ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲಿ ಕಲಿಯಾಕ ರೊಕ್ಕ ಇಲ್ರಿ..’

ಕೋವಿಡ್‌ಗೆ ಬಲಿಯಾದ ತಂದೆ; ಮಾವಂದಿರ ಆಸರೆಯಲ್ಲಿ ಕುಟುಂಬಸ್ಥರು
ಅಕ್ಷರ ಗಾತ್ರ

ಗುತ್ತಲ: ‘ನಮ್ಮ ತಂದೆ ಸಾವಿನ ನಂತರ ನಮಗೆ ತುಂಬಾ ಕಷ್ಟ ಆಗೈತ್ರಿ. ಮನೆ ಕಟ್ಟಡ ಅರ್ಧಕ್ಕೆ ನಿಂತೈತ್ರಿ. ಟ್ರ್ಯಾಕ್ಟರ್ ಕಂತು ಸಹ ಕಟ್ಟಬೇಕ್ರಿ, ನಮಗೆ ಸಾಲಿ ಕಲಿಯಾಕ ರೊಕ್ಕ ಇಲ್ರಿ, ನಾವು ಎಲ್ಲರೂ ಸಾಲಿ ಬಿಟ್ಟು ನಮ್ಮ ಅವ್ವನ ಜೋಡಿ ಹೊಲಕ್ಕ ಹೋಕೈವ್ರಿ..’

ಹಾವನೂರು ಗ್ರಾಮದಲ್ಲಿ ಎಂಟು ತಿಂಗಳ ಹಿಂದೆ ಕೋವಿಡ್‌ಗೆ ಬಲಿಯಾದ ಮಂಜಪ್ಪ ಭಂಗಿ ಅವರ ಮಗಳು ರಂಜಿತಾಕಣ್ಣಂಚಲ್ಲಿ ನೀರು ತುಂಬಿಕೊಂಡು ತಮ್ಮ ಸಂಕಷ್ಟವನ್ನು ತೋಡಿಕೊಂಡರು.

ಮನೆಯ ಆಧಾರಸ್ತಂಭವಾಗಿದ್ದ ಮಂಜಪ್ಪ ಭಂಗಿ ಅವರ ಸಾವಿನಿಂದ ಈ ಮಧ್ಯಮ ವರ್ಗದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸಾಲಗಾರ ಕಾಟ ತಡೆಯಲಾರದೆ ಮನೆಯಲ್ಲಿದ್ದ ಆಕಳು ಮತ್ತು ಆಡುಗಳನ್ನು ಮಾರಾಟ ಮಾಡಿದ್ದಾರೆ. ಮನೆಯಲ್ಲಿದ್ದ ಅಲ್ಪಸ್ವಲ್ಪ ಬಂಗಾರದ ಒಡವೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ತೀರಿಸುತ್ತಿದ್ದಾರೆ. ಎಮ್ಮೆ ಹಾಲಿನಿಂದ ಬಂದ ಹಣದಿಂದ ಜೀವನ ಸಾಗಿಸುವಂತಾಗಿದೆ ಎಂಬುದು ಕುಟುಂಬಸ್ಥರ ಅಳಲು.

ದ್ವಿತೀಯ ಪಿಯು ಓದುತ್ತಿದ್ದ ಹಿರಿಯ ಮಗಳು ದ್ಯಾಮಕ್ಕ, ಎಸ್ಸೆಸ್ಸೆಲ್ಸಿ ಓದಿರುವ ದ್ವಿತೀಯ ಪುತ್ರಿ ರಂಜಿತಾ, 9ನೇ ತರಗತಿ ಓದುತ್ತಿದ್ದ ನಿಂಗರಾಜ, 5ನೇ ತರಗತಿ ಓದುತ್ತಿದ್ದ ಶಂಕರ ಎಲ್ಲರೂ ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವನ್ನು ಮೊಟಕುಗೊಳಿಸಿ, ಹೊಲದ ಕೆಲಸಕ್ಕೆ ತಾಯಿ ಜೊತೆ ಹೋಗುತ್ತಿದ್ದಾರೆ.

‘ಆಳುಗಳಿಗೆ ಕೂಲಿ ಕೊಡಲು ಹಣ ಇಲ್ಲದ ಕಾರಣ ನಮ್ಮ ತಾಯಿ ಪ್ರೇಮಾ ಜಮೀನಿನ ಕೆಲಸಕ್ಕೆ ಒಬ್ಬರೇ ಹೋಗುತ್ತಾರೆ ಎಂಬ ಕಾರಣಕ್ಕೆ ನಾವು ನಾಲ್ವರು ಮಕ್ಕಳು ತಾಯಿ ಜೊತೆ ಜಮೀನಿನ ಕೆಲಸಕ್ಕೆ ಹೋಗುತ್ತಿದ್ದೇವೆ’ ಎಂದು ಮತ್ತೊಬ್ಬ ಮಗಳು ದ್ಯಾಮಕ್ಕ ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಮಂಜಪ್ಪ ಭಂಗಿ ‘ನರೇಗಾ’ ಯೋಜನೆಯಡಿ ಚರಂಡಿ ಮತ್ತು ಕೃಷಿ ಹೊಂಡವನ್ನು ನಿರ್ಮಾಣ ಮಾಡಿಸಿದ್ದರು. ಇದುವರೆಗೂ ಹಣ ನಮ್ಮ ಕೈ ಸೇರುತ್ತಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೇಳಿದರೆ, ಸಬೂಬು ಹೇಳಿ ಕಳುಹಿಸುತ್ತಾರೆ ಎಂದು ಕುಟುಂಬಸ್ಥರು ದೂರಿದರು.

‘ನಮ್ಮ ಮನೆಗೆ ದಿನಕ್ಕೆ ಮೂರರಿಂದ ನಾಲ್ಕು ಜನ ಸಾಲಗಾರರು ಬರುತ್ತಾರೆ. ನಿಮ್ಮ ತಂದೆ ನಮಗೆ ಹಣ ಕೊಡಬೇಕಾಗಿತ್ತು ಎನ್ನುತ್ತಾರೆ. ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ನಮಗೆ ನೆರವು ನೀಡಿ’ ಎಂದು ಮಂಜಪ್ಪ ಭಂಗಿ ಅವರ ಪತ್ನಿ ಪ್ರೇಮಾ ದುಃಖ ತೋಡಿಕೊಂಡರು.

‘ಸಂಘ ಸಂಸ್ಥೆಗಳಲ್ಲಿ ಸಾಲ ಇದ್ದ ಕಾರಣ ಜಮೀನನ್ನು ಸಹ ಅಡಮಾನವಾಗಿ ಇಡಲಾಗಿದೆ.ನಮ್ಮ ಮಾವನ ಸಾವಿನ ನಂತರ ಅವರ ಮನೆಯ ಕೆಲಸಗಳನ್ನು ಮಾಡುತ್ತಿದ್ದೇವೆ. ಅವರ ಸಮಸ್ಯೆಗೆ ನಮ್ಮ ಕೈಲಾದಷ್ಟು ಸ್ಪಂದನೆ ಮಾಡುತ್ತಿದ್ದೇವೆ’ ಎಂದು ಮಂಜಪ್ಪ ಭಂಗಿ ಅವರ ಅಳಿಯ ಹನುಮಂತ ನಂದ್ಯಾಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT