ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಏಳು ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಜಾರಿ
Published 25 ಮೇ 2024, 5:37 IST
Last Updated 25 ಮೇ 2024, 5:37 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಹದಭರಿತ ಮುಂಗಾರುಪೂರ್ವ ಮಳೆಯಾಗಿದೆದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮುಂಗಾರು ಹಂಗಾಮಿಗೆ ಬಿತ್ತನೆ ಸಜ್ಜಾಗುತ್ತಿದ್ದಾರೆ. ರೈತರು ಎತ್ತು ಮತ್ತು ಟ್ರ್ಯಾಕ್ಟರ್‌ನಿಂದ ರಂಟೆ–ಕುಂಟಿ ಹೊಡೆದು ಬಿತ್ತನೆಗೆ ಭೂಮಿಯನ್ನು ಹಸನುಗೊಳಿಸುತ್ತಿದ್ದಾರೆ.

ಸತತ 2 -3 ವರ್ಷಗಳಿಂದ ಅತಿವೃಷ್ಟಿ, ಈ ವರ್ಷ ಬರಗಾಲದಿಂದ ತತ್ತರಿಸಿದ ರೈತರು ಆರ್ಥಿಕ ನಷ್ಟ ಅನುಭವಿಸಿದ್ದರು. ಕಳೆದ ವರ್ಷ ನಿರೀಕ್ಷಿತ ಮಳೆ ಬರದೇ ಬರಗಾಲದಿಂದ ನಷ್ಟ ಅನಿಭವಿಸಿದ್ದರು. ಈ ಬಾರಿ ಹದವರ್ತಿ ಮಳೆಯಾಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ಈ ಬಾರಿ ಉತ್ತಮ ಮಳೆ ಬೆಳೆ ಬರಬಹುದೆಂಬ ಭರವಸೆ ಮೂಡಿದೆ.

ಪ್ರಸಕ್ತ ವರ್ಷದ ಮುಂಗಾರಿಗೆ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದು, ಯಾವ ಬೀಜ ಬೆಳೆಯಬೇಕು. ಯಾವ ಹೊಲಕ್ಕೆ ಬೆಳೆ ಬಿತ್ತನೆ ಮಾಡಬೇಕು ಎಂದು ಕುಟುಂಬದರೊಂದಿಗೆ ಚರ್ಚೆ ನಡೆಸಿದ್ದಾರೆ. ಯಾವ ಬೆಳೆಗೆ ತೇಜಿ ಮಂದಿ ಆಗಬಹುದು. ಎಷ್ಟು ಇಳುವರಿ ತೆಗೆಯಬಹುದು ಎಂದು ತಮ್ಮೊಳಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮುಂಗಾರ ಹಂಗಾಮು ಆರಂಭವಾಗುತ್ತಿದ್ದಂತೆ ರಸಗೊಬ್ಬರ ಹಾಗೂ ಪರಿಕರಗಳ ಮಾರಾಟಗಾರರರು ಈ ವರ್ಷಕ್ಕೆ ಬೇಕಾಗುವಷ್ಟು ಬಿತ್ತನೆ ಬೀಜ, ರಸ ಗೊಬ್ಬರ ತರಿಸಿಕೊಂಡು ರೈತರ ಆಗಮನಕ್ಕೆ ಕಾಯುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ರೈತರು ಈಗಾಗಲೇ ಬಿತ್ತನೆಗೆ ಬಿತ್ತನೆ ಬೀಜ, ರಸ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.

ಮಳೆಯಾಶ್ರಿತ ಭೂ ಪ್ರದೇಶ ಹೊಂದಿರುವ ರೈತರ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗಿದೆ. ಮುಂಗಾರಿನ ಪ್ರಮುಖ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ, ಭತ್ತ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್‌, ಹತ್ತಿ, ಸೂರ್ಯಕಾಂತಿ, ಎಳ್ಳು ಸೇರಿದಂತೆ ವಿವಿಧ ಬೆಳೆಗಳನ್ನು ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ.

ಸೋಯಾಬೀನ್, ಶೇಂಗಾ ಬೀಜಗಳ ಮೇಲ್ಪದರು ಸೂಕ್ಷ್ಮವಾಗಿರುವುರಿಂದ ಟ್ರಾಕ್ಟರ್ ಬಿತ್ತನೆ, ಆಳವಾದ ಬಿತ್ತನೆ, ಹೆಚ್ಚಾಗಿ ಉಷ್ಣಾಂಶ ಹಾಗೂ ಒಣಹವೆ ಇದ್ದಲ್ಲಿ ಬಿತ್ತನೆಗೆ ಸೂಕ್ತವಾಗಿರುವುದಿಲ್ಲ. ರೈತರು ಬೀಜಗಳನ್ನು ಬಿತ್ತುವಾಗ ಟ್ರೈಕೋಡಮ್ರಾ, ಅಜಟೋಬ್ಯಾಕ್ಟೋ, ಅಜೋಸ್ಪರಲಂ, ವ್ಯಾಮ್, ಜೈನೆಬ್, ಮೋನೆಬ್ ೪ಗ್ರಾಂ ಪ್ರತಿ ಕೆ.ಜಿ ಬೀಜಕ್ಕೆ ಲೆಪಿಸಿ(ಉಪಚರಿಸಿ) ಬಿತ್ತನೆ ಮಾಡುವುದರಿಂದ ಬೀಜ ಮೊಳಕೆ ಮತ್ತು ಬೆಳೆಯ ಬೆಳವಣಿಗೆ ಹಂತದಲ್ಲಿ ಬರುವಂತಹ ರೋಗ, ಕೀಟಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ.

ಈಗಾಗಲೇ 350 ಕ್ವಿಂಟಲ್ ಭತ್ತ, 1500 ಕ್ವಿಂಟಲ್ ಗೋವಿನಜೋಳ, 90 ಕ್ವಿಂಟಲ್ ಶೇಂಗಾ, 180 ಕ್ವಿಂಟಲ್ ತೊಗರಿ, 430 ಕ್ವಿಂಟಲ್ ಸೋಯಾಅವರೆ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಿದ್ದು ಇದೆ.
ರೈತರ ಬೇಡಿಕೆಗೆ ತಕ್ಕಂತೆ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ರಾಣೆಬೆನ್ನೂರು, ಮೇಡ್ಲೇರಿ ಮತ್ತು ಕುಪ್ಪೇಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಾದ ಸುಣಕಲ್ಲಬಿದರಿ, ಹರನಗಿರಿ ಹಾಗೂ ಹೆಚ್ಚುವರಿ ಕೇಂದ್ರಗಳಾದ ಚಳಗೇರಿ ಮತ್ತು ಹಲಗೇರಿ ಗ್ರಾಮಗಳನ್ನೊಳಗೊಂಡಂತೆ ಒಟ್ಟು 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.

ಹೊಸ ಕ್ಯೂ.ಆರ್ ಕೋಡ್ ವ್ಯವಸ್ಥೆಯಿಂದ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ರೈತ ಭಾಂದವರು ಸಹಕರಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ಜಿ.ಶಾಂತಮಣಿ ಮನವಿ ಮಾಡಿದ್ದಾರೆ.

ರೈತರು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜ ಖರೀದಿಸಬೇಕು. ಖುಲ್ಲಾ ಮೆಕ್ಕೆಜೋಳದ ಬೀಜಗಳನ್ನು ಖರೀದಿಸಿ ಮೋಸಹೋಗಬಾರದು. ಮಾರಾಟಗಾರರು ಲಾಟ್‌ ನಂಬರ್‌, ಕಡ್ಡಾಯವಾಗಿ ರಶೀದಿ ಪಡೆಯಬೇಕು. ಬಿತ್ತನೆ ಬೀಜ ಉತ್ಪಾದಕರು ಮತ್ತು ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಬಿತ್ತನೆಗೆ ಮುಂಚೆ ಬೀಜ ಮೊಳಕೆಯೊಡೆಯುವ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಮನವಿ ಮಾಡಿದರು.

ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಹೊಲದಲ್ಲಿ ರೈತನೊಬ್ಬರ ರಂಟಿ ಹೊಡೆಯುತ್ತಿರುವುದು. 
ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದ ಹೊಲದಲ್ಲಿ ರೈತನೊಬ್ಬರ ರಂಟಿ ಹೊಡೆಯುತ್ತಿರುವುದು. 

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ರಾಣೆಬೆನ್ನೂರು ಮೇಡ್ಲೇರಿ ಸೇರಿದಂತೆ ಒಟ್ಟು 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ

-ಜಿ.ಶಾಂತಮಣಿ ಸಹಾಯಕ ಕೃಷಿ ನಿರ್ದೇಶಕಿ ರಾಣೆಬೆನ್ನೂರು

ಬ್ಯಾಂಕಿನಲ್ಲಿ ಸಾಲ ಮಾಡಿ ಟ್ರ್ಯಾಕ್ಟರ್‌ ಎತ್ತುಗಳನ್ನು ತರಲು ಆಗಲ್ಲ. ಹಾಗಾಗಿ ಆಕಳು ಮತ್ತು ಕೋಣದ ಜೊತೆ ಮಾಡಿ ಕೃಷಿ ಮಾಡುತ್ತಿದ್ದೇನೆ

-ಕೊಟ್ರೇಶ ಕಾಳಿಂಗಪ್ಪ ಮುಂಡಾಸದ ಮೇಡ್ಲೇರಿ

ಮುಂಗಾರು ಹಂಗಾಮು ಬಿತ್ತನೆ ಗುರಿ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೇ-ತಿಂಗಳ ವರೆಗೆ 135 ಮಿ.ಮೀ ವಾಡಿಕೆ ಮಳೆ ಇದ್ದು ಇಲ್ಲಿಯವರೆಗೆ 151.40 ಮಿಮೀ ಮಳೆ ಆಗಿರುತ್ತದೆ. ರೈತರು ಭೂಮಿ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು ಹವಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ತಿಂಗಳ ಮೊದಲನೆ ವಾರ ವಾಡಿಕೆಯಂತೆ ಮುಂಗಾರು ಆರಂಭವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ 7780 ಹೆಕ್ಟೇರ್‌ ಭತ್ತ 42900 ಹೆಕ್ಟೇರ್‌ ಗೋವಿನಜೋಳ 615 ಹೆಕ್ಟೇರ್‌ ತೊಗರಿ 1350 ಹೆಕ್ಟೇರ್‌ ಶೇಂಗಾ 575 ಹೆಕ್ಟೇರ್‌ ಹತ್ತಿ 570 ಹೆಕ್ಟೇರ್‌ ಸೋಯಾಬಿನ್ 150 ಹೆಕ್ಟೇರ್‌ ಹೆಸರು ಮತ್ತು 1206 ಹೆಕ್ಟೇರ್‌ ಇತರೆ ಬೆಳೆಗಳು ಸೇರಿದಂತೆ ಒಟ್ಟಾರೆ 54901 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT