ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಹುರಳಿಕುಪ್ಪಿ– ಕುರುಬರ ಮಲ್ಲೂರ ಮಾರ್ಗದ ಜಮೀನಿನಲ್ಲಿ ಮೆಕ್ಕೆಜೋಳದ ರಾಶಿಗಳು ಬೆಂಕಿಗಾಹುತಿಯಾದ ಪ್ರಕರಣದ ಬಗ್ಗೆ ತಾಲ್ಲೂಕು ಜಂಟಿ ಸಮಿತಿ ಪರಿಶೀಲನಾ ವರದಿ ಸಿದ್ಧಪಡಿಸಿದೆ. 19 ಸಂತ್ರಸ್ತ ರೈತರಿಗೆ ಸೇರಿದ್ದ ₹ 1.20 ಕೋಟಿ ಮೊತ್ತದ 6,000 ಕ್ವಿಂಟಲ್ (600 ಟನ್) ಮೆಕ್ಕೆಜೋಳ ಸುಟ್ಟಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಮೆಕ್ಕೆಜೋಳ ಹೆಚ್ಚಿರುವ ಕಾರಣಕ್ಕೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಬೆಂಬಲ ಬೆಲೆಗಾಗಿ ಹೋರಾಟ ನಡೆಸುತ್ತಿದ್ದ ರೈತರು, ಬೆಲೆ ಹೆಚ್ಚಾದರೆ ಮಾತ್ರ ಮೆಕ್ಕೆಜೋಳ ಮಾರಲು ತೀರ್ಮಾನಿಸಿ ತಮ್ಮೂರಿನಲ್ಲಿಯೇ ತೆನೆ ಸಮೇತ ಮೆಕ್ಕೆಜೋಳದ ರಾಶಿ ಮಾಡಿಟ್ಟಿದ್ದರು.

ಹುರಳಿಕುಪ್ಪಿ– ಕುರುಬರ ಮಲ್ಲೂರ ಮಾರ್ಗದಲ್ಲಿರುವ ಸಮತಟ್ಟಾದ ಜಮೀನಿನಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳದ ರಾಶಿ ಹಾಕಿದ್ದರು. ಇದೇ ಸ್ಥಳದಲ್ಲಿಯೇ ಡಿ. 20ರಂದು ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ, ರೈತರ ಕಣ್ಣೆದುರೇ ಮೆಕ್ಕೆಜೋಳ ಸುಟ್ಟು ಕರಕಲಾಗಿತ್ತು. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು, ಬೆಳೆ ಸಂಪೂರ್ಣ ಸುಟ್ಟಿದ್ದರಿಂದ ಕಂಗಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ, ಪರಿಹಾರದ ಭರವಸೆ ನೀಡಿದ್ದಾರೆ. ಅದರನ್ವಯ ಪರಿಶೀಲನೆ ನಡೆಸಿದ್ದ ಜಂಟಿ ಸಮಿತಿಯ ಸದಸ್ಯರೂ ಆಗಿರುವ ತಹಶೀಲ್ದಾರ್ ರವಿ ಕೊರವರ, ವರದಿಯೊಂದನ್ನು ಸಿದ್ಧಪಡಿಸಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನೀಡಿದ್ದಾರೆ. ಸದ್ಯದಲ್ಲೇ ಜಂಟಿ ಸಮಿತಿ ಸಭೆ ಜರುಗಲಿದ್ದು, ಸಭೆಯಲ್ಲಿ ವರದಿ ಬಗ್ಗೆ ಚರ್ಚೆ ನಡೆಯಲಿದೆ.

‘ಘಟನಾ ಸ್ಥಳ ಹಾಗೂ ರೈತರ ಬಳಿ ಹೋಗಿ, ಮೆಕ್ಕೆಜೋಳ ಸುಟ್ಟಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಅದೇ ವರದಿ ಈಗ ಸಹಾಯಕ ನಿರ್ದೇಶಕರ ಬಳಿಯಿದೆ. ಉಪ ವಿಭಾಗಾಧಿಕಾರಿಯವರು ವರದಿ ಪರಿಶೀಲಿಸಿ, ಜಿಲ್ಲಾಧಿಕಾರಿಗೆ ಕಳುಹಿಸಲಿದ್ದಾರೆ. ಅದಾದ ನಂತರವೇ ರೈತರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗಲಿದೆ’ ಎಂದು ತಹಶೀಲ್ದಾರ್ ರವಿ ಕೊರವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅವಘಡಕ್ಕೆ ಕಾರಣ ನಿಗೂಢ: ಜಮೀನಿನಲ್ಲಿ ಹಲವು ರೈತರು ಸಾಲಾಗಿ ಮೆಕ್ಕೆಜೋಳದ ರಾಶಿ ಮಾಡಿದ್ದರು. ಡಿ. 20ರಂದು ರೈತರೊಬ್ಬರು, ಯಂತ್ರದ ಮೂಲಕ ಮೆಕ್ಕೆಜೋಳವನ್ನು ತೆನೆಯಿಂದ ಬೇರ್ಪಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಯಂತ್ರದಿಂದ ಹಾರಿದ ಬೆಂಕಿ ಕಿಡಿಯಿಂದ ಮೆಕ್ಕೆಜೋಳಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಅಗ್ನಿಶಾಮಕ ದಳದಿಂದಾಗಲೇ ಕಾರಣ ಹೊರಬಿದ್ದಿಲ್ಲ.

ಸವಣೂರು ಠಾಣೆ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದ್ದು, ಇದುವರೆಗೂ ರೈತರಾಗಲಿ ಅಥವಾ ಅಧಿಕಾರಿಗಳಾಗಲಿ ಯಾರೊಬ್ಬರೂ ದೂರು ನೀಡಿಲ್ಲ. ಬೆಂಕಿ ನಂದಿಸಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳಿಂದಲೂ ಜಂಟಿ ಸಮಿತಿ ಸದಸ್ಯರು ಯಾವುದೇ ವರದಿ ಪಡೆದುಕೊಂಡಿಲ್ಲ. ಈ ಬಗ್ಗೆ ಜಂಟಿ ಸಮಿತಿ ಸದಸ್ಯರನ್ನು ಪ್ರಶ್ನಿಸಿದಾಗ, ‘ಮುಂದಿನ ದಿನಗಳಲ್ಲಿ ಸಭೆ ನಡೆಸಿ, ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ನೋಟಿಸ್ ನೀಡಿ ವರದಿ ಪಡೆಯಲಾಗುವುದು’ ಎಂದು ಹೇಳಿದರು.

‘ಅವಘಡ ಬಗ್ಗೆ ಯಾರೂ ದೂರು ನೀಡಿಲ್ಲ. ಪಂಚನಾಮೆ ಮಾಡಲು ಯಾವುದೇ ಕೋರಿಕೆ ಬಂದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಜಂಟಿ ಸಮಿತಿ ಅಧಿಕಾರಿಗಳು, ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ರೈತರಿಗೆ ಪರಿಹಾರ ಮರೀಚಿಕೆಯಾಗುವ ಆತಂಕವೂ ಸಂತ್ರಸ್ತರನ್ನು ಕಾಡುತ್ತಿದೆ.

ಪರಿಹಾರ ಕೊಟ್ಟರಷ್ಟೇ ಜೀವನ: ‘ಮೆಕ್ಕೆಜೋಳ ಸುಟ್ಟಿರುವುದರಿಂದ, ಜೀವನವೇ ಬೇಸರವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ, ಕಣ್ಣೆದುರೇ ಸುಟ್ಟು ಕರಕಲಾಗಿದೆ. ಸೂಕ್ತ ಪರಿಹಾರ ನೀಡದಿದ್ದರೆ, ಆರ್ಥಿಕವಾಗಿ ಜೀವನ ಕಷ್ಟವಾಗಲಿದೆ’ ಎಂದು ರೈತ ಮಹಿಳೆ ಭರಮವ್ವ ಅಳಲು ತೋಡಿಕೊಂಡರು.

‘ಮೆಕ್ಕೆಜೋಳ ಸುಟ್ಟಿರುವುದನ್ನು ಎಲ್ಲರೂ ನೋಡಿಕೊಂಡು ಹೋಗಿದ್ದಾರೆ. ನೋಡುವುದಷ್ಟೇ ಮಾಡಿದರೆ ನಡೆಯುವುದಿಲ್ಲ. ರೈತ ಪರ ಕಾಳಜಿ ಇದ್ದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತ್ವರಿತವಾಗಿ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು.

20 ಸಾವಿರವಷ್ಟೇ ಪರಿಹಾರ?

‘ಮೆಕ್ಕೆಜೋಳ ಸುಟ್ಟಿರುವ ಪ್ರಕರಣದಲ್ಲಿ ಒಬ್ಬ ರೈತರಿಗೆ ಕೇವಲ ₹ 15 ಸಾವಿರದಿಂದ ₹ 20 ಸಾವಿರ ಪರಿಹಾರ ಮಾತ್ರ ಸಿಗಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು. 19 ರೈತರು ₹ 1.20 ಕೋಟಿಯಷ್ಟು ಮೆಕ್ಕೆಜೋಳ ಕಳೆದುಕೊಂಡಿದ್ದಾರೆ. ಒಬ್ಬ ರೈತರಿಗೆ ₹ 20 ಸಾವಿರ ಕೊಟ್ಟರೂ ₹ 3.80 ಲಕ್ಷ ಮಾತ್ರ ಪರಿಹಾರ ಸಿಗುತ್ತದೆ. ಇಷ್ಟು ಕಡಿಮೆ ಪರಿಹಾರ ಯಾವುದಕ್ಕೂ ಸಾಲುವುದಿಲ್ಲವೆಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಿಎಂ ವಿಶೇಷ ಪರಿಹಾರಕ್ಕೆ ಒತ್ತಾಯ

‘ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರು ಖುದ್ದು ಸ್ಥಳಕ್ಕೆ ಬಂದು ಭರವಸೆ ನೀಡಿದ್ದಾರೆ. ಅವರೇ ಆಸಕ್ತಿ ತೋರಿಸಿ ಮುಖ್ಯಮಂತ್ರಿ ಕಡೆಯಿಂದ ವಿಶೇಷ ಪರಿಹಾರ ಕೊಡಿಸಬೇಕು’ ಎಂದು ರೈತರು ಒತ್ತಾಯಿಸುತ್ತಿದ್ದಾರೆ. ‘ಅಲ್ಪಸ್ವಲ್ಪ ಪರಿಹಾರ ನೀಡಿ ಕೈ ತೊಳೆದುಕೊಂಡರೆ ನಾವು ಬಿಡುವುದಿಲ್ಲ. ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಕಾದು ಕಾದು ಈಗ ನಮ್ಮ ಬೆಳೆ ಸುಟ್ಟಿದೆ. ಅವಘಡದಿಂದ ಆರ್ಥಿಕವಾಗಿ ಕಂಗಾಲಾಗಿರುವ ನಾವು ಹೋರಾಟಕ್ಕೂ ಸಜ್ಜಾಗುತ್ತೇವೆ. ಹೀಗಾಗಿ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.