ಬುಧವಾರ, ಜುಲೈ 28, 2021
28 °C
ಇಂದಿನಿಂದ ಸಾರಿಗೆ ಬಸ್‌ ಕಾರ್ಯಾಚರಣೆ: ಸೋಂಕು ನಿವಾರಣೆಗೆ ದ್ರಾವಣ ಸಿಂಪಡಣೆ

ಲಾಕ್‌ಡೌನ್‌: ₹ 28 ಕೋಟಿ ಆದಾಯ ಕಡಿತ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 15 ದಿನಗಳ ‘ಸಾರಿಗೆ ನೌಕರರ ಮುಷ್ಕರ’ (ಏ.7ರಿಂದ ಏ.21) ಹಾಗೂ 55 ದಿನಗಳ ‘ಕೋವಿಡ್‌ ಲಾಕ್‌ಡೌನ್‌’ (ಏ.27ರಿಂದ ಜೂನ್‌ 20) ಈ ಎರಡೂ ಕಾರಣಗಳಿಂದ ಸಾರಿಗೆ ಬಸ್‌ಗಳ ಸಂಚಾರ ರದ್ದುಗೊಂಡು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಾವೇರಿ ವಿಭಾಗಕ್ಕೆ ಬರೋಬ್ಬರಿ ₹28 ಕೋಟಿ ಆದಾಯ ಕಡಿತಗೊಂಡಿದೆ.

ಹಾವೇರಿ ವಿಭಾಗದಲ್ಲಿ ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ಹಾನಗಲ್‌, ಬ್ಯಾಡಗಿ, ಸವಣೂರು ಸೇರಿದಂತೆ ಒಟ್ಟು 6 ಡಿಪೊಗಳಿವೆ. ಈ ಎಲ್ಲ ಡಿಪೊಗಳಿಗೆ ಸಂಬಂಧಿಸಿದಂತೆ 6 ಸ್ಲೀಪರ್‌, 4 ರಾಜಹಂಸ, 30 ಮಿನಿ ಬಸ್‌ ಮತ್ತು 494 ಸಾರಿಗೆ ಬಸ್‌ಗಳಿವೆ. ಲಾಕ್‌ಡೌನ್‌ ಅವಧಿಯಲ್ಲಿ ಈ ಎಲ್ಲ ಬಸ್‌ಗಳ ಸಂಚಾರ ಸಂಪೂರ್ಣ ರದ್ದಾಗಿತ್ತು. 

₹11 ಕೋಟಿ ನಷ್ಟ

ಹಾವೇರಿ ವಿಭಾಗಕ್ಕೆ ನಿತ್ಯ ಸುಮಾರು ₹50 ಲಕ್ಷ ಆದಾಯ ಬರುತ್ತಿತ್ತು. ಬರೋಬ್ಬರಿ 70 ದಿನಗಳ ಸಂಚಾರ ಸ್ಥಗಿತಗೊಂಡ ಕಾರಣ ಹಾವೇರಿ ವಿಭಾಗಕ್ಕೆ ₹11 ಕೋಟಿ ನಷ್ಟವಾಗಿದೆ. ಮೊದಲೇ ನಷ್ಟದ ಸುಳಿಯಲ್ಲಿ ಇದ್ದ ಸಾರಿಗೆ ನಿಗಮಕ್ಕೆ ನೌಕರರ ಮುಷ್ಕರ ಮತ್ತು ಲಾಕ್‌ಡೌನ್‌ನಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಏಪ್ರಿಲ್‌ ಮತ್ತು ಮೇ ಈ ಎರಡೂ ತಿಂಗಳೂ ಸಂಸ್ಥೆಯ ಆದಾಯದ ದೃಷ್ಟಿಯಿಂದ ಉತ್ತಮ ಸೀಸನ್‌. ಕಳೆದ ವರ್ಷ ಸಹ ಕೋವಿಡ್‌ ಲಾಕ್‌ಡೌನ್‌ನಿಂದ 43 ದಿನ ಬಸ್‌ ಸಂಚಾರ ರದ್ದಾಗಿತ್ತು. ಆಗ ಹಾವೇರಿ ವಿಭಾಗಕ್ಕೆ ಬರೋಬ್ಬರಿ ₹24 ಕೋಟಿ ನಷ್ಟವಾಗಿತ್ತು. ಈ ಬಾರಿಯೂ ಈ ಎರಡೂ ತಿಂಗಳು ಬಸ್‌ ಸಂಚರಿಸದ ಕಾರಣ ಸಂಸ್ಥೆಯ ಆದಾಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. 

ಆದಾಯ ಶೂನ್ಯ: ‘ಬಸ್‌ ಸಂಚಾರ ಇರದಿದ್ದರೂ ಸಂಸ್ಥೆಗೆ ಪ್ರತಿ ತಿಂಗಳು ₹8 ಕೋಟಿ ಖರ್ಚು ತಗಲುತ್ತದೆ. ಹಾವೇರಿ ವಿಭಾಗದ 1992 ನೌಕರರ ಅವರ ವೇತನಕ್ಕೆ ಪ್ರತಿ ತಿಂಗಳು ₹6 ಕೋಟಿ ವೆಚ್ಚ ತಗಲುತ್ತದೆ. ಅಪಘಾತ ಪರಿಹಾರಧನ ₹45 ಲಕ್ಷ , ಸಾಲದ ಮೇಲಿನ ಬಡ್ಡಿ ₹19 ಲಕ್ಷ, ಕಟ್ಟಡ ಸವಕಳಿ ವೆಚ್ಚ ₹13 ಲಕ್ಷ ಹಾಗೂ ವಿದ್ಯುತ್‌, ನೀರು ಮತ್ತು ಇತರೆ ಮೂಲಸೌಲಭ್ಯದ ಖರ್ಚುಗಳಿಗೆ ₹64 ಲಕ್ಷ ಭರಿಸಬೇಕು. ಹೀಗಾಗಿ ಕಳೆದ ಎರಡೂವರೆ ತಿಂಗಳಿಂದ ಆದಾಯವಿಲ್ಲದೆ ಸಂಸ್ಥೆಯ ನಿರ್ವಹಣೆ ಮಾಡುವುದು ದೊಡ್ಡ ಸವಾಲು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ ತಿಳಿಸಿದರು. 

ಕೊರೊನಾ ಸ್ಪಂದನ: ಹಾವೇರಿ ವಿಭಾಗದಿಂದ ಒಟ್ಟು ಮೂರು ಬಸ್‌ಗಳನ್ನು ‘ಆಕ್ಸಿಜನ್‌ ಬಸ್’ಗಳನ್ನಾಗಿ ಪರಿವರ್ತಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗಿತ್ತು. ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು ಈ ಮೂರು ತಾಲ್ಲೂಕುಗಳಲ್ಲಿ ಕೆಲದಿನ ಸಂಚರಿಸಿದ ಬಸ್‌ಗಳು, ಈಗ ಬೇಡಿಕೆ ತಗ್ಗಿದ ಕಾರಣ ಮರಳಿ ಡಿಪೋಗೆ ಬಂದಿವೆ. ಸುಮಾರು ₹1.50 ಲಕ್ಷ ವೆಚ್ಚದಲ್ಲಿ ‘ಫಿವರ್‌ ಕ್ಲಿನಿಕ್‌’ ಆಗಿ ಪರಿವರ್ತನೆಗೊಂಡ ಬಸ್‌ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಒಂದು ತಿಂಗಳಿನಿಂದ ಸಂಚರಿಸುತ್ತಿದೆ. ಈ ಬಸ್‌ಗೆ ಚಾಲಕ ಮತ್ತು ಡೀಸೆಲ್‌ ಅನ್ನೂ ಸಂಸ್ಥೆಯಿಂದಲೇ ನೀಡಲಾಗಿದೆ. ಡೀಸೆಲ್‌ಗಾಗಿಯೇ ₹27 ಸಾವಿರ ಖರ್ಚು ಮಾಡಲಾಗಿದೆ ಎಂದು ಜಗದೀಶ ತಿಳಿಸಿದರು. 

120 ಬಸ್‌ ಕಾರ್ಯಾಚರಣೆ 

ಹಾವೇರಿ ಜಿಲ್ಲೆಯಾದ್ಯಂತ ಮೊದಲ ದಿನವಾದ ಸೋಮವಾರ 120 ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಎಲ್ಲ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ‍ಪ್ರಯಾಣಿಕರು ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಸುರಕ್ಷಿತ ಪ್ರಯಾಣ ಮಾಡಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ್ ತಿಳಿಸಿದ್ದಾರೆ. 

ಹುಬ್ಬಳ್ಳಿ, ದಾವಣಗೆರೆ, ಶಿರಸಿ, ಗದಗ ಸೇರಿದಂತೆ ಅಂತರ ಜಿಲ್ಲಾ ಬಸ್‌ಗಳು ಸಂಚರಿಸಲಿವೆ. ಬೆಂಗಳೂರಿಗೆ ಪ್ರಯಾಣ ಮಾಡುವವರು ದಾವಣಗೆರೆವರೆಗೂ ಹೋಗಿ, ಅಲ್ಲಿಂದ ಮತ್ತೊಂದು ಬಸ್‌ ಮೂಲಕ ಸಂಚರಿಸಬಹುದು. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬಸ್‌ಗಳ ಸಂಖ್ಯೆ ಹೆಚ್ಚಿಸುತ್ತೇವೆ. ಎರಡೂ ಕೋವಿಡ್‌ ಲಸಿಕೆ ಪಡೆದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಮೊದಲ ಲಸಿಕೆ ಪಡೆದವರು ಇತ್ತೀಚಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯೊಂದಿಗೆ ಡ್ಯೂಟಿಗೆ ಬರಲು ತಿಳಿಸಲಾಗಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು