ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕುಷ್ಠರೋಗ

ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಏರಿಕೆ: ಮಕ್ಕಳನ್ನೂ ಕಾಡುತ್ತಿದೆ ಈ ಸಾಂಕ್ರಾಮಿಕ
Published 18 ಜೂನ್ 2023, 5:56 IST
Last Updated 18 ಜೂನ್ 2023, 5:56 IST
ಅಕ್ಷರ ಗಾತ್ರ

ಹಾವೇರಿ: ದೀರ್ಘಕಾಲಿಕ ಸಾಂಕ್ರಾಮಿಕವಾದ ಕುಷ್ಠರೋಗ ಪ್ರಕರಣಗಳು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. 14 ವರ್ಷದೊಳಗಿನ ಮಕ್ಕಳನ್ನೂ ಈ ರೋಗ ಕಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. 

ಜಿಲ್ಲೆಯಲ್ಲಿ 2017–18ರಲ್ಲಿ 96 ಪ್ರಕರಣಗಳು ಕಂಡು ಬಂದಿದ್ದವು. ನಂತರದ ಎರಡು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದು ತೀವ್ರ ಆತಂಕ ಸೃಷ್ಟಿಸಿದ್ದವು. ಆನಂತರ ಕೊರೊನಾ ಬಂದ ಎರಡು ವರ್ಷ ಅಂದರೆ 2020 ಮತ್ತು 2021ರಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಯಿತು. ಅದಕ್ಕೆ ಕಾರಣ, ಕುಷ್ಠರೋಗ ಪತ್ತೆ ಹಚ್ಚುವುದಕ್ಕೆ ಹೆಚ್ಚಿನ ಒತ್ತು ಸಿಗಲಿಲ್ಲ ಮತ್ತು ಜನರು ಕೂಡ ಸಹಕಾರ ನೀಡಲಿಲ್ಲ. 

ಮಕ್ಕಳಲ್ಲಿ ಹೆಚ್ಚಳ: 2022–23ರಲ್ಲಿ 92 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 85 ವಯಸ್ಕರು ಮತ್ತು 7 ಮಕ್ಕಳು ಕೂಡ ಸೇರಿದ್ದಾರೆ. ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ, ಮಕ್ಕಳ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿರುವುದು ಕಳವಳಕಾರಿ ಅಂಶವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕ್ರಮವಾಗಿ ಶೇ 5.93, ಶೇ 3.84, ಶೇ 5.0, ಶೇ 7.60 ಹೀಗೆ ಪ್ರಮಾಣ ಹೆಚ್ಚಳಗೊಂಡಿದೆ. 

ಕುಷ್ಠ ಅಥವಾ ಹ್ಯಾನ್ಸೆನ್‌ ಕಾಯಿಲೆಯು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2020ರಲ್ಲಿ 139 ದೇಶಗಳಲ್ಲಿ ಒಟ್ಟು 1,27,558 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 15 ವರ್ಷದೊಳಗಿನ 8,629 ಮಕ್ಕಳು ಸೇರಿದ್ದಾರೆ. 

ನನಸಾಗದ ಗಾಂಧೀಜಿ ಕನಸು: ಮಹಾತ್ಮ ಗಾಂಧಿಯವರು ‘ಕುಷ್ಠರೋಗ ಮುಕ್ತ ಭಾರತ’ ನಿರ್ಮಾಣದ ಕನಸು ಕಂಡಿದ್ದರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕುಷ್ಠರೋಗ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಗಾಂಧೀಜಿಯವರ ಪುಣ್ಯತಿಥಿ ಜನವರಿ 30ರಂದೇ ‘ವಿಶ್ವ ಕುಷ್ಠರೋಗ ದಿನ’ವನ್ನು ದೇಶದಾದ್ಯಂತ ಆಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.  

ಗುರುತಿಸುವುದು ಹೇಗೆ?

ಚರ್ಮದ ಮೇಲೆ ತಿಳಿ, ಬಿಳಿ, ತಾಮ್ರ ವರ್ಣದ ಮಚ್ಚೆಗಳಲ್ಲಿ ಭಾಗಶಃ ಅಥವಾ ಸಂಪೂರ್ಣ ಸಂವೇದನೆಯಿಲ್ಲದಿರುವುದು, ಮಚ್ಚೆಗಳ ಮೇಲೆ ದಪ್ಪ ಚರ್ಮ, ಚರ್ಮದ ಮೇಲೆ ಗಂಟುಗಳು, ಬಾಹ್ಯ ನರಗಳು ದಪ್ಪವಾಗುವುದು, ಕಣ್ಣು ಹುಬ್ಬುಗಳ ಕೂದಲು ಉದುರುವುದು, ಮೊಣಕೈ, ಮೊಣಕಾಲು ಅಥವಾ ಪಾದದ ಸುತ್ತಮುತ್ತ ನೋವು, ಕೈ–ಕಾಲು ಪಾದಗಳಲ್ಲಿ ಮರಗಟ್ಟುವಿಕೆ ಇತ್ಯಾದಿ ಕುಷ್ಠರೋಗದ ಲಕ್ಷಣಗಳಾಗಿವೆ. 

ಚಿಕಿತ್ಸೆ ಲಭ್ಯ: ‘ಕುಷ್ಠರೋಗವನ್ನು ಗುಣಪಡಿಸಬಹುದಾಗಿದೆ ಮತ್ತು ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ನೀಡುವುದರಿಂದ ಅದರಿಂದುಂಟಾಗುವ ಅಂಗವೈಕಲ್ಯವನ್ನು ತಡೆಗಟ್ಟಬಹುದು. ಪೌಸಿಬಾಸಿಲ್ಲರಿ (ಪಿ.ಬಿ) ಮತ್ತು ಮಲ್ಟಿ ಬಾಸಿಲರಿ (ಎಂ.ಬಿ) ಎಂದು ಎರಡು ವಿಧಗಳಲ್ಲಿ ಗುರುತಿಸಲಾಗುತ್ತದೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಹಿಂಜರಿಕೆ ಬಿಟ್ಟು, ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಕುಷ್ಠರೋಗದಿಂದ ಗುಣಮುಖರಾಗಬಹುದು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಎಚ್‌.ರಾಘವೇಂದ್ರಸ್ವಾಮಿ.

ಜಿಲ್ಲೆಯಲ್ಲಿ ಕುಷ್ಠರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ. ರೋಗ ಲಕ್ಷಣಗಳಿದ್ದರೆ ಪರೀಕ್ಷಿಸಿಕೊಂಡು ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಿ
– ರಘುನಂದನ ಮೂರ್ತಿ ಜಿಲ್ಲಾಧಿಕಾರಿ

ರೋಗ ಪತ್ತೆಗೆ 3.67 ಲಕ್ಷ ಮನೆಗಳಿಗೆ ಭೇಟಿ

‘ಹಾವೇರಿ ಜಿಲ್ಲೆಯಲ್ಲಿ ಜೂನ್‌ 19ರಿಂದ ಜುಲೈ 6ರ ವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ (ಎಲ್‌.ಸಿ.ಡಿ.ಸಿ) ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ನಿಯೋಜಿಸಿದ್ದ ಆರೋಗ್ಯ ಸಹಾಯಕರು ಆಶಾ ಅಂಗನವಾಡಿ ಮತ್ತು ಸ್ವಯಂ ಸೇವಕರು 3.67 ಲಕ್ಷ ಮನೆಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದಾರೆ’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ತಿಳಿಸಿದರು.  ಒಟ್ಟು 1628 ತಂಡಗಳನ್ನು ರಚಿಸಲಾಗಿದೆ. ವೈದ್ಯಾಧಿಕಾರಿ ಮತ್ತು ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ ನೀಡಲಾಗಿದೆ. ಮನೆಗಳಿಗೆ ಹೋಗುವ ಸ್ವಯಂ ಸೇವಕರು ಕರಪತ್ರ ಹಂಚಿ ಭಿತ್ತಿಪತ್ರ ಪ್ರದರ್ಶಿಸಿ ರೋಗ ಪತ್ತೆ ಹಚ್ಚಲಿದ್ದಾರೆ. ಸಾರ್ವಜನಿಕರು ಹಿಂಜರಿಕೆ ಬಿಟ್ಟು ಪರೀಕ್ಷೆ ಮಾಡಿಸಿಕೊಳ್ಳಬೇಕು. ಶಂಕೆ ಕಂಡುಬಂದರೆ ಹತ್ತಿರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಿ ರೋಗ ಖಚಿತವಾದರೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT