ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ನಾಗರಪಂಚಮಿಗೆ ಸಿದ್ಧತೆ ಆರಂಭ: ರೊಟ್ಟಿ ಪಂಚಮಿ ಆಚರಣೆ

ರೊಟ್ಟಿ ಪಂಚಮಿ ಆಚರಿಸಿದ ಜನ | ಗ್ರಾಮೀಣ ಕ್ರೀಡೆಯ ರಂಗು
Published : 7 ಆಗಸ್ಟ್ 2024, 14:19 IST
Last Updated : 7 ಆಗಸ್ಟ್ 2024, 14:19 IST
ಫಾಲೋ ಮಾಡಿ
Comments

ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧರಾಗಿದ್ದು, ಬುಧವಾರ ರೊಟ್ಟಿ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಹಬ್ಬದ ಮುನ್ನಾದಿನಗಳಾದ ಮಂಗಳವಾರ ಹಾಗೂ ಬುಧವಾರ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಹಬ್ಬದ ಆಚರಣೆಗೆ ಬೇಕಿದ್ದ ಅಗತ್ಯ ವಸ್ತುಗಳು ಹಾಗೂ ನಾಗಪ್ಪನ ಮೂರ್ತಿಗಳನ್ನು ಜನರು ಖರೀದಿಸಿದರು. ಗುರುವಾರದಿಂದ ಭಾನುವಾರದವರೆಗೆ ಹಬ್ಬದ ಆಚರಣೆ ಮುಂದುವರಿಯಲಿದೆ.

ಮೊದಲ ದಿನವಾದ ಗುರುವಾರ, ಮನೆಯಲ್ಲಿ ನಾಗಪ್ಪನ ಮೂರ್ತಿಗೆ ಹಾಲೆರೆಯುವ ಸಂಪ್ರದಾಯವಿದೆ. ಎರಡನೇ ದಿನವಾದ ಶುಕ್ರವಾರ, ಹೊಳೆ ಗಂಗಮ್ಮನ ಪೂಜೆ ಇದೆ. ಜನರು, ಹೊಂಡ–ಹೊಳೆ–ಕೆರೆ ಹಾಗೂ ಇತರ ನೀರಿನ ಮೂಲಗಳ ಬಳಿ ಅಥವಾ ಹುತ್ತದ ಬಳಿ ಹೋಗಿ ಹಾಲೆರೆಯುವ ಪದ್ಧತಿ ಇದೆ.

ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ಸಜ್ಜಾಗಿರುವ ಮಹಿಳೆಯರು ಕುಟುಂಬ ಸಮೇತರಾಗಿ ಬುಧವಾರ ಮಾರುಕಟ್ಟೆಗೆ ಹೋಗಿ ಹೊಸ ಬಟ್ಟೆಗಳನ್ನು ಖರೀದಿಸಿದರು. ಹಬ್ಬದ ವಿಶೇಷತೆಯಾದ ಉಂಡಿಗಳನ್ನು ತಯಾರಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡುಕೊಂಡರು. ಹಾಲೆರೆಯಲು ಅಗತ್ಯವಿರುವ ನಾಗರ ಮೂರ್ತಿಗಳನ್ನು ಖರೀದಿಸಿದರು.

ಶುಕ್ರವಾರ ಶುಕ್ರಗೌರಿ ಪೂಜೆಗೂ ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದಕ್ಕೂ ಅಗತ್ಯ ವಸ್ತುಗಳನ್ನು ಖರೀದಿಸಿದರು.

‘ಭಾನುವಾರ ನಾಗರ ಅಮಾವಸ್ಯೆ, ಸೋಮವಾರ ಶ್ರಾವಣ ಆರಂಭದ ಜೊತೆಗೆ ಮಂಗಳಗೌರಿ ವೃತ ಆರಂಭವಾಗಿದೆ. ಬುಧವಾರ ರೊಟ್ಟಿ ಪಂಚಮಿ, ಗುರುವಾರ ನಾಗಚತುರ್ಥಿ, ಹಾಲು ಎರೆಯುವ ಹಬ್ಬ, ನಾಗ ಪಂಚಮಿ ಹುತ್ತ ಮುರಿಯುವ ಹಬ್ಬ, ಬೆಚ್ಚಿಡುವ (ಕೆರೆಂಬ್ಲಿ) ಹಬ್ಬ ಮತ್ತು ಭಾನುವಾರ ವರ್ಷ ತೊಡಕು ಹಬ್ಬದ ಆಚರಣೆಗಳು ನಿರಂತರವಾಗಿ ನಡೆಯಲಿವೆ’ ಎಂದು ಕರ್ಜಗಿ ನಿವಾಸಿ ಗೌರಮ್ಮ ಹೇಳಿದರು.

ತರಹೇವಾರಿ ಉಂಡಿಗಳು: ನಾಗರ ಪಂಚಮಿಯ ವಿಶೇಷ ಖಾದ್ಯ ಉಂಡಿ. ಜನರು ಪಂಚಮಿ ಹಬ್ಬದ ಉಂಡಿ ಕಟ್ಟಲು ಅಗತ್ಯವಿರುವ ವಸ್ತುಗಳನ್ನು ಬುಧವಾರ ಮಾರುಕಟ್ಟೆಗಳಲ್ಲಿ ಖರೀದಿಸಿದರು.

ಶೇಂಗಾ, ರವೆ, ಬೂಂದಿಕಾಳು, ಒಣ ಕೊಬ್ಬರಿ, ಎಳ್ಳು, ಪುಟಾಣಿ, ಕಡಲೆಹಿಟ್ಟಿನ ಉಂಡಿಗಳು ಹಬ್ಬದ ಸಿಹಿ ಪದಾರ್ಥಗಳು.

ಗ್ರಾಮೀಣ ಕ್ರೀಡೆಗಳ ರಂಗು: ನಾಗರ ಪಂಚಮಿ ಮಹಿಳೆಯರ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ. ಇದೇ ಸಂದರ್ಭದಲ್ಲಿ ಪುರುಷರು,  ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.

ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಹಬ್ಬದ ಆಚರಣೆ ಜೋರಾಗಿರಲಿದೆ. ನಿಂಬೆ ಹಣ್ಣು ಎಸೆಯುವುದು, ಅರ್ಧ ಜೋಕಾಲಿ, ಭಾರ ಎತ್ತುವುದು ಹಾಗೂ ಇತರ ಗ್ರಾಮೀಣ ಕ್ರೀಡೆಗಳಲ್ಲಿ ಜನರು ಭಾಗವಹಿಸಲಿದ್ದಾರೆ.

ಜೊತೆಗೆ, ಹಬ್ಬದಂದು ಹಲವು ಕಡೆಗಳಲ್ಲಿ ಜೋಕಾಲಿ ಕಟ್ಟುವ ಪದ್ಧತಿ ಇದೆ. ಹಬ್ಬಕ್ಕೂ ಮುನ್ನವೇ ಹಲವರು ಮನೆಗಳಲ್ಲಿ ಹಾಗೂ ಮರಗಳಲ್ಲಿ ಜೋಕಾಲಿಗಳನ್ನು ಕಟ್ಟಿರುವ ದೃಶ್ಯ ಕಾಣಸಿಗುತ್ತಿವೆ.

ಮಕ್ಕಳಿಗೆ ಹಾಲು ವಿತರಣೆ ಇಂದು ‘ನಾಗರಪಂಚಮಿ ಹಬ್ಬದಂದು ಮನೆಯಲ್ಲಿ ನಾಗರ ಮೂರ್ತಿ ಹಾಗೂ ಹೊರಗಡೆ ಹುತ್ತಕ್ಕೆ ಹಾಲೆರೆಯುವ ಪದ್ಧತಿ ಇದೆ. ಇದರಿಂದ ಹಾಲು ಸುಖಾಸುಮ್ಮನೇ ವ್ಯರ್ಥವಾಗುತ್ತಿದೆ. ಇದೇ ಹಾಲನ್ನು ಮಕ್ಕಳಿಗೆ ನೀಡಲು ನಾಗೇಂದ್ರನಮಟ್ಟಿಯ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಸವ ಬಳಗದ ಅಧ್ಯಕ್ಷ ಚನ್ನಬಸವಣ್ಣ ರೊಡ್ಡನವರ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT