ಶನಿವಾರ, ಸೆಪ್ಟೆಂಬರ್ 25, 2021
29 °C
ಹೂಳು ತುಂಬಿದ ಚರಂಡಿಗಳು; ಹದಗೆಟ್ಟ ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕು

ಹಾವೇರಿ: ಅವಳಿ ಬಡಾವಣೆಗಳಲ್ಲಿ ಅಭಿವೃದ್ಧಿ ಗೌಣ

ದುರಗಪ್ಪ ಪಿ.ಕೆಂಗನಿಂಗಪ್ಪನವರ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಲತೇಶ ನಗರ ಮತ್ತು ಮೆಹಬೂಬ್‌ ನಗರ ಎರಡೂ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ಅಭಿವೃದ್ಧಿ ಕಾರ್ಯ ಗೌಣವಾಗಿದೆ. 

ಮಾಲತೇಶ ನಗರದ ಹಲವಾರು ಗಲ್ಲಿಗಳಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣವಾಗಿಲ್ಲ. ಚರಂಡಿಗಳಲ್ಲಿ ಮುಳ್ಳು ಮತ್ತು ಗಿಡಗಂಟಿ ಬೆಳೆದು ನಿಂತಿವೆ. ಚರಂಡಿ ನೀರು ಮುಂದಕ್ಕೆ ಸಾಗದೆ ಅಲ್ಲಿಯೆ ನಿಂತು ಗಬ್ಬು ನಾರುತ್ತಿದೆ.

ಚರಂಡಿ ಮತ್ತು ಮಳೆಯ ನೀರು ಜನವಸತಿ ಪ್ರದೇಶದಲ್ಲಿ ನಿಂತು ಮಲಿನಗೊಂಡು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗಿದೆ. ಸೊಳ್ಳೆಗಳ ಕಾಟಕ್ಕೆ ಅಲ್ಲಿ ವಾಸಿಸುತ್ತಿರುವ ಜನರು ಬೇಸತ್ತಿದ್ದು, ಸಾಂಕ್ರಾಮಿಕ ರೋಗದ ಭಯದ ಭೀತಿಯಲ್ಲಿದ್ದಾರೆ. 

ಹಲವಾರು ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿದೆ. ಮಳೆಗಾಲದಲ್ಲಿ ಆ ರಸ್ತೆಗಳಲ್ಲಿ ಓಡಾಡುವ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಗತಿ ಹೇಳತೀರದಾಗಿದೆ.

ಮಂಗಗಳ ಹಾವಳಿ: ‘ಈ ಬಡಾವಣೆಯು ಜಮೀನುಗಳ ಪಕ್ಕದಲ್ಲಿರುವುದರಿಂದ ಮಂಗಗಳು ನಗರಕ್ಕೆ ನುಗ್ಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುತ್ತವೆ. ಮಂಗಗಳ ಕಾಟಕ್ಕೆ ಮನೆಯ ಎದುರಿಗಿರುವ ಗಿಡಗಳನ್ನು ಕಡಿದು ಹಾಕುವ ಪರಿಸ್ಥಿತಿ ಬಂದಿದೆ’ ಎಂದು ನಿವಾಸಿ ರಾಜು ಕೂಡಲಮಠ ಸಮಸ್ಯೆ ತೋಡಿಕೊಂಡರು. 

ಮೆಹಬೂಬ್‌ ನಗರ ಎಂದರೆ ನೆನಪಿಗೆ ಬರುವುದು ಕೊಳಚೆ ಪ್ರದೇಶ. ಅಲ್ಲಿ ಯಾವುದೇ ರೀತಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಚರಂಡಿಗಳು ಗಬ್ಬು ನಾರುತಿವೆ. ಎಲ್ಲ ಚರಂಡಿಗಳು ಹಂದಿಗಳ ತಾಣವಾಗಿವೆ. ಪ್ರತಿ ಚರಂಡಿಗಳಲ್ಲಿ ಹೂಳು ತುಂಬಿದ್ದು, ಬಳ್ಳಿಗಳು ಬೆಳೆದು ನಿಂತಿವೆ.

ಹದಗೆಟ್ಟ ರಸ್ತೆಗಳು: ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದು ಕೂಡ ದುಸ್ತರ. ಚರಂಡಿಗಳ ಮೇಲೆ ಬೆಳೆದಿರುವ ಗಿಡ ಬಳ್ಳಿಗಳು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಹಾವುಗಳ ಕಾಟಕ್ಕೆ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಮಕ್ಕಳನ್ನು ಬೀದಿಯಲ್ಲಿ ಆಟವಾಡಲು ಬಿಡದಂಥ ಪರಿಸ್ಥಿತಿ ಇದೆ. 

ಸೊಳ್ಳೆಗಳ ಹಾವಳಿಯಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಇಲ್ಲಿನ ನಿವಾಸಿಗಳ ಪಾಲಿಗೆ ಮರೀಚಿಕೆಯಾಗಿದೆ. 

ಶೌಚಾಲಯ ಸೌಲಭ್ಯವಿಲ್ಲ: ‘ಮಾಲತೇಶ ನಗರ ಮತ್ತು ಮೆಹಬೂಬ್‌ ನಗರದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯಗಳ ಸೌಲಭ್ಯವಿಲ್ಲ. ಹೀಗಾಗಿ ಬಯಲುಶೌಚಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ’ ಎಂದು ಮಹಿಳೆಯರು ಗೋಳು ತೋಡಿಕೊಂಡರು. 

ಮಾಲತೇಶ ಮತ್ತು ಮೆಹಬೂಬ್‌ ನಗರಕ್ಕೆ ಮೂಲಸೌಲಭ್ಯಗಳನ್ನು ಒದಗಿಸಬೇಕು. ಇಲ್ಲದಿದ್ದರೆ, ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಆ ಬಡಾವಣೆಗಳ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು