ಸೋಮವಾರ, ಜುಲೈ 4, 2022
20 °C
ನೀರಿನ ಸಂಪರ್ಕವಿಲ್ಲದೇ ಪಾಳುಬಿದ್ದ ಶೌಚಾಲಯ: ಕೋಚ್‌ಗಳ ಕೊರತೆಯಿಂದ ಸೊರಗಿದ ಕ್ರೀಡೆ

ಬ್ಯಾಡಗಿ ಕ್ರೀಡಾಂಗಣಕ್ಕೆ ಕಾವಲುಗಾರನೇ ದಿಕ್ಕು!

ಪ್ರಮೀಳಾ ಹುನಗುಂದ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ‘ಒಣ ಮೆಣಸಿನಕಾಯಿ’ ಬಳಿಕ ಕಬಡ್ಡಿ ಆಟಕ್ಕೆ ಉತ್ತಮ ಹೆಸರು ಮಾಡಿರುವ ಬ್ಯಾಡಗಿ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ತಾಲ್ಲೂಕು ಕ್ರೀಡಾಂಗಣ ಇಲ್ಲದಿರುವುದು ದುರ್ದೈವದ ಸಂಗತಿ.

ಕುಡಿಯುವ ನೀರು, ಕ್ರೀಡಾ ಸಾಮಗ್ರಿ, ಕಾಂಪೌಂಡ್‌, ಪ್ರೇಕ್ಷಕರ ಗ್ಯಾಲರಿ, ಶೌಚಾಲಯದ ಜೊತೆಗೆ ಕಬಡ್ಡಿ ತರಬೇತುದಾರರ ಕೊರತೆಯನ್ನು ಎದುರಿಸುತ್ತಿದೆ. 7.18 ಎಕರೆ ವಿಸ್ತೀರ್ಣ ಹೊಂದಿರುವ ಕ್ರೀಡಾಂಗಣ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸ್ವಾಧೀನದಲ್ಲಿದ್ದರೂ, ಅದರ ಪ್ರಗತಿ ಕುಂಟುತ್ತಾ ಸಾಗಿದೆ.

‘ಕೇವಲ ವಾಚ್‌ಮನ್ ಮೇಲೆ ಕ್ರೀಡಾಂಗಣ ಉಸ್ತುವಾರಿ ನಡೆಯುತ್ತಿದೆ. ದಿನದ 24 ಗಂಟೆಯೂ ಒಬ್ಬನೇ ಕಾವಲುಗಾರಿ ನೋಡಿಕೊಳ್ಳಬೇಕು. ಸ್ವಚ್ಛತೆ, ನಿರ್ವಹಣೆ, ಕ್ರೀಡಾ ಚಟುವಟಿಕೆಗಳ ಮೇಲ್ವಿಚಾರಣೆ ಎಲ್ಲವನ್ನೂ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಈತನೇ ನೋಡಿಕೊಳ್ಳಬೇಕು. ಒಂದೇ ಒಂದು ಕಾಯಂ ಸಿಬ್ಬಂದಿಯಿಲ್ಲ’ ಎಂದು ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಸಂಸ್ಥೆ ಖಜಾಂಚಿ ಗಂಗಣ್ಣ ಎಲಿ ಅಸಮಾಧಾನ ವ್ಯಕ್ತಪಡಿಸಿದರು. 

ಕ್ರೀಡಾಂಗಣಕ್ಕೆ ಭದ್ರತೆಯಿಲ್ಲದ ಕಾರಣ ಸಂಜೆಯಾದರೆ ಅನೈತಿಕ ಚಟುವಟಿಕೆಯ ತಾಣವಾಗುತ್ತದೆ. ಪೆವಿಲಿಯನ್ ಬ್ಲಾಕ್ ನಿರ್ಮಿಸಿದ್ದು, ಅದಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಶೌಚಾಲಯಗಳಿದ್ದರೂ ನೀರಿನ ಕೊರತೆಯಿಂದ ಅವುಗಳು ಬಳಕೆಗೆ ಲಭ್ಯವಿಲ್ಲ.

ಮಹಿಳಾ ತರಬೇತುದಾರರಿಲ್ಲ: ‘ಕೋವಿಡ್ ನೆಪದಲ್ಲಿ ಮಹಿಳಾ ಕಬಡ್ಡಿ ತರಬೇತುದಾರರನ್ನು ವಾಪಸ್‌ ಪಡೆದಿದ್ದರಿಂದ ಈಗ ಯಾವುದೇ ಕ್ರೀಡಾ ಚಟುವಟಿಕೆ ನಡೆಯುತ್ತಿಲ್ಲ. ಕೇವಲ ವಾಚ್‌ಮನ್ ಮೇಲೆ ಕ್ರೀಡಾಂಗಣ ಉಸ್ತುವಾರಿ ನಡೆಯುತ್ತಿದೆ. ಸ್ವಚ್ಛತೆ, ನಿರ್ವಹಣೆ ಸೇರಿದಂತೆ ಎಲ್ಲವನ್ನೂ ದಿನದ 24 ಗಂಟೆ ಈತನೇ ನೋಡಿಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ’ ಎಂದು ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಸಂಸ್ಥೆ ಖಜಾಂಚಿ ಗಂಗಣ್ಣ ಎಲಿ ಅಸಮಾಧಾನ ವ್ಯಕ್ತಪಡಿಸಿದರು. 

ಪ್ರೊ ಕಬಡ್ಡಿ ಆರಂಭವಾದಾಗಿನಿಂದ ಕಬಡ್ಡಿ ಆಟಕ್ಕೆ ಹೊಸತನ ದೊರೆತಿದೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕಬಡ್ಡಿ ಆಟಕ್ಕೆ ಮ್ಯಾಟ್‌ ಬಳಸಲಾಗುತ್ತದೆ. ತಾಲ್ಲೂಕು ಕೇಂದ್ರಗಳಲ್ಲಿ ಲಭ್ಯತೆ ಇಲ್ಲ ಎಂದು ರಚನಾ ಸಣ್ಣಕ್ಕಿ ಅಸಮಾಧಾನ ವ್ಯಕ್ತಪಡಿಸಿದರು.

ದೀಪದ ಬುಡದಲ್ಲೇ ಕತ್ತಲು: ಕ್ರೀಡಾಂಗಣದ ಪಕ್ಕದಲ್ಲಿ ಪುರಸಭೆ ಇದ್ದರೂ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ವಾಯು ವಿಹಾರಕ್ಕೆ ಬರುವವರು ಹಾಗೂ ಮಹಿಳಾ ಕ್ರೀಡಾಪಟುಗಳು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ಪೆವೆಲಿಯನ್ ಬ್ಲಾಕ್ ಬಳಿ  ಟ್ಯಾಂಕ್ ಅಳವಡಿಸಿದ್ದರೂ ನಲ್ಲಿಗಳು ಕಿತ್ತು ಹೋಗಿದ್ದು, ನೀರು ಸಂಗ್ರಹಕ್ಕೂ ಸಂಚಕಾರ ತಂದಿದೆ. ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಯಲು ರಂಗಮಂದಿರ ಸದಾ ಬಾಗಿಲು ಹಾಕಿರುತ್ತದೆ. ಹೀಗಾಗಿ ಹೆಸರಿಗಷ್ಟೇ ಎಂಬಂತಾಗಿದೆ. 

ಕೆಸರುಗದ್ದೆಯಾಗುವ ಮೈದಾನ: ಮಳೆ ಬಂದರೆ ಕ್ರೀಡಾಂಗಣದಲ್ಲಿ ನೀರು ನಿಂತು ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ನೀರು ಹೊರಗೆ ಹೋಗುವ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಬೇಕಾಗಿದೆ. ಕ್ರೀಡಾಂಗಣದ ಸುತ್ತಲೂ ₹9 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಫೆಡ್‌ ಲೈಟ್‌ ನಿರಂತರ ಉರಿಯುವಂತಾದಲ್ಲಿ ಬೆಳಿಗ್ಗೆ 5 ಗಂಟೆಗೆ ಬರುವ ಕ್ರೀಡಾಂಗಣಕ್ಕೆ ಬರುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಕಬಡ್ಡಿ ಕ್ರೀಡಾಪಟುಗಳಾದ ಪ್ರತೀಕ್ಷಾ ಉಜನಿಕೊಪ್ಪ ಹಾಗೂ ಭೂಮಿಕಾ ಶಿವಪೂಜಿ ಹೇಳಿದರು.

‘ಕಬಡ್ಡಿ ಪಟುಗಳ ಗಣಿ’

90 ದಶಕದವರೆಗೂ ಕಬಡ್ಡಿಗೆ ಹೆಸರಾದ ನವರಂಗ ಹಾಗೂ ನ್ಯಾಷನಲ್ ಯೂತ್‌ ಕ್ಲಬ್‌ಗಳು ಬ್ಯಾಡಗಿ ಹೆಸರನ್ನು ರಾಜ್ಯದಲ್ಲೇ ಉತ್ತುಂಗಕ್ಕೆ ಕೊಂಡೊಯ್ದಿದ್ದವು. 1999ರಲ್ಲಿ ಅಸ್ತಿತ್ವಕ್ಕೆ ಬಂದ ಹಾವೇರಿ ಜಿಲ್ಲಾ ಅಮೇಚೂರ್‌ ಕಬಡ್ಡಿ ಸಂಸ್ಥೆ ಜಿಲ್ಲೆಯಾದ್ಯಂತ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸದಲ್ಲಿ ನಿರತವಾಗಿದೆ.

2002ರಲ್ಲಿ ಶಿಡೇನೂರ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ಮಹಿಳಾ ತಂಡ, 2006ರಲ್ಲಿ ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪುರುಷರ ತಂಡ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದವು.

ಹರೀಶ್ ರಾರಾವಿ, ಸಂತೋಷ್ ಭಜಂತ್ರಿ, ಮಂದಾರ ಶೆಟ್ಟಿ, ಸುಭಾಸ್ ಮಾಳಗಿ, ಮೆಹಬೂಬ್ ಅಗಡಿ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಬ್ಯಾಡಗಿ ಕೇವಲ ಮೆಣಸಿನಕಾಯಿಗಷ್ಟೇ ಅಲ್ಲ, ಕಬಡ್ಡಿಗೂ ಕೂಡ ಪ್ರಸಿದ್ಧಿಯಾಗಿದೆ ಎಂಬುದನ್ನು ಸಾಬೀತು ಪಡಿಸಿದ್ದರು. ‘ಯುಮುಂಬಾ’ ತಂಡವನ್ನು ಮುನ್ನಡೆಸಿದ ಕೀರ್ತಿ ಇಲ್ಲಿಯ ಕ್ರೀಡಾಪಟು ರವೀಂದ್ರ ಶೆಟ್ಟಿ ಅವರಿಗೆ ಸಲ್ಲುತ್ತದೆ. ಕೋಚ್ ಆಗಿದ್ದ ಮಂದಾರ ಶೆಟ್ಟಿ ಕೂಡ ಬ್ಯಾಡಗಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಕುಡಿಯುವ ನೀರು ಸೌಲಭ್ಯಗಳ ಅಗತ್ಯವಿದೆ. ಗೂಡಂಗಡಿ ತೆರವು ಕಾರ್ಯ ನಡೆಯಬೇಕು
- ಈರಣ್ಣ ಬಣಕಾರ, ಪುರಸಭೆ ಸದಸ್ಯ

ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಸ್ಪರ್ಧಿಸಿದ್ದೇವೆ. ಈಗ ತರಬೇತುದಾರರಿಲ್ಲದೆ ಅವಕಾಶ ವಂಚಿತರಾಗುತ್ತಿದ್ದೇವೆ
-ಪವಿತ್ರಾ ವೀರನಗೌಡ್ರ, ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು