ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ಕನಕನ ಕೋಟೆ ಮಾದರಿಯಲ್ಲಿ ಮುಖ್ಯದ್ವಾರ

ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯಾಸಕ್ತರ ಆಗಮನ– ನಿರ್ಗಮನಕ್ಕೆ 3 ದ್ವಾರ ಬಾಗಿಲು ನಿರ್ಮಾಣ
Last Updated 5 ಜನವರಿ 2023, 14:43 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಜನವರಿ 6,7 ಮತ್ತು 8ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸ್ಥಳದಲ್ಲಿ ‘ಬಾಡದ ಕನಕ ಅರಮನೆ’ ಮಾದರಿಯ ಕೋಟೆ ಬಾಗಿಲು ಶೈಲಿಯಲ್ಲಿ ಸಮ್ಮೇಳನದ ಮುಖ್ಯದ್ವಾರವನ್ನು ನಿರ್ಮಿಸುತ್ತಿರುವುದು ವಿಶೇಷವಾಗಿದೆ.

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ–ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಬರಲಿದ್ದಾರೆ. ಪ್ರಧಾನ ವೇದಿಕೆ (ಕನಕ– ಶರೀಫ–ಸರ್ವಜ್ಞ) ಹಾಗೂ ಎರಡು ಸಮಾನಾಂತರ ವೇದಿಕೆಗಳಿಗೆ (ಪಾಪು–ಚಂಪಾ ವೇದಿಕೆ ಮತ್ತು ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆ) ಜನರು ಆಗಮಿಸಲು ಮತ್ತು ನಿರ್ಗಮಿಸಲು 3 ದ್ವಾರಬಾಗಿಲುಗಳನ್ನು ನಿರ್ಮಿಸಲಾಗುತ್ತಿದೆ.

20 ಅಡಿ ಅಗಲ ಮತ್ತು 15 ಅಡಿ ಎತ್ತರದ ದ್ವಾರಗಳನ್ನು ಒಳಗೊಂಡ ಕೋಟೆ ಬಾಗಿಲನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಥರ್ಮಾಕೋಲ್‌, ಕಬ್ಬಿಣದ ಪೈಪು ಹಾಗೂ ಪ್ಲೈವುಡ್‌ನಿಂದ ನಿರ್ಮಿಸಲಾಗುತ್ತಿದೆ. ಕನಕನ ನಾಡಿಗೆ ಬರುವ ಸಾಹಿತ್ಯಾಸಕ್ತರಿಗೆ ಕನಕ ಅರಮನೆ ಶೈಲಿಯ ಈ ದ್ವಾರಗಳು ಇಷ್ಟವಾಗಲಿವೆ ಎಂಬುದು ಕಲಾವಿದರ ನಂಬಿಕೆ.

ಆಕರ್ಷಕ ಬ್ಯಾಕ್‌ಡ್ರಾಪ್‌:

‘100x80 ಚದರ ಅಡಿಯ ಪ್ರಧಾನ ವೇದಿಕೆಯಲ್ಲಿ 100x20 ಚದರ ಅಡಿಯಲ್ಲಿ ಆಕರ್ಷಕ ‘ಬ್ಯಾಕ್‌ ಡ್ರಾಪ್‌’ ಹಾಕಿ ಅಲಂಕಾರ ಮಾಡಲಾಗುತ್ತಿದೆ. ಮಧ್ಯಭಾಗದಲ್ಲಿ ಸಾಹಿತ್ಯ ಸಮ್ಮೇಳನದ ವಿವರ, ಎಡ ಮತ್ತು ಬಲ ಬದಿಯಲ್ಲಿ ಎರಡು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ ಕನ್ನಡಾಂಬೆ, ಸಮ್ಮೇಳನಾಧ್ಯಕ್ಷ, ಕಸಾಪ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯ ಭಾವಚಿತ್ರ ಹಾಕಲಾಗುತ್ತದೆ. ಸಮ್ಮೇಳನದ ಲಾಂಛನ ವೇದಿಕೆಗೆ ವಿಶೇಷ ಮೆರುಗು ನೀಡಲಿದೆ’ ಎಂದು ಕಲಾವಿದ ಷಹಜಹಾನ್‌ ಮುದಕವಿ ತಿಳಿಸಿದರು.

ಪ್ರಧಾನ ವೇದಿಕೆಯಲ್ಲಿ ಸಂತಶ್ರೇಷ್ಠ ಕನಕದಾಸ, ಭಾವೈಕ್ಯದ ಸಂತ ಶಿಶುನಾಳ ಶರೀಫ ಹಾಗೂ ತ್ರಿಪದಿಗಳ ಕವಿ ಸರ್ವಜ್ಞರ ಭಾವಚಿತ್ರವನ್ನು ಹಾಕಲಾಗುತ್ತದೆ. ವಿಶೇಷವಾಗಿ ಛತ್ರಿ, ಚಾಮರಗಳೂ ಪ್ರಧಾನ ವೇದಿಕೆಗೆ ಮೆರುಗು ನೀಡಲಿವೆ ಎಂದು ಮುದಕವಿ ಹೇಳಿದರು.

50 ಕಲಾವಿದರ ತಂಡ:

ಕಲಾವಿದರಾದ ಷಹಜಹಾನ್‌ ಮುದಕವಿ ಮತ್ತು ಫಕ್ಕಿರೇಶ ಕುಳಗೇರಿ ನೇತೃತ್ವದ 50 ಕಲಾವಿದರ ತಂಡ ಕಳೆದ ಒಂದು ತಿಂಗಳಿಂದ ಹಗಲು–ರಾತ್ರಿ ಸಮ್ಮೇಳನದ ಕಾರ್ಯಕ್ಕಾಗಿ ಶ್ರಮಿಸುತ್ತಿದೆ. ಪರಿಕರಗಳ ಸಂಗ್ರಹ, ವಿನ್ಯಾಸ ಮತ್ತು ನಿರ್ಮಾಣದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. ವೆಲ್ಡರ್ಸ್‌, ಕಾರ್ಪರೆಂಟರ್ಸ್‌, ಡಿಸೈನರ್ಸ್‌, ಪೇಂಟರ್‌ ಹಾಗೂ ಚಿತ್ರಕಲಾವಿದರು ಈ ತಂಡದಲ್ಲಿದ್ದಾರೆ.

ದಸರಾದಲ್ಲಿ ಪ್ರಶಸ್ತಿ:

‘ಗದುಗಿನ ವಿಜಯ ಕಲಾಮಂದಿರದಲ್ಲಿ ಅಧ್ಯಯನ ಮಾಡಿರುವ ಸಮಾನ ಮನಸ್ಕರು ಒಂದೆಡೆ ಸೇರಿ ಹಾವೇರಿ ಸಾಹಿತ್ಯ ಸಮ್ಮೇಳನದ ‘ಆರ್ಟ್‌ ವರ್ಕ್‌’ ಮಾಡುತ್ತಿದ್ದೇವೆ. ಮೈಸೂರು ದಸರಾ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಕಿತ್ತೂರು ಉತ್ಸವ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ವೇದಿಕೆ ನಿರ್ಮಾಣ ಮಾಡಿರುವ ಅನುಭವ ನಮಗಿದೆ. ಮೈಸೂರು ದಸರಾದ ವಸ್ತುಪ್ರದರ್ಶನದ ಮಳಿಗೆಗಳ ವಿನ್ಯಾಸಕ್ಕೆ ಹಲವು ಬಾರಿ ಪ್ರಶಸ್ತಿಗಳು ಬಂದಿವೆ’ ಎಂದು ಕಲಾವಿದ ಫಕ್ಕಿರೇಶ ಕುಳಗೇರಿ ತಿಳಿಸಿದರು.

***

ಹಾವೇರಿ ನೆಲದ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳನ್ನು ತಯಾರಿಸಿದ್ದೇವೆ. ನುಡಿಜಾತ್ರೆಗಾಗಿ ಕಲಾಸೇವೆಯ ಅವಕಾಶ ಸಿಕ್ಕಿರುವುದು ನಮ್ಮ ಸುಯೋಗ
– ಷಹಜಹಾನ್‌ ಮುದಕವಿ, ಕಲಾವಿದ

***

ನಾವು ತಯಾರಿಸಿದ ‘ಕನ್ನಡ ರಥ’ ನಾಡಿನಾದ್ಯಂತ ಸಂಚರಿಸಿ ಜನಮೆಚ್ಚುಗೆ ಗಳಿಸಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥವನ್ನು ವಿಶಿಷ್ಟವಾಗಿ ತಯಾರಿಸುತ್ತಿದ್ದೇವೆ
– ಫಕ್ಕಿರೇಶ ಕುಳಗೇರಿ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT