ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ: ಪೂರ್ಣಗೊಳ್ಳದ ಮೇಲ್ಸೇತುವೆ ಕಾಮಗಾರಿ, ತಪ್ಪದ ಕಿರಿಕಿರಿ

ಸಮಸ್ಯೆಗಳ ಆಗರವಾದ ರಾಷ್ಟ್ರೀಯ ಹೆದ್ದಾರಿ: ಅಪಘಾತ ವಲಯವಾದ ಮೋಟೆಬೆನ್ನೂರು, ಛತ್ರ
Published 18 ಜೂನ್ 2023, 0:06 IST
Last Updated 18 ಜೂನ್ 2023, 0:06 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಮತ್ತು ಛತ್ರ ಗ್ರಾಮಗಳ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಮೇಲ್ಸೇತುವೆ ಕಾಮಗಾರಿಗಳು ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಸಂಚಾರಕ್ಕೆ ತೊಡಕಾಗಿದೆ.  

ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ರಾಷ್ಟ್ರೀಯ ಹೆದ್ದಾರಿಗಳ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನಂತರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸುವ ವೇಳೆಗೆ ಹೆಚ್ಚುವರಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಜನರಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆಗೆ ಗುತ್ತಿಗೆ ಪಡೆದಿದ್ದ ಏಜೆನ್ಸಿಯ ಅವಧಿ ಮುಗಿದು ಹೋಗಿತ್ತು. ಈಗ ಮತ್ತೆ ಅದೇ ಏಜೆನ್ಸಿಯನ್ನೇ ಮುಂದುವರಿಸಿದ್ದು, ಸರ್ವಿಸ್‌ ರಸ್ತೆಗಳಿಗೆ ಅಲ್ಲಲ್ಲಿ ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ಮೇಲ್ಸೇತುವೆ ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಎಂದು ರೈತರು ದೂರಿದರು. 

ಈಗಾಗಲೇ ಕಾಮಗಾರಿ ಸ್ಥಗಿತಗೊಂಡು 3 ವರ್ಷ ಕಳೆದಿವೆ. ಮೇಲ್ಸೇತುವೆ ನಿರ್ಮಾಣಕ್ಕೆ ರೈತರು ಪ್ರತಿಭಟನೆ ನಡೆಸಿದ್ದ ಸಂದರ್ಭ 3 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂಬ ಭರವಸೆ ಅಧಿಕಾರಿಗಳಿಂದ ಸಿಕ್ಕಿತ್ತು. ಭರವಸೆ ಕೊಟ್ಟು 6 ತಿಂಗಳು ಕಳೆದರೂ ಕಾಮಗಾರಿಯೇ ಆರಂಭವಾಗಿಲ್ಲ ಎಂದು ರೈತ ಮುಖಂಡರು ದೂರುತ್ತಾರೆ. 

ಮೇಲ್ಸೇತುವೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ವಾಹನಗಳು, ಅತಿ ವೇಗದಲ್ಲಿ ಸರ್ವಿಸ್‌ ರಸ್ತೆಗೆ ಇಳಿದು ಚಲಿಸುವುದರಿಂದ ರಸ್ತೆ ದಾಟಲು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. 

ಹೆಚ್ಚಿನ ವಾಹನಗಳ ಸಂಚಾರದಿಂದ ಸರ್ವಿಸ್‌ ರಸ್ತೆ ಕೂಡ ಅಧ್ವಾನಗೊಂಡಿದ್ದು, ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಛತ್ರ ಮತ್ತು ಮೋಟೆಬೆನ್ನೂರ ಮಧ್ಯದಲ್ಲಿ ಮಾತ್ರ ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಮಾರ್ಗವಾಗಿ ಪರಿವರ್ತಿಸುವಾಗ ಒಂದೇ ಅಂಡರ್ ಪಾಸ್ ನಿರ್ಮಿಸಲಾಗಿತ್ತು. ನಂತರ ಮತ್ತೊಂದು ಅಂಡರ್‌ಪಾಸ್‌ ನಿರ್ಮಿಸಲಾಗಿದೆ. 

ರಸ್ತೆ ದಾಟುವುದಕ್ಕೆ ಹರಸಾಹಸ: ರಸ್ತೆ ಕಿರಿದಾಗಿರುವುದರಿಂದ ಸರ್ವಿಸ್ ರಸ್ತೆಯ ಮೂಲಕ ಹಾವೇರಿಯಿಂದ ಬ್ಯಾಡಗಿ ಕಡೆಗೆ ಬರುವ ವಾಹನಗಳು ಸರಾಗವಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಮೆಣಸಿನಕಾಯಿ ಹೇರಿಕೊಂಡು ಬ್ಯಾಡಗಿ ಪ್ರವೇಶಿಸುವ ವಾಹನಗಳು ಹೆದ್ದಾರಿಯಲ್ಲಿ ಅಡ್ಡಡ್ಡ ನಿಂತು ಗಂಟೆಗಟ್ಟಲೆ ಸಂಚಾರ ದಟ್ಟಣೆ ಆಗುತ್ತಿದೆ. ಕಿರಿದಾದ ಅಂಡರ್‌ಪಾಸ್‌ನೊಳಗಿಂದ ಬರುವ ವಾಹನಗಳಿಗೆ ಸರ್ವಿಸ್‌ ರಸ್ತೆಯಲ್ಲಿ ಚಲಿಸುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸಿವೆ.  

ಹೆದ್ದಾರಿ ನಿರ್ಮಾಣ ಮಾಡುವಾಗ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಕೆಲವೆಡೆ ಪಾಲಿಸಿದ್ದರೂ ಅದು ಕಾಟಾಚಾರಕ್ಕೆಂಬಂತಿದೆ. ಹೆದ್ದಾರಿ ಬದಿಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿದ್ದು, ಅವುಗಳಿಗೆ ಕೆಲವೆಡೆ ತಡೆಗೋಡೆಯೇ ಇಲ್ಲ. ಇನ್ನು ಕೆಲವೆಡೆ ತಗಡಿನ ಶೀಟು ಇಡಲಾಗಿದೆ. ಚಾಲಕರ ನಿಯಂತ್ರಣ ತಪ್ಪಿದರೆ ವಾಹನಗಳು ಸೀದಾ ಗುಂಡಿಯೊಳಕ್ಕೆ ಬಂದು ಬೀಳುವ ಅಪಾಯವಿದೆ. 

ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕಿರಿದಾದ ಸರ್ವಿಸ್‌ ರಸ್ತೆಯಲ್ಲಿ ಕಂಡು ಬಂದ ವಾಹನಗಳ ಸಂಚಾರ ದಟ್ಟಣೆ  
ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕಿರಿದಾದ ಸರ್ವಿಸ್‌ ರಸ್ತೆಯಲ್ಲಿ ಕಂಡು ಬಂದ ವಾಹನಗಳ ಸಂಚಾರ ದಟ್ಟಣೆ  
ರಸ್ತೆ ವಿಸ್ತರಣೆಗಾಗಿ ಪ್ರಯಾಣಿಕರ ತಂಗುದಾಣಗಳನ್ನು ಕೆಡವಿ ಹಾಕಲಾಗಿದೆ. ಇದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ಬಿಸಿಲು ಮಳೆಯಲ್ಲೇ ರಸ್ತೆಬದಿ ನಿಲ್ಲಬೇಕಾಗಿದೆ.
–ನಿಂಗಪ್ಪ ಅಂಗಡಿ ಮೋಟೆಬೆನ್ನೂರು ಗ್ರಾಮಸ್ಥ
ಶಾಲೆ ಮಕ್ಕಳು ಬಿಸ್ಲಾಗ ನಿಲ್ತಾವೆ. ಹಗಲೇ ವಾಹನವನ್ನು ಹಾರಿಸಿಕೊಂಡು ಹೋಗ್ತಾರೆ. ರಾತ್ರಿ ಕೇಳೋರು ಯಾರ್ರಿ. ಜೀವ ಕೈಯಲ್ಲಿ ಇಟ್ಕೊಂಡು ರಸ್ತೆ ದಾಟಬೇಕ್ರಿ
– ಶಿವಪುತ್ರಪ್ಪ ಅಗಡಿ ಮೋಟೆಬೆನ್ನೂರು ಗ್ರಾಮಸ್ಥ

‘ಪ್ರಯಾಣಿಕರಿಗೆ ನೆರಳಿನ ಆಸರೆಯಿಲ್ಲ’

ಮೋಟೆಬೆನ್ನೂರಿನಿಂದ ರಾಣೆಬೆನ್ನೂರು ದಾವಣಗೆರೆ ಕಡೆಗೆ ಹೋಗುವ ಪ್ರಯಾಣಿಕರು ಬಿಸಿಲಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಪ್ರಯಾಣಿಕರ ತಂಗುದಾಣವನ್ನು ತೆರವುಗೊಳಿಸಿರುವುದರಿಂದ ಬಿಸಿಲು ಮಳೆಯಲ್ಲೇ ನಿಲ್ಲಬೇಕಿದೆ. ರಸ್ತೆಬದಿ ನಿಲ್ಲುವುದಿರಂದ ವೇಗವಾಗಿ ಚಲಿಸುವ ವಾಹನಗಳು ಕೆಲವೊಮ್ಮೆ ಜನರ ಕಡೆ ಬಂದು ಅವಘಢ ಅಪಘಾತಗಳೂ ಆಗಿವೆ.  ಇಲ್ಲಿಯ ನಿವಾಸಿಗಳು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಹಲವಾರು ಬಾರಿ ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೋಟೆಬೆನ್ನೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗಬ್ಬು ನಾರುತ್ತಿರುವ ಗಟಾರದ ನೀರು

‘ಹೆದ್ದಾರಿ ಪ್ರಾಧಿಕಾರ ಗ್ರಾಮದ ಚರಂಡಿ ನೀರು ಹೆದ್ದಾರಿ ಆಚೆ ಹರಿದು ಹೋಗುವಂತೆ ವೈಜ್ಞಾನಿಕ ರೀತಿಯಲ್ಲಿ ಪೈಪ್‌ಗಳನ್ನು ಅಳವಡಿಸಿಲ್ಲ. ಹೀಗಾಗಿ ಮಳೆಯಾದರೆ ನೀರು ಹರಿಯದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ರಸ್ತೆಯ ಎರಡೂ ಬದಿಗೂ ಗಬ್ಬೆದ್ದು ನಾರುವ ಚರಂಡಿಗಳು ಬಸ್‌ಗಾಗಿ ಕಾದು ನಿಲ್ಲುವ ಜನರ ಉಸಿರುಗಟ್ಟಿಸುತ್ತಿವೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದ್ದಾರೆ. ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವ ಕಾರಣ ಮೋಟೆಬೆನ್ನೂರು ಮತ್ತು ಛತ್ರದ ಗ್ರಾಮಸ್ಥರು ಹಲವಾರು ಸಮಸ್ಯೆ ಎದುರಿಸುವಂತಾಗಿದೆ. ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳಿಗೆ ಸಂಗ್ರಹಿಸಿದ ಮೇವು ನೀರು ಪಾಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ಎಡವಟ್ಟುಗಳಿಂದ ಜನರು ಹೈರಾಣಾಗಿದ್ದಾರೆ’ ಎಂದು ಸಮಸ್ಯೆ ತೋಡಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT