಲಾಗಿದೆ. ಇವರಿಗೆ ಗುರುತಿನ ಚೀಟಿ ಮತ್ತು ಸುರಕ್ಷತಾ ಕಿಟ್‌ಗಳನ್ನು ಇಲಾಖೆ ವತಿಯಿಂದ ನೀಡುತ್ತಿದ್ದೇವೆ. ಸ್ವಯಂ ಸ್ವಚ್ಛತೆಗೆ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ’ ಎಂದು ಡಾ.ರಂಗನಾಥ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು