ಹಂಸಬಾವಿ: ‘ಕಾಯಕ ನಿಷ್ಠೆಯು ಮನುಷ್ಯನ ಬದುಕನ್ನು ಹಸನಾಗಿಸುತ್ತದೆ. ಇಂತ ಕಾಯಕ ನಿಷ್ಠಯಲ್ಲಿ ಬದುಕಿದ ಸಜ್ಜಲಗುಡ್ಡದ ಶರಣೆ ನಮಗೆಲ್ಲ ಮಾದರಿ’ ಎಂದು ಹಂಸಬಾವಿಯ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಇಲ್ಲಿನ ಶಿವಯೋಗೀಶ್ವರ ಆಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ‘ಸಜ್ಜಲಗುಡ್ಡದ ಶರಣಮ್ಮ’ ಪುರಾಣ ಪ್ರವಚನದಲ್ಲಿ ಬುಧವಾರ ಮಾತನಾಡಿದರು.
‘ಮನುಷ್ಯನಲ್ಲಿನ ಕಪಟತನದ ಗುಣ ಇತರರಿಗೆ ಕ್ಷಣಿಕ ಕೇಡು ನೀಡಿದರೆ, ಕ್ರಮೇಣ ಅದು ತನ್ನ ಭವಿಷ್ಯವನ್ನೇ ನಾಶ ಮಾಡುತ್ತದೆ. ಸದಾ ಇತರರಿಗೆ ಒಳಿತನ್ನೆ ಬಯಸಬೇಕು. ಎಲ್ಲರೂ ಸಾಧಕರಾಗಲು ಸಾಧ್ಯವಿಲ್ಲ, ಆದರೆ ಶರಣರು ಅಲೌಕಿಕ ಬದುಕಿನಲ್ಲಿ ಕಂಡ ಆನಂದವನ್ನು ಮನುಷ್ಯ ಲೌಕಿಕ ಜೀವನದಲ್ಲಿ ಕಾಣಲು ಸಾಧ್ಯವಿದೆ. ಹೆತ್ತವರ, ಗುರುವಿನ ಹಾರೈಕೆಗಳು ನಮ್ಮ ಜೀವನವನ್ನು ಉಜ್ವಲಗೊಳಿಸುತ್ತವೆ. ಅದನ್ನು ದಿಕ್ಕರಿಸಿದವನು ನಿರ್ನಾಮವಾಗುತ್ತಾನೆ’ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ, ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಷಣ್ಮುಖಯ್ಯ ಮಳೀಮಠ, ಶೇಖರಪ್ಪ ಬಿಷ್ಠಪ್ಪಗೌಡ್ರ, ಶರಣಪ್ಪ ಎಲಿ, ಎಲ್.ಎಚ್.ಪಾಟೀಲ, ಮುತ್ತಪ್ಪ ಬಾಸೂರ, ಮಲ್ಲೇಶಪ್ಪ ಅಸುಂಡಿ, ಎನ್. ಎನ್. ಹೆಡಿಯಾಲ ಹಾಗೂ ಧಾನೇಶ್ವರಿ ಭಜನಾ ಸಂಘದವರು ಇದ್ದರು.