ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಸಾಹಿತ್ಯ ಹಬ್ಬ: ದಾರ್ಶನಿಕರ ನೆಲದಲ್ಲಿ ಕನ್ನಡದ ಕಹಳೆ

128 ಎಕರೆಯಲ್ಲಿ ಸಿದ್ಧಗೊಂಡ ಸಮ್ಮೇಳನದ ವೇದಿಕೆ: ಹಾವೇರಿ ನಗರದತ್ತ ಜನಸಾಗರ
Last Updated 5 ಜನವರಿ 2023, 15:20 IST
ಅಕ್ಷರ ಗಾತ್ರ

ಹಾವೇರಿ: ಸಂತ ಶರಣರ ನಾಡು– ಭಾವೈಕ್ಯದ ಬೀಡು ಹಾವೇರಿ ನಗರದಲ್ಲಿ ಜ.6ರಿಂದ ಜ.8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ.

ನಾಡಿನ ನಾಲ್ಕೂ ದಿಕ್ಕಿನಿಂದಲೂ ಕನ್ನಡಾಭಿಮಾನಿಗಳು ನುಡಿಜಾತ್ರೆಗಾಗಿ ಬಸ್– ಕಾರು ಬೈಕುಗಳ ಮೂಲಕ ಹಾವೇರಿ ನಗರದತ್ತ ಬರುತ್ತಿದ್ದು, ಸಮ್ಮೇಳನದ ಮುನ್ನಾ ದಿನವೇ ಎಲ್ಲೆಡೆ ಜನಜಂಗುಳಿ ಕಾಣುತ್ತಿದೆ.

ದಾರ್ಶನಿಕರ ನೆಲದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾವೇರಿ ನಗರದ ಪೂರ್ವ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ಮತ್ತು ಪುಣೆ-ಬೆಂಗಳೂರು ಬೈಪಾಸ್ ಹತ್ತಿರದಲ್ಲಿನ ಅರಟಾಳು ರುದ್ರಗೌಡರ ಮಹಾದ್ವಾರದಿಂದ ರಸ್ತೆ ಇಕ್ಕೆಲಗಳಲ್ಲಿ ಕನ್ನಡಾಭಿಮಾನಿಗಳನ್ನು ಸ್ವಾಗತಿಸುವಂತೆ ಸಾಲು ಸಾಲು ಕನ್ನಡ ಧ್ವಜಗಳು ಮತ್ತು ಕನ್ನಡ ಸಾಹಿತಿ ದಿಗ್ಗಜರ ಭಾವಚಿತ್ರ ಇರುವ ಬ್ಯಾನರುಗಳು ಎಲ್ಲೆಡೆ ರಾರಾಜಿಸುತ್ತಿವೆ. ಜನ ಪ್ರತಿನಿಧಿಗಳು ಮತ್ತು ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಸ್ವಾಗತ ಕೋರುವ ಬ್ಯಾನರುಗಳು ಸಹ ಎಲ್ಲೆಡೆ ಕಂಡು ಬರುತ್ತಿವೆ.

ಕಣ್ಮನ ಸೆಳೆಯುವ ವರ್ಲಿ ಕಲೆ:

ಪುಣೆ- ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳ ತಿರುವಿನಲ್ಲಿ ಬರೆದ ಸ್ವಾಗತಾಕ್ಷರಗಳು, ಸಾಲು ಮರಗಳು ಮತ್ತು ಗೋಡೆಯ ಮೇಲಿನ ವರ್ಲಿ ಕಲೆಯ ಚಿತ್ತಾರವು ಅಕ್ಷರಶಃ ಕಣ್ಮನ ತಣಿಸುತ್ತಿವೆ.

ಎಲ್ಲೆಡೆ ಪೊಲೀಸ್‌ ಕಾವಲು:

ಮೂರು ದಿನಗಳ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ಪೊಲೀಸ್‌ ವಾಹನಗಳು ನಿಂತಿವೆ.

ಪಾರ್ಕಿಂಗ್‌ಗೆ ಅಗತ್ಯ ವ್ಯವಸ್ಥೆ:

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಕಿ.ಮೀ ದೂರದಲ್ಲಿನ ಜಮೀನಿನಲ್ಲಿ ಬೃಹದಾಕಾರದ ನಾಲ್ಕಾರು ವೇದಿಕೆಗಳು ಸಿದ್ಧಗೊಂಡಿವೆ. ಬೈಪಾಸ್ ನಿಂದ ಎರಡು ಕಿಮೀ ಉದ್ದಕ್ಕೂ ಹುಬ್ಬಳ್ಳಿ ಮಾರ್ಗವಾಗಿ ಬರುವ ಕಾರು, ಬಸ್ ಮತ್ತು ಇನ್ನೀತರ ವಾಹನಗಳಿಗೆ ಪಾಕಿರ್ಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಹಾವೇರಿ ನಗರದಿಂದ ವೇದಿಕೆಯತ್ತ ಬರುವ ವಾಹನಗಳಿಗೆ ಅಜ್ಜಯ್ಯ ಸ್ವಾಮಿ ದೇವಸ್ಥಾನದವರೆಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಕನ್ನಡಮ್ಮನ ಸೇವೆಯಲ್ಲಿ:

ಹಲವಾರು ದಶಕಗಳ ಐತಿಹ್ಯದ ನುಡಿ ಜಾತ್ರೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕನ್ನಡ ಧ್ವಜಗಳ ಮಾರಾಟ ಕಂಡು ಬರುತ್ತಿದೆ. ದೂರದೂರದಿಂದ ಬಂದ ಕನ್ನಡಾಭಿಮಾನಿಗಳು ವೇದಿಕೆ ಅಂದಗೊಳಿಸುವ, ನಾಡಧ್ವಜ ಕಟ್ಟುವ, ವಿದ್ಯುದ್ದೀಪ ಅಳವಡಿಸುವ, ಊಟ ಉಪಹಾರ ಸಿದ್ಧಪಡಿಸುವ ನಾನಾ ಕಾರ್ಯಗಳ ಮೂಲಕ ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.

25ರ ಸಂಭ್ರಮ:

ಹಾವೇರಿ ಜಿಲ್ಲೆಗೆ ಕಳೆದ 25 ವರ್ಷದ ನಂತರ ಈ ಅಕ್ಷರ ಜಾತ್ರೆ ನಡೆಸುವ ಅವಕಾಶ ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಜನರು ನಾಡಹಬ್ಬದ ಸಂಭ್ರಮದಲ್ಲಿದ್ದಾರೆ ಎಂದು ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ, ಚಿಂತಕ ಸತೀಶ ಕುಲಕರ್ಣಿ ಸಮ್ಮೇಳನದ ಕುರಿತು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT