ಶುಕ್ರವಾರ, ಜುಲೈ 30, 2021
28 °C
ಕೆರೆಮತ್ತಿಹಳ್ಳಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಹಾವೇರಿ: 65 ಅಪರಾಧ ಪ್ರಕರಣ ಭೇದಿಸಿದ್ದ ಜಾನಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ನಡೆದ ಕೊಲೆ, ದರೋಡೆ, ಕಳ್ಳತನ ಸೇರಿದಂತೆ ವಿವಿಧ ರೀತಿಯ 65 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೆಗ್ಗಳಿಕೆಯನ್ನು ‘ಜಾನಿ’ ಗಳಿಸಿದ್ದಾನೆ. 

ಒಂಬತ್ತರ ಹರೆಯದ ಈ ಶ್ವಾನ ಸದಾ ಚುರುಕುತನದಿಂದ ಕೂಡಿದ್ದ. ‘ಜಾನಿ’ ಹೆಸರು ಕೇಳಿದರೆ ಅಪರಾಧಿಗಳಿಗೆ ನಡುಕ ಹುಟ್ಟುತ್ತಿತ್ತು. ಏಕೆಂದರೆ ಅಪರಾಧ ಘಟನೆ ನಡೆದ ಸ್ಥಳದಲ್ಲಿ ಸಿಗುವ ಸಣ್ಣ ಕುರುಹು ಮತ್ತು ವಾಸನೆಯನ್ನು ಗ್ರಹಿಸಿ ಆರೋಪಿಗಳ ಹೆಜ್ಜೆ ಜಾಡನ್ನು ಪತ್ತೆ ಹಚ್ಚುತ್ತಿದ್ದ. ಆರೋಪಿ ಯಾವ ದಿಕ್ಕಿಗೆ ಹೋಗಿದ್ದಾನೆ ಎಂಬ ಸ್ಪಷ್ಟ ಸೂಚನೆ ಕೊಡುತ್ತಿದ್ದ. ಇದರಿಂದ ಆರೋಪಿಗಳನ್ನು ಪತ್ತೆ ಹೆಚ್ಚುವ ಪೊಲೀಸರ ಕಾರ್ಯ ಸುಗಮವಾಗುತ್ತಿತ್ತು. 

2012ರ ಸೆಪ್ಟೆಂಬರ್‌ 10ರಲ್ಲಿ ಜನ್ಮತಳೆದಿದ್ದ ಜಾನಿ, ಬೆಂಗಳೂರಿನ ಆಡುಗೋಡಿ ದಕ್ಷಿಣ ಸಿಎಆರ್‌ ಮೈದಾನದಲ್ಲಿ 6 ತಿಂಗಳು ‘ವಿಧೇಯತೆ ತರಬೇತಿ’ ಮತ್ತು 6 ತಿಂಗಳು ‘ವಾಸನೆ ಗ್ರಹಿಕೆ ತರಬೇತಿ’ ಸೇರಿದಂತೆ ಒಟ್ಟು ಒಂದು ವರ್ಷ ‘ಸ್ಪೆಷಲ್‌ ಟ್ರೈನಿಂಗ್‌’ ಪಡೆದಿದ್ದ. ನಂತರ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಸೇರಿ ‘ಆನೆಬಲ’ ತಂದಿದ್ದ. ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದ ಜಾಕ್‌ವೆಲ್‌ ಹತ್ತಿರ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದ. 

ವೈದ್ಯ ಲೋಕಕ್ಕೆ ಅಚ್ಚರಿ!

2016ರಲ್ಲಿ ಅನಾರೋಗ್ಯಕ್ಕೆ ತುತ್ತಾದ ಜಾನಿಯನ್ನು ಬೆಂಗಳೂರಿನ ಹೆಬ್ಬಾಳ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದ ಜಾನಿಗೆ ಶಸ್ತ್ರಚಿಕಿತ್ಸೆ ಮಾಡಿದರೂ, ಗುಣಮುಖವಾಗುವ ಅವಕಾಶ ಕಡಿಮೆ. ಹೆಚ್ಚೆಂದರೆ 3 ತಿಂಗಳು ಬದುಕಿರುತ್ತಾನೆ. ಕರೆದೊಯ್ದು ಚೆನ್ನಾಗಿ ನೋಡಿಕೊಳ್ಳಿ ಎಂದು ವೈದ್ಯರು ಕೈಚೆಲ್ಲಿದ್ದರು. ಆದರೆ, ಬರೋಬ್ಬರಿ ನಾಲ್ಕು ವರ್ಷ ಬದುಕಿದ ಜಾನಿ, ವೈದ್ಯ ಲೋಕಕ್ಕೆ ಅಚ್ಚರಿಯಾಗಿದ್ದ’ ಎಂದು ‘ಕನಕ’ ಶ್ವಾನ ತರಬೇತುದಾರ ಶ್ರೀಕಾಂತ ಕಬ್ಬೂರ.

ನಿತ್ಯವೂ ವಿಶೇಷ ಗಂಜಿ

ಬೆಳಿಗ್ಗೆ ಒಂದು ಲೀಟರ್‌ ಹಾಲು, 200 ಗ್ರಾಂ ಗಂಜಿ (ರೆವೆ, ಶ್ಯಾವಿಗೆ, ರಾಗಿ, ಸಬ್ಬಕ್ಕಿ), ಬೇಯಿಸಿದ ಮೊಟ್ಟೆ, 200 ಗ್ರಾಂ ಪೆಡಿಗ್ರಿ ಹಾಗೂ 2 ರೀತಿಯ ಶಕ್ತಿವರ್ಧಕ ಟಾನಿಕ್‌ಗಳನ್ನು ಹಾಕುತ್ತಿದ್ದೆವು. ಸಂಜೆ 5.30ಕ್ಕೆ ಅನ್ನ, ಮಟನ್‌, ತರಕಾರಿ, ನೆನೆಸಿದ ಕಾಳನ್ನು ಮಿಶ್ರಣ ಮಾಡಿ ‘ಬಿರಿಯಾನಿ’ ರೂಪದ ಆಹಾರ ಕೊಡುತ್ತಿದ್ದೆವು. ಕಾಯಿಲೆ ಇದ್ದರೂ ಒಂದು ದಿನ ಊಟ ಬಿಟ್ಟಿರಲಿಲ್ಲ. ಹೇಳಿದಂತೆ ಕೇಳುತ್ತಾ ಸದಾ ವಿಧೇಯನಾಗಿದ್ದ ಎಂದು ಶ್ವಾನದಳದ ಮುಖ್ಯ ಮೇಲ್ವಿಚಾರಕ ಎಂ.ಎಲ್‌. ದೊಡ್ಡಮನಿ ನೆನಪುಗಳನ್ನು ಹಂಚಿಕೊಂಡರು. 

‘6 ತಿಂಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಹಾವೇರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ನಿತ್ಯ ಔಷಧ ಕೊಡುತ್ತಿದ್ದೆವು. 5ರಿಂದ 10 ನಿಮಿಷ ಮೂರ್ಛೆ ರೋಗದಿಂದ ಬಳಲಿ, ಮತ್ತೆ ಯಥಾಸ್ಥಿತಿಯಾಗಿ ಚಟುವಟಿಕೆಯಾಗಿರುತ್ತಿದ್ದ. ನಿನ್ನೆ ಶುಕ್ರವಾರ ಸಂಜೆ 7 ಗಂಟೆ ಸಮಯದಲ್ಲಿ ನಮ್ಮೆನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋದ’ ಎಂದು ದೊಡ್ಡಮನಿ ಕಣ್ಣೀರು ಹಾಕಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು