ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧದ ನಡುವೆಯೂ ನಿಲ್ಲದ ಭಿಕ್ಷಾಟನೆ

ಜಿಲ್ಲೆಯಲ್ಲಿ ಭಿಕ್ಷುಕರಿಗೆ ಪುನರ್ವಸತಿ ಕೇಂದ್ರವೇ ಇಲ್ಲ: ತುತ್ತು ಅನ್ನಕ್ಕಾಗಿ ನಿರ್ಗತಿಕರ ಅಲೆದಾಟ
Last Updated 8 ಫೆಬ್ರುವರಿ 2021, 4:54 IST
ಅಕ್ಷರ ಗಾತ್ರ

ಹಾವೇರಿ: ಹಾಲು ಕುಡಿಯುವ ಕಂದಮ್ಮಗಳನ್ನು ಎದೆಗಪ್ಪಿಕೊಂಡು ಬೇಡುವ ತಾಯಂದಿರು, ಇಳಿವಯಸ್ಸಿನಲ್ಲಿ ದೇಗುಲಗಳ ಮುಂದೆ ಕೈಯೊಡ್ಡುವ ಮುದುಕಿಯರು, ಪೆಟ್ರೋಲ್‌ ಬಂಕ್‌, ಬಸ್‌ ನಿಲ್ದಾಣಗಳಲ್ಲಿ ಪ್ಯಾಂಟ್‌ಗಳನ್ನು ಜಗ್ಗಿ ಕಾಸು ಕೇಳುವ ಮಕ್ಕಳು, ಊಟ–ನೀರು ಸಿಗದೆ ನಿತ್ರಾಣವಾಗಿ ರಸ್ತೆಬದಿಯಲ್ಲೇ ಮಲಗಿರುವ ವಯೋವೃದ್ಧರು... ಇವು ಹಾವೇರಿ ಜಿಲ್ಲೆಯ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಕಂಡುಬರುವ ಭಿಕ್ಷಾಟನೆಯ ವಿವಿಧ ದೃಶ್ಯಗಳು.

ಭಿಕ್ಷಾಟನೆ ಅಪರಾಧವೆಂದು ಘೋಷಿಸಿ ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನು (ಪ್ರೊಹಿಬಿಷನ್‌ ಆಫ್ ಬೆಗ್ಗರಿ ಆ್ಯಕ್ಟ್‌–1975)ರಾಜ್ಯದಲ್ಲಿಜಾರಿಯಲ್ಲಿದೆ. ಜತೆಗೆ,ಭಿಕ್ಷುಕರಿಗೆ ಊಟ, ವಸತಿ, ವೃತ್ತಿ ತರಬೇತಿ ನೀಡಿ ಮುಖ್ಯವಾಹಿನಿಗೆ ತರಬೇಕಾದ ದೊಡ್ಡ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮೇಲಿದೆ. ಆದರೆ, ಜಿಲ್ಲೆಯಲ್ಲಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ‘ಪರಿಹಾರ ಕೇಂದ್ರ’ಗಳೇ ಇಲ್ಲ ಎಂಬುದು ವಿಷಾದನೀಯ ಸಂಗತಿ.

ಪರಿಹಾರ ಮರೀಚಿಕೆ:

ಹಾವೇರಿ ಮತ್ತು ರಾಣೆಬೆನ್ನೂರು ನಗರಸಭೆಯಿಂದ ದೀನದಯಾಳ್‌ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ‘ನಗರ ವಸತಿ ರಹಿತರಿಗೆ ಆಶ್ರಯ ನಿರ್ವಹಣೆ ಕೇಂದ್ರ’ಗಳನ್ನು ತೆರೆಯಲಾಗಿದೆ. ಬಸ್‌ ತಪ್ಪಿಸಿಕೊಂಡವರು, ಕೂಲಿ ಸಿಗದೆ ಪರದಾಡುವ ವಲಸೆ ಕಾರ್ಮಿಕರು, ಮನೆ ಬಿಟ್ಟು ಬಂದವರು, ನಿರ್ಗತಿಕರು ಇಲ್ಲಿ ತಾತ್ಕಾಲಿಕ ಆಶ್ರಯ ಪಡೆದು ಊರುಗಳಿಗೆ ತೆರಳುತ್ತಾರೆ. ಆದರೆ, ಭಿಕ್ಷುಕರ ಪಾಲಿಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ.

2011ರಲ್ಲಿ ನಡೆದ ಜನಗಣತಿ ಪ್ರಕಾರ ದೇಶದಲ್ಲಿರುವ 17.97 ಕೋಟಿ ಕುಟುಂಬಗಳಲ್ಲಿ 6.69 ಲಕ್ಷ ಕುಟುಂಬಗಳು ಭಿಕ್ಷಾಟನೆ ಮಾಡಿ ಬದುಕುತ್ತಿವೆ. ರಾಜ್ಯದಲ್ಲಿ 9,650 ಕುಟುಂಬಗಳಿವೆ. ದೇವರ ಹೆಸರಿನಲ್ಲಿ ಕಾಣಿಕೆ ಕೇಳುವುದು, ಚಿಕಿತ್ಸೆಗಾಗಿ ಹಣ ಬೇಡುವುದು, ಊಟಕ್ಕಾಗಿ ಕಾಸು ಕೇಳುವುದು, ಪುಟ್ಟ ಕಂದಮ್ಮಗಳನ್ನು ತೋರಿಸಿ ಊಟ, ಬಟ್ಟೆ ಕೇಳುವುದು.. ಹೀಗೆ ತರಹೇವಾರಿ ರೀತಿಯಲ್ಲಿ ಭಿಕ್ಷಾಟನೆ ನಡೆಯುತ್ತದೆ.

ಧಾರವಾಡಕ್ಕೆ ರವಾನೆ:

ಜಿಲ್ಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಅಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದು, ಧಾರವಾಡದ ರಾಯಪುರದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಭಿಕ್ಷುಕರಿಗೆ ಕೆಲವರು ಮಾನವೀಯತೆಯಿಂದ ಹಣ ನೀಡಿದರೆ, ಇನ್ನು ಕೆಲವರು ಮುಖ ಸಿಂಡರಿಸಿಕೊಂಡು ಮುಂದೆ ಹೋಗು ಎಂದು ಬೈಯುತ್ತಾರೆ. ಕಾನೂನು ಪರಿಪಾಲನೆ ಜತೆಗೆ ಮಾನವೀಯತೆ ಮೆರೆಯಬೇಕಿದ್ದ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪ.

ದೇಗುಲಗಳ ಬಳಿ ಭಿಕ್ಷುಕರ ದಂಡು:

ರಾಣೆಬೆನ್ನೂರು ನಗರದ ದೊಡ್ಡಪೇಟೆ, ಮೆಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನದ ಬಳಿ ಪ್ರತಿ ಮಂಗಳವಾರ, ಶುಕ್ರವಾರ ಭಿಕ್ಷುಕರು ಇರುತ್ತಾರೆ. ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ಇತರೆ ಜಾತ್ರೆ ಹಬ್ಬ ಹರಿದಿನಗಳಲ್ಲಿ ಭಿಕ್ಷುಕರು ಹೆಚ್ಚಾಗಿ ಕಾಣ ಸಿಗುತ್ತಾರೆ. ಹಲಗೇರಿ ವೃತ್ತ, ಬಸ್‌ ನಿಲ್ದಾಣ, ಸುತ್ತಮುತ್ತಲಿನ ಹೊಟೇಲ್‌ ಮುಂದೆ ರಸ್ತೆ ಬದಿ ಅಂಗವಿಕಲರು ನಿತ್ಯ ಭಿಕ್ಷೆ ಬೇಡುತ್ತಾರೆ.

‘ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಭಿಕ್ಷುಕರು ಸಂಖ್ಯೆ ಹೆಚ್ಚಾಗಿದೆ. ನಿತ್ಯ ಪೇಟೆಗೆ ಬಂದು ಭಿಕ್ಷೆ ಬೇಡಿ ಜೀವನ ನಡೆಸುತ್ತಾರೆ. ಯಾವುದೇ ಮೂಲಸೌಲಭ್ಯವಿಲ್ಲದೇ ಅನೇಕ ವರ್ಷಗಳಿಂದ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಈಚೆಗೆ ಅತಿವೃಷ್ಟಿಗೆ ಗುಡಿಸಲುಗಳು ಮಳೆ–ಗಾಳಿಗೆ ತೂರಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು’ ಎನ್ನುತ್ತಾರೆ ಕೃಷ್ಣಮೂರ್ತಿ ಲಮಾಣಿ.

ಹಿರೇಕೆರೂರ ಪಟ್ಟಣದಲ್ಲಿ ಸಂತೆಯ ದಿನವಾದ ಸೋಮವಾರ ಹೊರತುಪಡಿಸಿದರೆ ಭಿಕ್ಷುಕರ ಸಂಖ್ಯೆ ತೀರಾ ವಿರಳ. ಪಟ್ಟಣ ಪಂಚಾಯ್ತಿ ದಾಖಲೆಗಳ ಪ್ರಕಾರ ಪಟ್ಟಣದಲ್ಲಿ ಭಿಕ್ಷುಕರೇ ಇಲ್ಲ. ಆದರೆ, ಬಸ್ ನಿಲ್ದಾಣದ ಸುತ್ತಮುತ್ತ ನಿತ್ಯ ಏಳೆಂಟು ಭಿಕ್ಷುಕರನ್ನು ಕಾಣಬಹುದು. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಈಗ ಮನೆ ಬಿಟ್ಟು ನಿತ್ಯ ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ವ್ಯಾಪಾರಿ ಶಂಕರ್ ಶೆಟ್ಟಿ ತಿಳಿಸಿದರು.

ಬ್ಯಾಡಗಿ ಪಟ್ಟಣದಲ್ಲಿ ಭಿಕ್ಷುಕರ ಸಂಖ್ಯೆ ವಿರಳವಾಗಿದೆ. ಶನಿವಾರ ಆಂಜನೇಯ ದೇವಸ್ಥಾನದ ಎದುರು ಬೆರಳೆಣಿಕೆಯ ಸಂಖ್ಯೆಯ ಭಿಕ್ಷುಕರು ಇರುತ್ತಾರೆ. ಗುರುವಾರ ಹಾಗೂ ಸೋಮವಾರ ಬೇರೆ ಊರುಗಳಿಂದ ಭಿಕ್ಷೆ ಬೇಡಲು ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಾರೆ. ಮೆಣಸಿನಕಾಯಿ ಸಂಗ್ರಹಿಸಿ ಸಂಜೆ ಅದನ್ನು ಮಾರಾಟ ಮಾಡಿ ಹೋಗುವ ಪರಿಪಾಠ ಹೊಂದಿದ್ದಾರೆ.

‘ಹಾನಗಲ್‌ ತಾಲ್ಲೂಕಿನಲ್ಲಿ ಭಿಕ್ಷುಕರಿಗಾಗಿ ಪುನರ್ವಸತಿ ಕೇಂದ್ರಗಳು ಇಲ್ಲ. ಈ ಕುರಿತು ಪುರಸಭೆಯಿಂದ ಯಾವುದೇ ವಿಶೇಷ ಯೋಜನೆಗಳು ಇಲ್ಲ. ಭಿಕ್ಷುಕರ ಕೌಶಲಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವಂಥ ಅನುದಾನವೂ ಪುರಸಭೆಯಲ್ಲಿ ಇಲ್ಲ’ ಎನ್ನುತ್ತಾರೆಹಾನಗಲ್‌ ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌. ಬಜಕ್ಕನವರ್.

ಭಿಕ್ಷಾಟನೆಯೇ ಜೀವನಕ್ಕೆ ಆಧಾರ!

ರಟ್ಟೀಹಳ್ಳಿ ಪಟ್ಟಣದ ತುಳಾಜಾಭವಾನಿ ಹಾಗೂ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಒಂದಿಬ್ಬರು ಭಿಕ್ಷೆ ಬೇಡುತ್ತಾರೆ. ಉಳಿದಂತೆ ಪಟ್ಟಣದಲ್ಲಿ ಶುಕ್ರವಾರ ದಿನ ಸಂತೆ ದಿನವಾಗಿದ್ದು, ಅಂದು ಭಿಕ್ಷಕರು ಮನೆ ಹಾಗೂ ಅಂಗಡಿಗಳ ಮುಂದೆ ನಿಂತು ಭಿಕ್ಷೆ ಬೇಡುತ್ತಾರೆ.

‘ನನ್ನ ಮಗ ಕೂಲಿ ಕೆಲಸ ಮಾಡುತ್ತಾನೆ. ಅವನು ದುಡಿದ ಹಣವನ್ನು ಕುಡಿತಕ್ಕೆ ಹಾಕುತ್ತಾನೆ. ಸಂತೆ ದಿನ ಭಿಕ್ಷಾಟನೆಯಿಂದ ಸುಮಾರು ₹150 ಸಂಗ್ರಹವಾಗುತ್ತದೆ. ಕೆಲವರು ಹಣದ ಜತೆಗೆ ತರಕಾರಿಗಳನ್ನೂ ನೀಡುತ್ತಾರೆ. ಇದರಿಂದ ನನ್ನ ಜೀವನ ಸಾಗಬೇಕು. ಸರ್ಕಾರದಿಂದ ದೊರೆಯುವ ವೃದ್ಧಾಪ್ಯ ವೇತನ ಸರಿಯಾದ ಸಮಯಕ್ಕೆ ಬರುವುದಿಲ್ಲ’ ಎಂದು ವಯೋವೃದ್ಧ ಮಲ್ಲಪ್ಪ ಅಳಲು ತೋಡಿಕೊಂಡರು.

ಮಾನವೀಯತೆ ಮೆರೆದ ವೈದ್ಯ ದಂಪತಿ

ಬೀದಿ ಬದಿಯಲ್ಲಿ ಅತಂತ್ರವಾಗಿ ಬದುಕುತ್ತಿರುವ ನಿರ್ಗತಿಕರು, ಭಿಕ್ಷುಕರು, ಅನಾಥರಿಗೆ ಶಿಗ್ಗಾವಿ ಪಟ್ಟಣದ ಮೃತ್ಯುಂಜಯ ಆಸ್ಪತ್ರೆಯ ಡಾ.ಎಂ.ಎಂ. ತಿರ್ಲಾಪುರ ಮತ್ತು ಡಾ.ರಾಣಿ ತಿರ್ಲಾಪುರ ದಂಪತಿ ಉಚಿತವಾಗಿ ಚಿಕಿತ್ಸೆ ನೀಡಿ ಉಪಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ನಿತ್ಯ ವೈದ್ಯಕೀಯ ಕೆಲಸ ಮಾಡುವ ಜತೆಗೆ ಅನಾಥಾಶ್ರಮ ತೆರೆದು ಸುಮಾರು 12 ಮಂದಿ ಅನಾಥ, ನಿರ್ಗತಿಕರಿಗೆ ಉಚಿತವಾಗಿ ಆಶ್ರಯ ನೀಡಿದ್ದೇವೆ. ಅನಾಥಾಶ್ರಮಕ್ಕೆ ಬರುವ ಅನಾಥ, ನಿರ್ಗತಿಕರಿಂದ ಯಾವುದೇ ಹಣ ಪಡೆದಿಲ್ಲ. ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ನಾವು ಶ್ರಮವಹಿಸಿ ದುಡಿದು ಗಳಿಸಿದ ಹಣದಲ್ಲಿ ಅಸಹಾಯಕರಿಗೆ ನೆರವು ನೀಡುತ್ತಿರುವ ಕೆಲಸ ತೃಪ್ತಿ ಕೊಟ್ಟಿದೆ’ ಎಂದು ಡಾ.ರಾಣಿ ತಿರ್ಲಾಪುರ ಮತ್ತು ಡಾ.ಎಂ.ಎಂ.ತಿರ್ಲಾಪುರ ದಂಪತಿ ಹೇಳಿದರು.

ಭಿಕ್ಷೆ ಬೇಡುವ ಮಕ್ಕಳನ್ನು ಗುರುತಿಸಿ, ಅವರಿಗೆ ‘ಟೆಂಟ್‌ ಶಾಲೆ’ ತೆರೆದು ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
– ರವೀಂದ್ರಗೌಡ ಪಾಟೀಲ, ರೈತ ಮುಖಂಡ, ರಾಣೆಬೆನ್ನೂರು

ನಿರ್ಗತಿಕರಿಗೆ ರಾತ್ರಿ ಹೊತ್ತು ಉಳಿದುಕೊಳ್ಳಲು ‘ಆಶ್ರಯ ನಿರ್ವಹಣಾ ಕೇಂದ್ರ’ದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಹಾಸಿಗೆ, ಹೊದಿಕೆ, ಊಟ, ತಿಂಡಿ ಕೊಡುತ್ತೇವೆ.
– ಡಾ.ಮಹಾಂತೇಶ ಎನ್‌, ನಗರಸಭೆ ಪೌರಾಯುಕ್ತ, ರಾಣೆಬೆನ್ನೂರು

ಆಶ್ರಮದಲ್ಲಿರುವ ವೃದ್ಧರು ಮೃತಪಟ್ಟಾಗ, ಅಂತ್ಯಸಂಸ್ಕಾರಕ್ಕೆ ಕರೆದರೂ ಮಕ್ಕಳು, ಸಂಬಂಧಿಕರು ಬರುವುದಿಲ್ಲ. ಇದು ಮನಸ್ಸಿಗೆ ತುಂಬಾ ನೋವು ಕೊಡುವ ಸಂಗತಿ.
– ಡಾ.ರಾಣಿ ತಿರ್ಲಾಪುರ, ಮೃತ್ಯುಂಜಯ ಆಸ್ಪತ್ರೆ ಶಿಗ್ಗಾವಿ.

ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕಾಗಿ ಭೂವೀರಾಪುರ ಬಳಿ 10 ಎಕರೆ ಜಾಗ ಗುರುತಿಸಿದ್ದೇವೆ. ಸರ್ಕಾರದಿಂದ ಮಂಜೂರಾತಿ ಸಿಕ್ಕಿದ ನಂತರ ಕಟ್ಟಡ ನಿರ್ಮಾಣ ಮಾಡುತ್ತೇವೆ.
– ಜಗದೀಶ ಹುಬ್ಬಳ್ಳಿ, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT