ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ₹1.17 ಕೋಟಿ ಅಕ್ರಮ ಆಸ್ತಿ: ಆರ್‌ಎಫ್‌ಒ ಅಮಾನತು

Published 3 ಸೆಪ್ಟೆಂಬರ್ 2024, 15:25 IST
Last Updated 3 ಸೆಪ್ಟೆಂಬರ್ 2024, 15:25 IST
ಅಕ್ಷರ ಗಾತ್ರ

ಹಾವೇರಿ: ‘ಹಾವೇರಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಮಹಾಂತೇಶ ನ್ಯಾಮತಿ ಅವರು ₹1.17 ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದು, ಇದನ್ನು ಆಧರಿಸಿ ಮಹಾಂತೇಶ ಅವರನ್ನು ಸೇವೆಯಿಂದ ಅಮಾನತು ಮಾಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪದಡಿ ಮಹಾಂತೇಶ ನ್ಯಾಮತಿ ವಿರುದ್ಧ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2023ರ ಅಕ್ಟೋಬರ್ 26ರಂದು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಮಹಾಂತೇಶ ಅವರ ಮನೆ ಮೇಲೆ ದಾಳಿ ಮಾಡಿದ್ದರು.

ಹಲವು ವಸ್ತುಗಳನ್ನು ಹಾಗೂ ಆಸ್ತಿ ಪತ್ರಗಳನ್ನು ಜಪ್ತಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರಿಸಿದ್ದರು. ಇತ್ತೀಚೆಗೆ ತನಿಖೆಗೆ ಸಂಬಂಧಪಟ್ಟ ಮಾಹಿತಿಯುಳ್ಳ ವರದಿಯನ್ನು ಶಿಸ್ತು ಪ್ರಾಧಿಕಾರ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿದ್ದರು.

‘ಮಹಾಂತೇಶ ನ್ಯಾಮತಿ ಬಳಿ ಒಟ್ಟು ₹1.57 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಅಸಮತೋಲನ ಆಸ್ತಿಯ ಮೌಲ್ಯ ₹1.17 ಕೋಟಿಯಾಗಿದ್ದು, ಇದು ಅಕ್ರಮ ಆಸ್ತಿಯೆಂಬುದು ಗೊತ್ತಾಗಿದೆ. ಶೇ 149.56ರಷ್ಟು ಹೆಚ್ಚುವರಿ ಆಸ್ತಿಯನ್ನು ಮಹಾಂತೇಶ ಹೊಂದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದರು.

‘ಅಧಿಕಾರಿ ಮಹಾಂತೇಶ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಸಿದ್ದಲ್ಲಿ, ಪ್ರಕರಣದ ಸುಗಮ ತನಿಖೆಗೆ ಅಡ್ಡಿ ಉಂಟಾಗಲಿದೆ. ತನಿಖೆಯಲ್ಲಿ ಹಸ್ತಕ್ಷೇಪ ಹಾಗೂ ಪುರಾವೆಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು’ ಎಂದೂ ವರದಿಯಲ್ಲಿ ಕೋರಿದ್ದರು.

ವರದಿ ಪರಿಶೀಲಿಸಿದ ಶಿಸ್ತು ಪ್ರಾಧಿಕಾರ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ‘ವಲಯ ಅರಣ್ಯಾಧಿಕಾರಿ ಮಹಾಂತೇಶ ಸದಾನಂದ ನ್ಯಾಮತಿ ಅವರನ್ನು ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಇವರು ತಮ್ಮ ಕೇಂದ್ರ ಸ್ಥಾನವನ್ನು ಸಕ್ಷಮ ಪ್ರಾಧಿಕಾರಿಗಳ ಲಿಖಿತ ಪೂರ್ವಾನುಮತಿ ಇಲ್ಲದೆ ಬಿಡಬಾರದು’ ಎಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT