ಭಾನುವಾರ, ಜನವರಿ 26, 2020
28 °C

ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪ: ಬಸವರಾಜ ಬೊಮ್ಮಾಯಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಒಂದೇ ಕುಟುಂಬಕ್ಕೆ ಅಪ್ಪ, ಮಗ, ಸೊಸೆ ಹೆಸರಿನಲ್ಲಿ ಎರಡು ಮೂರು ಬಾರಿ ಬೆಳೆ ಹಾನಿ ಪರಿಹಾರ ವಿತರಣೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಸಮಿತಿ ಕರೆಸಿ, ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಆದೇಶ ನೀಡಿದರು. 

ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತನಿಖಾ ಸಮಿತಿಯಲ್ಲಿ ಜಿಲ್ಲೆಯ ಯಾವುದೇ ಅಧಿಕಾರಿ ಭಾಗಿಯಾಗುವಂತಿಲ್ಲ. ಸಮಿತಿಗೆ ಮಾಹಿತಿ ಕೊಡಬಹುದು ಅಷ್ಟೆ. ₹174 ಕೋಟಿಯನ್ನು ಕೇವಲ 1,00,768 ರೈತರಿಗೆ ವಿತರಣೆ ಮಾಡಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು. 

‘ಒಂದೇ ಸರ್ವೆ ನಂಬರ್‌ನಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಾಗಿದೆ ಎಂಬು ದೂರು ಕೇಳಿಬಂದಿದೆ. ರಾಜ್ಯ ಸರ್ಕಾರ ನೀಡಿದ ಹಣ, ಅರ್ಹರಿಗೆ ಸರಿಯಾಗಿ ತಲುಪಿಲ್ಲ. ಗ್ರಾಮವಾರು ಪರಿಶೀಲನೆ ನಡೆಸಬೇಕು. ತಪ್ಪು ಮಾಹಿತಿ ನೀಡಿದ್ದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಸೂಚನೆ ನೀಡಿದರು. 

ಏಜೆಂಟರ ಹಾವಳಿ; ಅನರ್ಹರಿಗೆ ಪರಿಹಾರ!

ಜಿಲ್ಲೆಯಲ್ಲಿ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳ ಮಳೆಯಿಂದ 363 ‘ಎ’ ವರ್ಗದ ಮನೆಗಳು, 5,789 ‘ಬಿ’ ವರ್ಗದ ಮನೆಗಳು ಹಾಗೂ 16,747 ‘ಸಿ’ ವರ್ಗದ ಮನೆಗಳು ಸೇರಿದಂತೆ ಒಟ್ಟು 22,899 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು. 

ಬೊಮ್ಮಾಯಿ ಮಾತನಾಡಿ, ‘ಹಾನಿಯಾದ ಮನೆಗಳ ವರ್ಗೀಕರಣ ಮಾಡುವಲ್ಲೂ ವ್ಯತ್ಯಾಸಗಳಾಗಿವೆ. ಈ ಬಗ್ಗೆ ನನಗೆ ಹಲವಾರು ದೂರುಗಳು ಬಂದಿವೆ. ‘ಸಿ’ ಇದ್ದವರನ್ನು ‘ಬಿ’ಗೆ ಸೇರಿಸಲಾಗಿದೆ. ಬೀಳದಿರುವ ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಮಾಡಿ ಪರಿಹಾರ ಪಡೆಯಲಾಗಿದೆ. ಏಜೆಂಟರ ಹಾವಳಿಯಿಂದ ಅನರ್ಹರಿಗೆ ಪರಿಹಾರ ಸಿಕ್ಕಿದೆ. ಬಡವರು, ಅನಕ್ಷರಸ್ಥರು, ಅರ್ಹರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಎಸಿಬಿಯಿಂದ ತನಿಖೆ: ಎಚ್ಚರಿಕೆ

‘ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಿ, ಹಾನಿಯಾದ ಮನೆಗಳ ಬಗ್ಗೆ ಮರು ಪರಿಶೀಲನೆ ಮಾಡಿಸಿ, ನನಗೆ ಸಮರ್ಪಕ ವರದಿ ಕೊಡಿ. ನೀವು ಕೊಟ್ಟಿರುವ ವರದಿ ಸರಿಯಾಗಿದೆ ಎಂದು ನೋಡಲ್‌ ಅಧಿಕಾರಿಗಳು ತಿಳಿಸಿದರೆ, ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ (ಎಸಿಬಿ) ತನಿಖೆ ವಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. 

‘ಡೆಪ್ಯುಟೇಶನ್‌’ ಕ್ಯಾನ್ಸಲ್‌ ಮಾಡಿ:

ಜಿಲ್ಲೆಯಿಂದ ಹೊರ ಜಿಲ್ಲೆಗೆ ‘ಡೆಪ್ಯುಟೇಶನ್‌’ ಮಾಡಿಸಿಕೊಂಡವರನ್ನು ಕೂಡಲೇ ಜಿಲ್ಲೆಗೆ ಕರೆಸಿ. ಇನ್ನು ಮುಂದೆ ಜಿಲ್ಲೆಯಿಂದ ಹೊರಗೆ ಯಾರಿಗೂ ಡೆಪ್ಯುಟೇಶನ್‌ ಕೊಡಬೇಡಿ. ಎಷ್ಟು ಸಿಬ್ಬಂದಿ ಕೊರತೆ ಇದೆ ಎಂಬುದನ್ನು ಕಂದಾಯ ಆಯುಕ್ತರಿಗೆ ವರದಿ ಕಳುಹಿಸಿ, ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ‘ಕೂಡಲೇ ಕ್ರಮ ಕೈಗೊಳ್ಳುತ್ತೇನೆ’ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. 

‘ಮನೆ ಹಾನಿಗೆ ಪರಿಹಾರ ನೀಡುವ ಜತೆಗೆ, ಮನೆ ನಿರ್ಮಾಣ ಕೂಡ ಆಗುವಂತೆ ನೋಡಿಕೊಳ್ಳಬೇಕು. ಒಂದನೇ ಹಂತದ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಎರಡನೇ ಹಂತದ ಹಣ ಬಿಡುಗಡೆ ಮಾಡಬೇಡಿ ಎಂದು ಸೂಚನೆ ನೀಡಿದರು. ನೆರೆ ಹಾನಿ ಸಂಬಂಧ ಕೈಗೊಂಡಿರುವ ದುರಸ್ತಿ ಕಾಮಗಾರಿಗಳ ಪ್ರಗತಿ ಆಶಾದಾಯಕವಾಗಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. 

ಶಾಸಕರಾದ ನೆಹರು ಓಲೇಕಾರ, ಸಿ.ಎಂ.ಉದಾಸಿ, ಅರುಣ್‌ಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸಿಇಒ ರಮೇಶ ದೇಸಾಯಿ, ಎಸ್ಪಿ ಕೆ.ಜಿ.ದೇವರಾಜು ಹಾಗೂ ಜಿ.ಪಂ.ಸ್ಥಾಯಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು